Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹೊಳಲ್ಕೆರೆ ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ದೇವರಹೊಸಹಳ್ಳಿ ಗ್ರಾಮವು ತಾಳಿಕಟ್ಟೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಹೊಳಲ್ಕೆರೆಯಿಂದ 23 ಕಿಲೋಮೀಟರ್ ದೂರ ನೈರುತ್ಯಕ್ಕೆ,
ಹೊಳಲ್ಕೆರೆ – ರಾಮಗಿರಿ-ದೇವರಹೊಸಹಳ್ಳಿ ಮಾರ್ಗದಲ್ಲಿದೆ.

ತಾಲೂಕಿನ ವಿಶಿಷ್ಟ ಗ್ರಾಮಗಳಲ್ಲಿ ಒಂದಾದ ಗ್ರಾಮವು ತನ್ನ ನೈಸರ್ಗಿಕ- ಪ್ರಾಕೃತಿಕ ಸೌಂದರ್ಯದಿಂದ ಮನಸೆಳೆಯುತ್ತದೆ. ಹೊಳಲ್ಕೆರೆ ತಾಲ್ಲೂಕಿನ ನೈರುತ್ಯ ಭಾಗದ ದಕ್ಷಿಣದಿಂದ ಉತ್ತರಕ್ಕೆ ಸಾಗುವ ಬೆಟ್ಟಸಾಲುಗಳಾದ ತುಪ್ಪದಹಳ್ಳಿ ಬೆಟ್ಟಗಳ ಪೂರ್ವದ ವಿಶಾಲ ಬಯಲಿನ ತಪ್ಪಲಲ್ಲಿ ಈ ಗ್ರಾಮವಿದೆ.ಸುತ್ತಲೂ ಮೀಸಲು ಅರಣ್ಯ ಹಾಗೂ ಕುರುಚಲು ಕಾಡು ಕಂಡು ಬರುತ್ತದೆ. ಮಳೆಗಾಲದ ನಂತರ ಸುತ್ತಮುತ್ತಲಿನ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಗ್ರಾಮದ ಪೂರ್ವಕ್ಕೆ ಹೊಸೂರು ಆರ್.ಡಿ.ಕಾವಲು,
ಪಶ್ಚಿಮಕ್ಕೆ ತುಪ್ಪದಹಳ್ಳಿ ಗುಡ್ಡದ ಸಾಲು ,ಉತ್ತರಕ್ಕೆ ತಾಳಿಕಟ್ಟೆ,ದಕ್ಷಿಣದ ಕಡೆಗೆ ಕೆಂಚಾಪುರ, ತುಪ್ಪದಹಳ್ಳಿ.‌‌..ಇದೆ. ಗ್ರಾಮದ ಪಶ್ಚಿಮಕ್ಕೆ ಹನುಮನಕಟ್ಟೆ ಮರಡಿ ,ಕುರೇಬಿತ್ತಿ ಮರಡಿ, ತನುಗುಡ್ಡದ ನೆತ್ತಿ ,ಕರೆಕಲ್ಲು ಗುತ್ತಿ ಬೆಟ್ಟ ಸಾಲುಗಳಿವೆ.

ಈ ಗ್ರಾಮದ ಹಿಂದಿನ ಜನವಸತಿ ಪ್ರದೇಶ ದೇವರಕೆರೆ .
ಈ ದೇವರಕೆರೆ ಗ್ರಾಮವು ಈಗ ಬೇಚರಾಕ್ ಆಗಿದ್ದು,
ಗ್ರಾಮದ ವಾಯುವ್ಯಕ್ಕೆ ಒಂದು ಕಿಲೋಮೀಟರ್ ದೂರದಲ್ಲಿದೆ.
ಐತಿಹಾಸಿಕವಾಗಿರುವ ಈ ದೇವರಕೆರೆ ಹಳ್ಳದ ಹತ್ತಿರದ ಪ್ರದೇಶದಲ್ಲಿದೆ.
ಇಲ್ಲಿಂದ ಗ್ರಾಮವು ದಕ್ಷಿಣದ ಕಡೆಗೆ ಸ್ಥಳಾಂತರವಾಗಿ ಈಗ
ಇರುವ ಜಾಗಕ್ಕೆ ಮುಂದುವರಿದಿದೆ.

