ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ನಮ್ಮ ದೇಹದಲ್ಲಿ ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸುವ ರಕ್ತಕಣಗಳು ದೇಹವನ್ನು ಆರೋಗ್ಯಕರ ಸ್ಥಿತಿಯಲ್ಲಿ ಸದಾ ಕಾಲ ನಿರತರಾಗಿರುತ್ತವೆ. ಕೆಲವೊಮ್ಮೆ ದೇಹವು ಬಾಹ್ಯವಾಗಿ ಅಥವಾ ಆಂತರಿಕವಾಗಿ ವಿವಿಧ ರೀತಿಯ ರೋಗಕ್ಕೆ ತುತ್ತಾದಾಗ ಅಥವಾ ಅಂಗಾಂಶಗಳು ಹಾನಿಯಾದಾಗ ಅದನ್ನು ಸರಿಪಡಿಸಲು ರಕ್ತಕಣಗಳು ಬಹಳಷ್ಟು ಶ್ರಮಪಡಬೇಕಾಗುತ್ತದೆ.
ಅಂತಹ ಸಮಯದಲ್ಲಿ ಅಂಗಾಂಶ ಕಸಿಯು ಕೂಡ ಒಂದು ವಿಧದಲ್ಲಿ ವಿಫಲ ಆಗಬಹುದು. ಅಂಗಾಂಶ ಕಸಿಯು ನಮ್ಮ ಸ್ವಂತದ ದೇಹವನ್ನು ಹೊರತುಪಡಿಸಿ ಇತರ ದೇಹದಿಂದ ಪಡೆದುಕೊಂಡಾಗಲೂ ಕೂಡ ದೇಹ ಅದಕ್ಕೆ ಪೂರಕವಾಗಿ ಸಕಾರಾತ್ಮಕವಾಗಿ ಸ್ಪಂದಿಸದಿರಬಹುದು. ಇತರರ ಅಂಗಾಂಶವನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಿಕಿತ್ಸೆಯೂ ಸಂಪೂರ್ಣವಾಗಿ ವಿಫಲ ಆಗಬಹುದು. ಅಂತಹ ಸಮಯದಲ್ಲಿ ನಮ್ಮ ದೇಹಕ್ಕೆ ಅಮೃತದಂತೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುವುದೇ ಈ ಪಿ ಆರ್ ಪಿ ಚಿಕಿತ್ಸೆ.
ಏನಿದು ಪಿ ಆರ್ ಪಿ ಚಿಕಿತ್ಸೆ? ಪಿ ಆರ್ ಪಿ ಎಂದರೆ ಪ್ಲೇಟ್ ಲೆಟ್ ರಿಚ್ ಪ್ಲಾಸ್ಮಾ ಎಂದರೆ ಪ್ಲೇಟ್ಲೇಟ್ ಕಣಗಳು ಸಮೃದ್ಧವಾಗಿರುವ ಇತರ ರಕ್ತ ಕಣಗಳು ಇಲ್ಲದಿರುವ ಒಂದು ದ್ರವರೂಪದ ರಕ್ತಕಣ ರಹಿತ ದ್ರವ ರೂಪದಲ್ಲಿರುವ ರಕ್ತ. ಇದೊಂದು ರೀತಿಯಲ್ಲಿ ಹಾನಿಗೊಂಡ ಜೀವಾಂಶಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸಾ ರಹಿತ ಚಿಕಿತ್ಸಾ ವಿಧಾನ.
ಇದರಲ್ಲಿ ವ್ಯಕ್ತಿಯ ಸ್ವಂತ ರಕ್ತದಿಂದಲೇ ಪ್ಲೇಟ್ಲೆಟ್ ರಕ್ತ ಕಣಗಳನ್ನು ಬಳಸಿ ದೇಹದ ಅಂಗಾಂಶಗಳ ಪುನರುತ್ಪಾದನೆ ಹಾಗೂ ಹಾನಿಗೊಂಡ ಅಂಗಾಂಶಗಳು ಹಾಗೂ ಜೀವಾಂಶಗಳ ಗುಣಪಡಿಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಡೀ ದೇಹದ ಯಾವುದೇ ಹಾನಿಗೊಂಡ ಅಂಗಾಂಗಗಳನ್ನು ಈ ವಿಧಾನದ ಮೂಲಕ ಗುಣಪಡಿಸಬಹುದಾಗಿದೆ.
ಎಲ್ಲೆಲ್ಲಿ ಉಪಯೋಗ?
*ಮುಖ್ಯವಾಗಿ ಕೂದಲು ಕಸಿ ಹಾಗೂ ಬೋಳು ತಲೆ ಚಿಕಿತ್ಸಾ ವಿಧಾನದಲ್ಲಿ. ಕೂದಲನ್ನು ಬೆಳೆಸಲು ಹಾಗೂ ಕೂದಲು ಬೆಳವಣಿಗೆ ಉತ್ತೇಜಿಸಲು.
* ಕೂದಲ ಬುಡದ ಕೂದಲ ಕೋಶಗಳ ಮರು ಬೆಳವಣಿಗೆ.
* ಹಾನಿಗೊಂಡ ಚರ್ಮದ ಪುನರುತ್ಪಾದನೆಯಲ್ಲಿ.
* ಸೌಂದರ್ಯ ವರದಕವಾಗಿ ಮುಖದ ಮೇಲಿನ ಅಂದವನ್ನು ಹೆಚ್ಚಿಸಲು ಹಾಗೂ ಮುಖದ ನೆರಿಗೆಗಳನ್ನು ಕಡಿಮೆ ಮಾಡಲು.
