ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 29 : ಆಹಾರ ಇಲಾಖೆಯ ಗೋದಾಮು ದಾಸ್ತಾನುಗಳಲ್ಲಿ ಮೂರು ಸಾವಿರ ಕ್ವಿಂಟಾಲ್ ಅಕ್ಕಿ ಅಕ್ರಮವಾಗಿ ಮಾರಾಟವಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಬೆಂಗಳೂರು ಜಿಲ್ಲೆ ಆನೆಕಲ್ಲು ತಾಲ್ಲೂಕಿನ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಸೇರಿದ ಮೂರು ಸಾವಿರ ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿರುವುದು ಪಡಿತರ ಚೀಟಿದಾರರಿಗೆ
ವಂಚನೆಯಾದಂತಾಗಿದೆ. ಸಂಬಂಧಪಟ್ಟ ಆಹಾರ ನಿರೀಕ್ಷಕರು, ಶಿರಸ್ತೆದಾರರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ವ್ಯವಸ್ಥಾಪಕರ ಕರ್ತವ್ಯ ಲೋಪ ಎದ್ದು ಕಾಣುತ್ತದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಒಂದಿಬ್ಬರ ಮೇಲೆ ಕ್ರಮ ಕೈಗೊಂಡರೆ ಸಾಲದು. ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿ ತನಿಖೆ ನಡೆಸಿ ಹಗರಣದ ಹಿಂದಿರುವವರನ್ನು ಬಯಲಿಗೆ ತರಬೇಕಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಒತ್ತಾಯಿಸಿದರು. ಸಂಘದ ಗೌರವಾಧ್ಯಕ್ಷ ರಾಜಣ್ಣ ಕೆ, ಸಹ ಕಾರ್ಯದರ್ಶಿ ತಿಮ್ಮಯ್ಯ ಎಂ, ನಿರ್ದೇಶಕ ಪ್ರಸನ್ನ ಡಿ.ಎನ್. ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.














