ಬೆಂಗಳೂರು: ಸದನದಲ್ಲಿ ಡಿಕೆ ಶಿವಕುಮಾರ್ ಅವರು ಆರ್ ಎಸ್ ಎಸ್ ಗೀತೆಯನ್ನ ಹಾಡಿದ್ದರು. ಇದಕ್ಕೆ ಬಿಜೆಪಿ ನಾಯಕರು ಪರವಾಗಿ ಮಾತನಾಡಿದ್ರೆ, ಕಾಂಗ್ರೆಸ್ ನಾಯಕರು ವಿರೋಧವನ್ನ ವ್ಯಕ್ತಪಡಿಸಿದ್ದರು. ಕೆಪಿಸಿಸಿ ಅಧ್ಯಕ್ಷನಾಗಿ ಈ ರೀತಿ ಆರ್ ಎಸ್ ಎಸ್ ಗೀತೆಯನ್ನ ಹಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತು. ಈ ಸಂಬಂಧ ಇದೀಗ ಡಿಕೆ ಶಿವಕುಮಾರ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪಕ್ಷ ನಿಷ್ಠೆಯನ್ನೇ ಪ್ರಶ್ನೆ ಮಾಡುವವರು ಮೂರ್ಖರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಹುಟ್ಟಿದ್ದು ಕಾಂಗ್ರೆಸ್ಸಿಗನಾಗಿ, ನಾನು ಸಾಯುವುದೇ ಕಾಂಗ್ರೆಸ್ಸಿಗನಾಗಿ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸಿದ್ಧಾಂತದ ಅರಿವಿದೆ ಎಂದು ಕಾಲೆಳೆದೆ ಅಷ್ಟೇ. ಅದು ಬಿಟ್ಟರೆ ಇನ್ನೇನು ಇಲ್ಲ. ವಿಧಾನಸಭೆಯಲ್ಲಿ ಆಚಾರ ವಿಚಾರಗಳನ್ನು ಪಾಲನೆ ಮಾಡಿಕೊಂಡು ಬಂದಿದ್ದೇನೆ. ವಿದ್ಯಾರ್ಥಿ ಸಂಘಟನೆಯಲ್ಲಿಂದಲೇ ಗುರುತಿಸಿಕೊಂಡು ಬಂದಿದ್ದೇನೆ. ಹೊಸದಾಗಿ ಕಾಂಗ್ರೆಸ್ ಸೇರಿಲ್ಲ. ಯಾರ ಪಾಠವೂ ಅಗತ್ಯವಿಲ್ಲ.
ನನಗೂ ಗಾಂಧಿ ಕುಟುಂಬಕ್ಕೂ ಭಕ್ತ ಭಗವಂತನ ನಡುವಿರುವ ಸಂಬಂಧ. ನಾನು ಎಂಎ ಪೊಲಿಟಿಕಲ್ ವಿದ್ಯಾರ್ಥಿ. ರಾಜಕಾರಣಕ್ಕೆ ಬರುವುದಕ್ಕಿಂತ ಮುನ್ನ ಎಲ್ಲಾ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ಕಮ್ಯುನಿಸಂ, ಬಿಜೆಪಿ, ಆರ್ ಎಸ್ ಎಸ್, ದಳ ಎಲ್ಲಾ ಪಕ್ಷಗಳ ಬಗ್ಗೆ ತಿಳಿದಿದ್ದೇನೆ. ಮುಸ್ಲಿಂ ಲೀಗ್ ಸಮಾವೇಶದಲ್ಲೂ ಭಾಗಿಯಾಗಿದ್ದೇನೆ. ಅವರ ಶಿಸ್ತಿಗೆ ಬೆರಗಾಗಿದ್ದೆ.
ಈ ವಿಚಾರಕ್ಕೆ ಬೇಕಾದರೆ ಕ್ಷಮೆ ಕೇಳೋಣಾ. ಬಿಕೆ ಹರಿಪ್ರಸಾದ್ ಗೂ ಕ್ಷಮೆ ಕೇಳೋಣಾ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ನಿಜ. ಹಾಗೆಂದ ಮಾತ್ರಕ್ಕೆ ನನ್ನ ಧರ್ಮವನ್ನ ನಾನು ಬಿಡುವುದಿಲಗಲ. ನನ್ನ ಧರ್ಮದ ಜೊತೆಗೆ ಇತರ ಧರ್ಮಗಳ ಬಗ್ಗೆಯೂ ನನಗೆ ನಂಬಿಕೆ ಇದೆ ಎಂದಿದ್ದಾರೆ.
















