Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಲ್ಲಾದರೂ ಇರಿ, ಎಂತಾದರೂ ಇರಿ, ಆದರೆ ಎಂದೆಂದಿಗೂ ಕನ್ನಡಿಗರಾಗಿರಿ : ಸಿಎಂ ಡಿ.ಕೆ ಶಿವಕುಮಾರ್

---Advertisement---

ಬೆಂಗಳೂರು.ಸೆಪ್ಟೆಂಬರ್.06 : ಎಲ್ಲಾದರೂ ಇರಿ, ಎಂತಾದರೂ ಇರಿ, ಆದರೆ ಎಂದೆಂದಿಗೂ ಕನ್ನಡಿಗರಾಗಿರಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ

ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ “ಅಕ್ಕ ರಜತ ಮಹೋತ್ಸವದ ವಿಶ್ವ ಕನ್ನಡ ಸಮ್ಮೇಳನ”ವನ್ನು ಉದ್ದೇಶಿಸಿ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಮಾತನಾಡಿದರು.

ನನ್ನ ಪ್ರಕಾರ ಇದು ಕೇವಲ ಒಂದು ಸಮ್ಮೇಳನವಲ್ಲ; ಇದು ಕನ್ನಡದ ಜಾತ್ರೆ, ಕರ್ನಾಟಕದ ಹಬ್ಬ, ನಮ್ಮ ನೆನಪುಗಳ ಹಬ್ಬ ಮತ್ತು ನಮ್ಮ ಬೇರುಗಳನ್ನು ಮತ್ತೆ ಸ್ಪರ್ಶಿಸುವ ಕ್ಷಣ. ಕನ್ನಡಿಗ ಎಂದರೆ ಕೇವಲ ಒಂದು ಭಾಷೆಯಲ್ಲ, ಅದೊಂದು ಬದುಕಿನ ಪರಂಪರೆ. ಕನ್ನಡಿಗರಾಗಿರುವುದು ಕೇವಲ ಒಂದು ಭಾಷೆಯನ್ನು ಮಾತನಾಡುವುದಷ್ಟೇ ಅಲ್ಲ; ಅದು ಒಂದು ಸಂಸ್ಕೃತಿ, ಒಂದು ಜೀವನ ವಿಧಾನ ಮತ್ತು ಒಂದು ಮೌಲ್ಯಗಳ ಪರಂಪರೆ ಎಂದರು.

ನಮ್ಮಲ್ಲಿ ಮಲೆನಾಡಿನ ಮಳೆಯಿದೆ, ಕರಾವಳಿಯ ಸಮುದ್ರವಿದೆ, ಕಲ್ಯಾಣ ಕರ್ನಾಟಕದ ಗಟ್ಟಿತನವಿದೆ, ಕಿತ್ತೂರು ಕರ್ನಾಟಕದ ಹೃದಯವಂತಿಕೆಯಿದೆ, ಹಳೆ ಮೈಸೂರು ಭಾಗದ ಸಂಸ್ಕೃತಿಯಿದೆ ಹಾಗೂ ಬೆಂಗಳೂರು ನಗರದ ಜಾಗತಿಕ ದೃಷ್ಟಿಕೋನವಿದೆ. ಇವೆಲ್ಲವೂ ಸೇರಿ ಕರ್ನಾಟಕ; ಇವೆಲ್ಲವೂ ಸೇರಿ ಕನ್ನಡ. ನಮ್ಮ ಕನ್ನಡದೊಳಗೆ ವಚನಕಾರರ ಚಿಂತನೆಯಿದೆ, ದಾಸರ ಭಕ್ತಿಯಿದೆ, ಕುವೆಂಪು ಅವರ ವಿಶ್ವಮಾನವ ಸಂದೇಶವಿದೆ, ಬೇಂದ್ರೆಯವರ ಕಾವ್ಯದ ಸೊಗಸಿದೆ, ಶಿವರಾಮ ಕಾರಂತರ ಜ್ಞಾನವಿದೆ, ಮಾಸ್ತಿಯವರ ಸಾಹಿತ್ಯದ ಆಳವಿದೆ ಮತ್ತು ಪು.ತಿ. ನರಸಿಂಹಾಚಾರ್ ಅವರ ಭಾವವಿದೆ ಎಂದು ಹೇಳಿದ್ದಾರೆ.