ತೀರ್ಥಮಡುವು:
ಗ್ರಾಮದಿಂದ ಅರ್ಧ ಕಿ.ಮೀ ದೂರವಿರುವ ಈ ಜಾಗವು ಧಾರ್ಮಿಕ ಸ್ಥಳವಾಗಿದೆ. ಇದರ ಬಳಿ ಹರಿಯುವ ಹಳ್ಳದ ಜಾಗಕ್ಕೆ ತೀರ್ಥಮಡುವು ಎನ್ನುತ್ತಾರೆ. ಈ ಹಳ್ಳವು ತುಪ್ಪದಹಳ್ಳಿ ಗುಡ್ಡದ ಸಾಲುಗಳಲ್ಲಿ ಹುಟ್ಟುತ್ತದೆ. ಇದೇ ಹರಿದ್ರಾ(ಆರುಂಧತಿ)ನದಿಯ ಮೂಲ ಎಂದು ಬಲ್ಲವರು ಹೇಳುತ್ತಾರೆ.
ಈ ಹಳ್ಳವು ತಾಳಿಕಟ್ಟೆ ಕೆರೆಗೆ ಹರಿದು ಮುಂದೆ ಮಲ್ಲಾಡಿಹಳ್ಳಿ, ರಾಮಗಟ್ಟದ ಮೂಲಕ ಸಾಗಿ ಶಾಂತಿಸಾಗರಕ್ಕೆ ಸೇರುತ್ತದೆ.ಈ ತೀರ್ಥಮಡುವು ಜಾಗವು ಅತ್ಯಂತ ಪವಿತ್ರವಾದ ಧಾರ್ಮಿಕ ಸ್ಥಳವಾಗಿದ್ದು, ಲೋಕಕಲ್ಯಾಣಾರ್ಥಕವಾಗಿ ಹಿಂದೆ ಇಲ್ಲಿ ವಶಿಷ್ಟ ಮುನಿಗಳು ಕೆಲಕಾಲ ತಮ್ಮ ತಪಸ್ಸನ್ನು ಇಲ್ಲಿ ಆಚರಿಸಿದ ಬಗ್ಗೆ ಐತಿಹ್ಯವಿದೆ. ಈ ಜಾಗದ ಬಂಡೆಗಲ್ಲಿನಲ್ಲಿ ಲಿಂಗ ಮೂಡಿರುವ ಜಾಗವಿದ್ದು,ಹತ್ತಿರದಲ್ಲಿ ಮತ್ತೊಂದು ಪುಟ್ಟ ಗುಡಿಯಿದೆ. ಇದರಲ್ಲಿ ಶಿವಲಿಂಗವಿದೆ. ಇದಕ್ಕೆ ಮಹೇಶ್ವರ ಲಿಂಗ ಎನ್ನುತ್ತಾರೆ.ಈ ತೀರ್ಥಮಡುವು ಅತ್ಯಂತ ಪವಿತ್ರವಾದ ಸ್ಥಳವೆಂದು ನಂಬಿಕೆಯಿದೆ. ಎಂತಹ ಬರಗಾಲದಲ್ಲೂ ಈ ಜಾಗದಲ್ಲಿ ನೀರು ಬತ್ತುವುದಿಲ್ಲ ಎಂದು ಹೇಳಲಾಗುತ್ತದೆ.
ಈ ಕ್ಷೇತ್ರಕ್ಕೆ ರಾಮಗಿರಿ ಶ್ರೀ ಕರಿಸಿದ್ಧೇಶ್ವರ ಮೊದಲ್ಗೊಂಡು ಸುತ್ತಮುತ್ತಲಿನ ಮೂವತ್ತಕ್ಕೂ ಅಧಿಕ ಗ್ರಾಮಗಳ ನೂರಾರು ದೇವರುಗಳು ಹೊಳೆ/ಗಂಗಾಪೂಜೆಗೆ ಆಗಮಿಸುತ್ತವೆ.ಮಳೆಬಾರದೇ ಇದ್ದಾಗ, ಶ್ರಾವಣಮಾಸ,ಜಾತ್ರಾ ಸಮಯದಲ್ಲಿ ಒಂದೇ ದಿನದಲ್ಲಿ ನೂರಾರು ದೇವರುಗಳನ್ನು ಭಕ್ತರು ಪಲ್ಲಕ್ಕಿಯಲ್ಲಿ ತರುತ್ತಾರೆ. ಆ ಕಾರಣಕ್ಕೆ ಈ ಗ್ರಾಮಕ್ಕೆ ದೇವರುಗಳು+ಹೊಸದಾಗಿ ನಿರ್ಮಿಸಿದ ಗ್ರಾಮದ ಕಾರಣಕ್ಕೆ ದೇವರಹೊಸಹಳ್ಳಿ ಎಂದು ಹೆಸರು ಬಂದಿದೆ. ‌ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಈ ಜಾಗದಲ್ಲಿ ಕಾರ್ತಿಕೋತ್ಸವ ನಡೆಸಲಾಗುತ್ತದೆ.ಅಂದು ಕೇವಲ ಗಂಡಸರು ಮಾತ್ರ ತೆರಳಿ ಪೂಜೆ ಮಾಡುತ್ತಾರೆ. ಹೆಂಗಸರಿಗೆ ಆ ಒಂದು ದಿನ ಪ್ರವೇಶವಿರುವುದಿಲ್ಲ.

ಗ್ರಾಮದ ಪಶ್ಚಿಮ ಹಾಗೂ ಉತ್ತರದಲ್ಲಿ ಹಳ್ಳಗಳಿದ್ದು,ಇವು ಹತ್ತಿರದ ಗುಡ್ಡಗಳಿಂದ ಸಾಗಿ ಮುಂದೆ ಪಶ್ಚಿಮಕ್ಕೆ ಉತ್ತರದ ತಾಳಿಕಟ್ಟೆ ಕೆರೆಗೆ ಕೂಡುತ್ತವೆ.

