ಸುದ್ದಿಒನ್, ಚಳ್ಳಕೆರೆ, ಸೆ. 5: “ಗುರು ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ; ಬದುಕಿನ ಅರ್ಥವನ್ನು ತಿಳಿಸಿ, ಭವಿಷ್ಯದ ದಾರಿಯನ್ನು ತೋರಿಸುವ ದಾರಿದೀಪ.” ಇಂತಹ ಗುರುತ್ವದ ಮಹತ್ವವನ್ನು ಸ್ಮರಿಸುವ ಶಿಕ್ಷಕರ ದಿನಾಚರಣೆ ಚಳ್ಳಕೆರೆ ತಾಲ್ಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಚಳ್ಳಕೆರೆ ತಾಲ್ಲೂಕು ಪ್ರಾಚಾರ್ಯರ ಬಳಗ, ಚಳ್ಳಕೆರೆ ತಾಲ್ಲೂಕು ಉಪನ್ಯಾಸಕರ ಸಂಘ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು, ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಸೆ.5ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ‘ಶಿಕ್ಷಕರ ದಿನಾಚರಣೆಯ ಸಮಾರಂಭ–2026’ ಹಾಗೂ 2026–27ನೇ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದಲಿರುವ ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರ ಗೌರವ ಸನ್ಮಾನ ಸಮಾರಂಭ ನಡೆಯಿತು.

ಕಾರ್ಯಕ್ರಮಕ್ಕೆ ಚಳ್ಳಕೆರೆ ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ನಾಗರಾಜ ಬೆಳಗಟ್ಟ ಅವರು ನೇತೃತ್ವ ವಹಿಸಿ, ಕಾರ್ಯಕ್ರಮದ ರೂಪುರೇಷೆ ಹಾಗೂ ಸಂಘಟನಾ ಕಾರ್ಯಗಳಿಗೆ ಮಾರ್ಗದರ್ಶನ ನೀಡಿದರು. ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭವು ಶಿಕ್ಷಕ ಸಮುದಾಯದ ವೃತ್ತಿಪರ ಬಾಂಧವ್ಯ, ಪರಸ್ಪರ ಗೌರವ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿಯಾಯಿತು. ಗುರುವಿನ ಋಣ ಸ್ಮರಿಸುವ ಸಾರ್ಥಕ ಸಂದರ್ಭ
ಶಿಕ್ಷಕರ ದಿನಾಚರಣೆಯಂತಹ ಕಾರ್ಯಕ್ರಮಗಳು ಶಿಕ್ಷಕರಿಗೆ ಗೌರವ ಸಲ್ಲಿಸುವುದರ ಜೊತೆಗೆ ಶಿಕ್ಷಣ ವ್ಯವಸ್ಥೆಯ ಗುರಿ, ಗುಣಮಟ್ಟ ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ಚಿಂತನೆಗೆ ವೇದಿಕೆಯಾಗಬೇಕು. ಚಳ್ಳಕೆರೆ ತಾಲ್ಲೂಕು ಉಪನ್ಯಾಸಕರ ಸಂಘ ಆಯೋಜಿಸಿದ ಈ ಕಾರ್ಯಕ್ರಮವೂ ಇದೇ ವೈಚಾರಿಕ ನೆಲೆಯಲ್ಲಿ ಗಮನ ಸೆಳೆಯುತ್ತದೆ ಎಂದು ಭೀಮರೆಡ್ಡಿ ಪ್ರಾಚಾರ್ಯರು ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆ.ಹೆಚ್. ರಾಜು, ಪ್ರಾಚಾರ್ಯರು, ಸರ್ಕಾರಿ ಪದವಿಪೂರ್ವ ಕಾಲೇಜು, ಚಳ್ಳಕೆರೆ ಹಾಗೂ ನೋಡಲ್ ಅಧಿಕಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ
