ಟೆಹ್ರಾನ್: ಪಶ್ಚಿಮ ಇರಾನ್‌ನಲ್ಲಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೈಲ ಟ್ಯಾಂಕರ್‌ವೊಂದು ಸ್ಫೋಟಗೊಂಡು ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, ಏಳು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ವಾಹಿನಿ ಐಆರ್‌ಐಬಿ (IRIB) ವರದಿ ಮಾಡಿದೆ.
ಕುರ್ದಿಸ್ತಾನ್ ಪ್ರಾಂತ್ಯದ ಸನಂದಜ್ ಹಾಗೂ ಹಮೆದಾನ್ ಪ್ರಾಂತ್ಯದ ಹಮೆದಾನ್ ಕೌಂಟಿಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದ ಬೆನ್ನಲ್ಲೇ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ, ಸಮೀಪದಲ್ಲಿದ್ದ ಹಲವು ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದೆ ಎಂದು ಕುರ್ದಿಸ್ತಾನ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ತುರ್ತು ವೈದ್ಯಕೀಯ ಸೇವೆಗಳ ಮುಖ್ಯಸ್ಥ ಬಾಬಕ್ ಹೊಡಾಯಿ ತಿಳಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸನಂದಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಇದೇ ವರ್ಷ ಜುಲೈ ತಿಂಗಳಲ್ಲಿಯೂ ಹಾರ್ಮುಜ್ ಜಲಸಂಧಿಯಲ್ಲಿ ಕಡಲ ಮೈನ್ (Naval mine) ಡಿಕ್ಕಿಯಾಗಿ ತೈಲ ಟ್ಯಾಂಕರ್‌ವೊಂದು ಸ್ಫೋಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಳ: ಇರಾನ್‌ನ 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ
ಮತ್ತೊಂದೆಡೆ, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಎರಡು ಯುದ್ಧನೌಕೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಸೇನೆ ಇರಾನ್‌ನ ಮೂರು ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ.
ಪ್ರಾದೇಶಿಕ ಜಲಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕದ ವಿಮಾನವಾಹಕ ನೌಕೆ ಮತ್ತು ಕ್ಷಿಪಣಿ ವಿಧ್ವಂಸಕ ನೌಕೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತಾದರೂ, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸ್ಪಷ್ಟಪಡಿಸಿದೆ. ಇದಕ್ಕೆ ಪ್ರತಿಯಾಗಿ ಸೆಪ್ಟೆಂಬರ್ 5 ರಂದು ಇರಾನ್‌ನ ಮೂರು ಕಚ್ಚಾ ತೈಲ ವಾಹಕಗಳ ಮೇಲೆ ದಾಳಿ ನಡೆಸಿರುವುದಾಗಿ ಸೆಂಟ್‌ಕಾಮ್ ಮಾಹಿತಿ ನೀಡಿದೆ.