* ಚರ್ಮದಲ್ಲಿ ಕಾಂತಿ ವರ್ಧಕವಾಗಿ.
* ಮೂಳೆ ಮತ್ತು ಕೀಲುಗಳ ನೋವು,ಸಂಧಿವಾತ ಆರ್ಥೋರಿಟಿಸ್, ಮಂಡಿ ಚಿಪ್ಪು, ಮೂಳೆಯ ಸವೆತ.. ಮುಂತಾದ ಸಮಸ್ಯೆಗಳಲ್ಲಿ.
* ಮಾಂಸ ಖಂಡಗಳು ಹಾಗೂ ಕೀಲುಗಳ ಸಮಸ್ಯೆಗಳಲ್ಲಿ.
* ಜೀವಕೋಶಗಳ ಹಾನಿ ತಡೆಯಲು.
* ದೀರ್ಘಕಾಲಿನ ಕೀಲುಗಳ ನೋವು ಇದ್ದಾಗ.
ವಿಧಾನ:
* ಮೊದಲು ವ್ಯಕ್ತಿಯ ದೇಹದಿಂದ ನಿರ್ದಿಷ್ಟ ಪ್ರಮಾಣದ ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ ಆನಂತರ ಸೆಂಟ್ರಿಫ್ಯುಗೇಶನ್ ಅಂದರೆ ಕೋಶಗಳ, ಪ್ಲಾಸ್ಮ ಹಾಗೂ ಇತರೆ ರಕ್ತಕಣಗಳಾದ ಕೆಂಪು ರಕ್ತ ಕಣ ಹಾಗೂ ಬಿಳಿ ರಕ್ತ ಕಣಗಳನ್ನು ಪ್ಲೇಟ್ಲೆಟ್ ಗಳಿಂದ ಪ್ರತ್ಯೇಕವಾಗಿಸುವ ವಿಧಾನ ( ಬೇರ್ಪಡಿಸುವಿಕೆ) ವಿಧಾನದಲ್ಲಿ ಮಾಡಿ ಅದನ್ನು ವ್ಯಕ್ತಿಯ ದೇಹದ ನಿರ್ದಿಷ್ಟ ಸಮಸ್ಯೆ ಇರುವ ಭಾಗಕ್ಕೆ ಕೊಡಲಾಗುತ್ತದೆ.
* ಇದನ್ನು ನಿರ್ದಿಷ್ಟ ದಿನಕ್ಕೆ ಒಂದು ಬಾರಿಯಂತೆ ಸಮಸ್ಯೆಯ ಅವಲಂಬನೆ ಮೇಲೆ 4-5 ನೀಡಲಾಗುತ್ತದೆ.
ಹೇಗೆ ಕೆಲಸ ಮಾಡುತ್ತದೆ?
ಈ ವಿಧಾನದಲ್ಲಿ ಪ್ಲೇಟ್ಲೆಟ್ ಕಣಗಳನ್ನು ಉತ್ತೇಜಿಸಿ ಬೆಳವಣಿಗೆಯ ರಸದೂತಗಳನ್ನು (ಹಾರ್ಮೋನ್ ಗಳನ್ನು ) ಸ್ರವಿಸುವಿಯಂತೆ ಮಾಡಲಾಗುತ್ತದೆ ಮತ್ತು ನಿರ್ದಿಷ್ಟ ಜೀವಕೋಶಗಳಿಗೆ ಈ ಹಾರ್ಮೋನುಗಳು ಬೆಳವಣಿಗೆ ಉತ್ತೇಜಿಸಲು ಸಹಾಯ ಮಾಡುತ್ತವೆ. ಇದರಿಂದ ಹನಿಗೊಂಡ ಕೋಶಗಳು ಮತ್ತೆ ಪುನಃ ಬೆಳವಣಿಗೆ ಕಾಣುತ್ತವೆ.
ಉಪಯೋಗವೇನು?
ಯಾವುದೇ ಅಡ್ಡ ಪರಿಣಾಮವಾಗಲಿ,ವ್ಯತಿರಿಕ್ತ ಸಮಸ್ಯೆಗಳಾಗಲಿ ಆಗುವುದಿಲ್ಲ. ಅತ್ಯಂತ ನೈಸರ್ಗಿಕ ವಿಧಾನ ಇದಾಗಿದ್ದು ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಇದು ವ್ಯಕ್ತಿಯ ದೈಹಿಕ ಸಮಸ್ಯೆಯ ಮೇಲೆ ಅವಲಂಬಿತ ಆಗಿರುತ್ತದೆ, ಜೊತೆಗೆ ವ್ಯಕ್ತಿಯಿಂದ ವ್ಯಕ್ತಿಗೆ ಇದರ ಉಪಯೋಗಗಳು ಹಾಗೂ ಫಲಿತಾಂಶಗಳು ಬದಲಾಗುತ್ತವೆ. ಬೇರೆ ಬೇರೆ ವೈದ್ಯಕೀಯ ಸಮಸ್ಯೆಗಳಾದ ವಸಡು ರೋಗ ಹಾಗೂ ಸಕ್ಕರೆ ಸಮಸ್ಯೆಯಲ್ಲಿ ಕಂಡುಬರುವ ಕಾಲುಗಳ ಹುಣ್ಣುಗಳನ್ನು ಕೂಡ ಇದರ ಮೂಲಕ ಸರಿಪಡಿಸಬಹುದಾಗಿದೆ.