 

ಹಾಗೆಯೇ, I have a dream for Karnataka. ಕರ್ನಾಟಕವನ್ನು ಕೇವಲ ಭಾರತದ ಪ್ರಮುಖ ರಾಜ್ಯವನ್ನಾಗಿ ಮಾತ್ರವಲ್ಲದೆ, ಜಗತ್ತು ಗುರುತಿಸುವ, ಜಗತ್ತು ಮೆಚ್ಚುವ ಮತ್ತು ಜಗತ್ತಿನ ಅವಕಾಶಗಳಿಗೆ ಕೇಂದ್ರವಾಗುವ ರಾಜ್ಯವಾಗಿ ಕಟ್ಟಬೇಕು ಎಂಬ ಕನಸು ನನ್ನದು. ಕರ್ನಾಟಕವನ್ನು ಕಟ್ಟುವ ಕೆಲಸವನ್ನು ವೇಗವಾಗಿ ಮಾಡಬೇಕಿದೆ, ಜನರ ನಿರೀಕ್ಷೆಗಳಿಗೆ ಸ್ಪಂದಿಸಬೇಕಿದೆ ಮತ್ತು ಆಡಳಿತದಲ್ಲಿ ಬದಲಾವಣೆ ತರಬೇಕಿದೆ. ಬೆಂಗಳೂರು ಹಾಗೂ ಕರ್ನಾಟಕವನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿ, ಹೊಸ ಅವಕಾಶಗಳನ್ನು ಸೃಷ್ಟಿಸಬೇಕು. ನಮ್ಮ ಯುವಕರ ಭವಿಷ್ಯವನ್ನು ಭದ್ರಗೊಳಿಸಿ, ಆಡಳಿತವನ್ನು ಜನಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋಗಬೇಕು. ಇನ್ನೇನು ಸೆಪ್ಟೆಂಬರ್ 10ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳು ಪೂರ್ಣಗೊಳ್ಳುತ್ತವೆ ಎಂದರು.

ನೂರು ದಿನಗಳು ದೊಡ್ಡ ಅವಧಿಯಲ್ಲ; ಆದರೆ ದಿಕ್ಕು ತೋರಿಸಲು, ನಮ್ಮ ಉದ್ದೇಶವನ್ನು ಸ್ಪಷ್ಟಪಡಿಸಲು ಮತ್ತು ಹೊಸ ಪಯಣಕ್ಕೆ ಚಾಲನೆ ನೀಡಲು ಸಾಕಷ್ಟು ಸಮಯ. ಅದಕ್ಕಾಗಿ ನಮ್ಮ ಸಂಕಲ್ಪ ದೊಡ್ಡದಿದೆ. ಈ ಅಲ್ಪ ಅವಧಿಯಲ್ಲೇ ನಾವು ಹಲವು ಹೊಸ ಕಾರ್ಯಕ್ರಮಗಳಿಗೆ, ಹೊಸ ಚಿಂತನೆಗಳಿಗೆ ಮತ್ತು ಹೊಸ ಆಡಳಿತ ಕ್ರಮಗಳಿಗೆ ಚಾಲನೆ ನೀಡಿದ್ದೇವೆ. ನನ್ನ ದೃಷ್ಟಿ ಕೇವಲ ಎರಡು-ಮೂರು ವರ್ಷಗಳಿಗಷ್ಟೇ ಸೀಮಿತವಾಗಿಲ್ಲ. 2037ರ ವೇಳೆಗೆ ಕರ್ನಾಟಕವನ್ನು ಜಗತ್ತು ಇನ್ನೊಂದು ದೃಷ್ಟಿಯಿಂದ ನೋಡಬೇಕು ಎನ್ನುವುದು ನನ್ನ ಕನಸು.

ಈಗ, ಮೊದಲನೆಯದಾಗಿ, 25 ಅದ್ಭುತ ವರ್ಷಗಳನ್ನು ಪೂರೈಸಿರುವ ಇಡೀ AKKA ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಕಳೆದ 25 ವರ್ಷಗಳಲ್ಲಿ AKKA ಕೇವಲ ಒಂದು organisation ಆಗಿ ಉಳಿದಿಲ್ಲ, it has become a family. ಇದು ತಲೆಮಾರುಗಳನ್ನು ಮತ್ತು ದೇಶಗಳನ್ನು ದಾಟಿ ಕನ್ನಡಿಗರನ್ನು ಒಂದಾಗಿ ಸೇರಿಸಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ದೊಡ್ಡ ಕೆಲಸವನ್ನು ಮಾಡುತ್ತಿದೆ. ಮತ್ತೊಮ್ಮೆ ಹೇಳುತ್ತೇನೆ, ಎಲ್ಲಾದರೂ ಇರಿ, ಎಂತಾದರೂ ಇರಿ, ಆದರೆ ಎಂದೆಂದಿಗೂ ಕನ್ನಡಿಗರಾಗಿರಿ ಎಂದು ಹೇಳಿದ್ದಾರೆ.

Join WhatsApp

Join Now

Join Telegram

Join Now