ದೆಹಲಿ.ಸೆಪ್ಟೆಂಬರ್.06: ಭಾರತವು ಶೀಘ್ರದಲ್ಲೇ ವಿಶ್ವದಲ್ಲೇ ಎರಡನೇ ಅತಿ ಉದ್ದದ ಮೆಟ್ರೋ ರೈಲು ಜಾಲ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ. ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕವನ್ನು ಹಿಂದಿಕ್ಕಿ ಭಾರತ ಈ ಮಹತ್ವದ ಮೈಲಿಗಲ್ಲು ತಲುಪಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ತಿಳಿಸಿದ್ದಾರೆ.
ಇಂದೋರ್‌ನ ವಿಸ್ತರಿತ ಮೆಟ್ರೋ ಮಾರ್ಗ ಉದ್ಘಾಟನೆಯ ಸಂದರ್ಭದಲ್ಲಿ ಅವರು ಈ ವಿಷಯ ಹಂಚಿಕೊಂಡಿದ್ದಾರೆ.

ಪ್ರಸ್ತುತ ಭಾರತದ 26 ನಗರಗಳಲ್ಲಿ ಒಟ್ಟು 1,170 ಕಿಲೋಮೀಟರ್ ಉದ್ದದ ಮೆಟ್ರೋ ರೈಲು ಮಾರ್ಗ ಕಾರ್ಯಾಚರಣೆಯಲ್ಲಿದೆ. ಅಮೆರಿಕದ ಒಟ್ಟು ಮೆಟ್ರೋ ಜಾಲ 1,386 ಕಿ.ಮೀ ಉದ್ದವಿದ್ದು, ಭಾರತವು ಅಮೆರಿಕಕ್ಕಿಂತ ಕೇವಲ 216 ಕಿ.ಮೀ ಮಾತ್ರ ಹಿಂದಿದೆ. ಸದ್ಯ ಸುಮಾರು 900 ಕಿ.ಮೀ ಮಾರ್ಗದ ಕಾಮಗಾರಿ ವಿವಿಧ ಹಂತಗಳಲ್ಲಿದ್ದು, ಅವು ಪೂರ್ಣಗೊಂಡರೆ ಭಾರತವು ಚೀನಾದ ನಂತರದ ಎರಡನೇ ಸ್ಥಾನವನ್ನು ಅಲಂಕರಿಸಲಿದೆ.
2014ರಲ್ಲಿ ದೇಶದ ಕೇವಲ 5 ನಗರಗಳಲ್ಲಿ 245 ಕಿ.ಮೀ ಮೆಟ್ರೋ ಮಾರ್ಗವಿತ್ತು. ಕಳೆದೊಂದು ದಶಕದಲ್ಲಿ ನಗರ ಸಾರಿಗೆಗೆ ನೀಡಿದ ಆದ್ಯತೆಯಿಂದಾಗಿ ಮೆಟ್ರೋ ಜಾಲ ಅಭೂತಪೂರ್ವ ಬೆಳವಣಿಗೆ ಕಂಡಿದೆ.
ಮಧ್ಯಪ್ರದೇಶದ ವಾಣಿಜ್ಯ ನಗರಿ ಇಂದೋರ್‌ನಲ್ಲಿ ಗಾಂಧಿ ನಗರದಿಂದ ಮಾಳವೀಯ ನಗರ ಚೌರಸ್ತಾವರೆಗಿನ ವಿಸ್ತರಿತ ಮಾರ್ಗ ಆರಂಭವಾಗುವುದರೊಂದಿಗೆ, ನಗರದ ಮೆಟ್ರೋ ಜಾಲ 6.3 ಕಿ.ಮೀ ನಿಂದ 17.5 ಕಿ.ಮೀ ಗೆ ಏರಿಕೆಯಾಗಿದೆ.
ಉತ್ತಮ ಸಂಪರ್ಕ: ಈ ಮಾರ್ಗವು ನಗರದ ಪ್ರಮುಖ ವಸತಿ ಪ್ರದೇಶಗಳು ಮತ್ತು ವಾಣಿಜ್ಯ ಕೇಂದ್ರಗಳನ್ನು ಬೆಸೆಯುತ್ತದೆ.
ದೈನಂದಿನ ಸಂಚಾರ: ಪ್ರತಿ 15 ನಿಮಿಷಕ್ಕೊಂದು ರೈಲಿನಂತೆ ದಿನಕ್ಕೆ 80ಕ್ಕೂ ಹೆಚ್ಚು ಟ್ರಿಪ್‌ಗಳು ಕಾರ್ಯಾಚರಣೆ ನಡೆಸಲಿವೆ.
ಪರಿಸರ ಸ್ನೇಹಿ: ರಸ್ತೆ ದಟ್ಟಣೆ ಕಡಿಮೆ ಮಾಡುವುದು ಮತ್ತು ಇಂಗಾಲದ ಹೊರಸೂಸುವಿಕೆ ತಗ್ಗಿಸುವ ಗುರಿ ಹೊಂದಲಾಗಿದೆ.
ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ನಿವಾರಣೆ, ಇಂಧನ ಉಳಿತಾಯ ಮತ್ತು ವಾಯುಮಾಲಿನ್ಯ ನಿಯಂತ್ರಣಕ್ಕೆ ಮೆಟ್ರೋ ಜಾಲ ಮಹತ್ವದ ಪಾತ್ರ ವಹಿಸುತ್ತಿದ್ದು, ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ.