ಶಿಕ್ಷಕರ ದಿನಾಚರಣೆ ಎಂದರೆ ಕೇವಲ ಒಂದು ದಿನದ ಆಚರಣೆಯಲ್ಲ; ಅದು ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ. ಒಂದು ಪೀಳಿಗೆಯನ್ನು ರೂಪಿಸುವ ಶಿಕ್ಷಕ ತನ್ನ ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಜ್ಞಾನದ ಬೀಜ ಬಿತ್ತುತ್ತಾನೆ ಆ ಬೀಜಗಳು ಮುಂದೆ ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ರೂಪದಲ್ಲಿ ಹೆಮ್ಮರವಾಗಿ ಬೆಳೆಯುತ್ತವೆ ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯರಾದ ವಸಂತ ಕುಮಾರ್ ಕೆ.ಎನ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಕರ ಸೇವೆಯನ್ನು ನಿವೃತ್ತಿಯ ಸಂದರ್ಭದಲ್ಲಿ ಸ್ಮರಿಸಿ ಗೌರವಿಸುವುದು ಕೇವಲ ಸನ್ಮಾನವಲ್ಲ; ಅದು ಒಂದು ಪೀಳಿಗೆ ಮತ್ತೊಂದು ಪೀಳಿಗೆಗೆ ಸಲ್ಲಿಸುವ ಕೃತಜ್ಞತೆಯ ಅಭಿವ್ಯಕ್ತಿ. ಈ ಆಶಯವನ್ನು ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಲಕ್ಷ್ಮಣ್ ಮಾಜಿ ಅಧ್ಯಕ್ಷರು ಜಿಲ್ಲಾ ಉಪನ್ಯಾಸಕರ ಸಂಘ ಚಿತ್ರದುರ್ಗ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸೇವೆಗೆ ಗೌರವ – ಸಾಧನೆಗೆ ಸನ್ಮಾನ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿಯನ್ನು ವೇದಿಕೆಯಲ್ಲಿ ಸನ್ಮಾನಿಸುವುದು ಅತ್ಯಂತ ಶ್ರೇಷ್ಠ ಕೆಲಸ ಸೇವೆಯಿಂದ ನಿವೃತ್ತರಾಗುವುದು ವೃತ್ತಿಯ ಅಂತ್ಯವಾಗಬಹುದು; ಆದರೆ ಶಿಕ್ಷಕರ ಪ್ರಭಾವಕ್ಕೆ ಎಂದಿಗೂ ನಿವೃತ್ತಿಯಿಲ್ಲ ಎಂಬ ಸಂದೇಶವನ್ನು ನೀಡಿದರು.
ಸನ್ಮಾನಿತರು ತಮ್ಮ ಸೇವಾ ಬದುಕಿನ ಮೂಲಕ ಸಾರಿದರು.
ಪುಟ್ಟರಂಗಪ್ಪ ನಿವೃತ್ತ ಉಪನ್ಯಾಸಕರು
ಶಿಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಿಕ್ಷಕ ವೃತ್ತಿ – ಸಮಾಜ ನಿರ್ಮಾಣದ ಶಕ್ತಿ ಇಂದಿನ ವೇಗದ ತಾಂತ್ರಿಕ ಯುಗದಲ್ಲಿ ಶಿಕ್ಷಣದ ಸ್ವರೂಪ ಬದಲಾಗುತ್ತಿದ್ದರೂ, ಶಿಕ್ಷಕರ ಅಗತ್ಯ ಮತ್ತು ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ತಿಳಿಸಿದರು. ಶ್ರೀನಿವಾಸ ಪ್ರಾಚಾರ್ಯರು ಸನ್ಮಾನ ಸ್ವೀಕರಿಸಿ ಮಾಹಿತಿ ತಂತ್ರಜ್ಞಾನ ಜ್ಞಾನವನ್ನು ಕ್ಷಣಾರ್ಧದಲ್ಲಿ ಒದಗಿಸಬಹುದು; ಆದರೆ ಜ್ಞಾನವನ್ನು ವಿವೇಕವಾಗಿ, ವಿವೇಕವನ್ನು