ಗ್ರಾಮದಲ್ಲಿರುವ ದೇವಾಲಯಗಳು :

1.ಆಂಜನೇಯಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು ,
ಪಾಳೇಯಗಾರರ ಶೈಲಿಯಲ್ಲಿ 17-18 ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ.
ಗರ್ಭಗೃಹದಲ್ಲಿ ಆಂಜನೇಯಸ್ವಾಮಿಯ 8 ಅಡಿ ಎತ್ತರದ ಶಿಲ್ಪವಿದೆ. ಗರ್ಭಗೃಹ,ಸಭಾಮಂಟಪ ಹಾಗೂ ದೀಪಸ್ತಂಭಗಳಿರುವ ದೇವಾಲಯವಿದು. ಗರ್ಭಗೃಹದ ಬಾಗಿಲುವಾಡದಲ್ಲಿ ವೈಷ್ಣವ ದ್ವಾರಪಾಲಕರ ಉಬ್ಬುಶಿಲ್ಪಗಳಿವೆ. ಸಭಾಮಂಟಪದಲ್ಲಿ ಬಹುಮುಖಗಳಲ್ಲಿ ಕಡೆಯಲಾದ ಕಂಬಗಳಿವೆ.ಈ ಕಂಬಗಳ ಚಚ್ಚೌಕ ಭಾಗಗಳಲ್ಲಿ ವಿವಿಧ ರೀತಿಯ ಉಬ್ಬುಶಿಲ್ಪಗಳಿವೆ. ದೇವಾಲಯದ ಹಿಂಭಾಗದ ಹೊರಗೋಡೆಗಳ ಮೇಲೆ ಮೀನು, ಮೊಸಳೆ , ಜೋಡಿ ಹಾವುಗಳು ಹಾಗೂ ನಾಗರಹಾವಿನ ಉಬ್ಬುಶಿಲ್ಪಗಳಿವೆ. ನೂತನವಾಗಿ ಈ ದೇವಾಲಯಕ್ಕೆ ಇದೀಗ ರಾಜಗೋಪುರವನ್ನು ನಿರ್ಮಾಣ ಮಾಡಲಾಗುತ್ತಿದೆ.ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ. ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇದರ ಬಳಿಯೇ ಉತ್ಸವ ಮೂರ್ತಿಯ ಮಂದಿರವಿದೆ.ಪ್ರಮುಖ ಆಚರಣೆಗಳನ್ನು ಈ ಜಾಗದಿಂದ ಶುರು ಮಾಡಲಾಗುತ್ತದೆ.

 

2. ಈಶ್ವರ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈಶ್ವರ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಉತ್ತರಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಮಾತ್ರ ಇರುವ ದೇವಾಲಯ ಇದಾಗಿದ್ದು
ಈ ದೇವರ ಆಚರಣೆಗಳನ್ನು ಹಾಗೂ ಕೆಂಡೋತ್ಸವ ಪ್ರತಿ ವರ್ಷ ನಡೆಸಲಾಗುತ್ತದೆ.
ಈ ಸಮಯದಲ್ಲಿ ವಿಶೇಷ ಪೂಜೆ ಪ್ರಾರ್ಥನೆಗಳು ನಡೆಯುತ್ತವೆ.

3.ಅರಳಿಮರದಮ್ಮ:
ಅರಳಿಮರವನ್ನು ಒಳಗೊಂಡಂತೆ ನಿರ್ಮಿಸಲಾಗಿರುವ ಕಾರಣಕ್ಕೆ ಈ ಹೆಸರು ಬಂದಿದೆ. ಆವರಣದಲ್ಲಿ ಅರಳಿಮರವಿದ್ದು, ಅದರ ಸುತ್ತಲೂ ನಾಗರಶಿಲ್ಪಗಳಿವೆ.ಈ ಸ್ಥಳದಲ್ಲಿ ಪ್ರತಿ ವರ್ಷ ಕಂತೇಭಿಕ್ಷೆ ಎಂಬ ಸಾಮೂಹಿಕ ಭೋಜನ ಕಾರ್ಯಕ್ರಮ ನಡೆಯುತ್ತದೆ.

4.ಕುಕ್ಕುವಾಡೇಶ್ವರಿ ದೇವಸ್ಥಾನ:
ಆಂಜನೇಯ ಸ್ವಾಮಿ ದೇವಾಲಯದ ಬಲಬದಿಯಲ್ಲಿ ಇರುವ ಕುಕ್ಕುವಾಡೇಶ್ವರಿ ದೇವಾಲಯವು ಗರ್ಭಗೃಹ ಮಾತ್ರ ಇರುವ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಕುಕ್ಕುವಾಡೇಶ್ವರಿ ದೇವಿಯ ಶಿಲ್ಪವಿದೆ.

ಇದರ ಜೊತೆಗೆ ಹಳ್ಳದಮ್ಮ ಹಾಗೂ ಹುಣಸೇಸಿದ್ಧದೇವರ ಗುಡಿಗಳಿದ್ದು,ಈ ಜಾಗದಲ್ಲಿ ಪ್ರತಿ ವರ್ಷ ಪರೇವು ಆಚರಣೆ ನಡೆಸಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...