ಮೌಲ್ಯವಾಗಿ, ಮೌಲ್ಯವನ್ನು ಬದುಕಿನ ದಾರಿಯಾಗಿ ರೂಪಿಸುವ ಶಕ್ತಿ ಶಿಕ್ಷಕರಿಗಷ್ಟೇ ಇದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿದವರ ಮುಖದಲ್ಲಿದ್ದ ಸಂತೃಪ್ತಿ, ಸಹೋದ್ಯೋಗಿಗಳ ಹೃದಯದಲ್ಲಿದ್ದ ಆತ್ಮೀಯತೆ ಮತ್ತು ವಿದ್ಯಾರ್ಥಿಗಳ ಬದುಕಿನಲ್ಲಿ ತಮ್ಮ ಸೇವೆಯ ಪ್ರತಿಫಲ ಕಂಡ ಶಿಕ್ಷಕರ ಭಾವನಾತ್ಮಕ ಕ್ಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ತಾಲ್ಲೂಕಿನ ವಿವಿಧ ಕಾಲೇಜುಗಳ, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಕ್ಷಕ ವೃತ್ತಿಯ ಮಹತ್ವವನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸೇವೆಯಲ್ಲಿರುವವರನ್ನು ಪ್ರೋತ್ಸಾಹಿಸುವುದು, ನಿವೃತ್ತರ ಅನುಭವವನ್ನು ಗೌರವಿಸುವುದು ಮತ್ತು ಮುಂದಿನ ಪೀಳಿಗೆಯ ಶಿಕ್ಷಕರಿಗೆ ಮಾದರಿಗಳನ್ನು ಪರಿಚಯಿಸುವುದು ಇಂತಹ ಕಾರ್ಯಕ್ರಮಗಳ ನಿಜವಾದ ಉದ್ದೇಶವಾಗಬೇಕು. ಆ ದೃಷ್ಟಿಯಿಂದ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದ ಈ ಶಿಕ್ಷಕರ ದಿನಾಚರಣೆ ಒಂದು ಆಚರಣೆಯಾಗಿ ಮಾತ್ರ ಉಳಿಯದೆ, ಗುರು-ಶಿಷ್ಯ ಪರಂಪರೆಯ ಮೌಲ್ಯಗಳನ್ನು ಪುನರ್‌ಸ್ಮರಿಸುವ ಸಾರ್ಥಕ ವೇದಿಕೆ ಎಂದು ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗರಾಜ ಬೆಳಗಟ್ಟ ಎಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು.
“ಶಿಕ್ಷಕ ನಿವೃತ್ತಿಯಾಗಬಹುದು; ಆದರೆ ಅವರು ಬಿತ್ತಿದ ಜ್ಞಾನ, ಸಂಸ್ಕಾರ ಮತ್ತು ಮಾನವೀಯತೆಯ ಬೀಜಗಳಿಗೆ ಎಂದಿಗೂ ನಿವೃತ್ತಿಯಿಲ್ಲ” ಎಂಬ ಆಶಯವನ್ನು ಸಾರಿದ ಈ ಕಾರ್ಯಕ್ರಮವು ಶಿಕ್ಷಕ ಸಮುದಾಯದಲ್ಲಿ ಹೊಸ ಚೈತನ್ಯ ಮೂಡಿಸಿತು. ಗುರುಗಳಿಗೆ ಗೌರವ – ಜ್ಞಾನಕ್ಕೆ ನಮನ – ಸೇವೆಗೆ ಸನ್ಮಾನ ಎಂಬ ತ್ರಿವೇಣಿ ಸಂಗಮದಂತೆ ನಡೆದ ಚಳ್ಳಕೆರೆ ತಾಲ್ಲೂಕಿನ ಶಿಕ್ಷಕರ ದಿನಾಚರಣೆ ಸಮಾರಂಭವು ಶೈಕ್ಷಣಿಕ ಕ್ಷೇತ್ರದ ಸಾರ್ಥಕ ಕಾರ್ಯಕ್ರಮವಾಗಿ ಮೂಡಿಬಂದಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಸವರಾಜು, ಹಿರಿಯ ಉಪನ್ಯಾಸಕರಾದ ಕುಮಾರಸ್ವಾಮಿ, ಜಗದೀಶ್ ಆಶಾ ರಾಣಿ, ಲತಾರಾಣಿ , ಹೀನಾ ಕೌಸರ್, ಡಾ. ರೇಖಾ,ಜಬಿವುಲ್ಲಾ, ಈಶ್ವರಪ್ಪ ಸಾಯಿದಾ ಬೇಗಂ, ಮಂಜುನಾಥ್ ಮುಂತಾದವರು ಉಪಸ್ಥಿತಿ ಇದ್ದರು













