Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನೀರು ಮತ್ತು ದಂತ ಆರೋಗ್ಯ : ಡಾ. ಸಂತೋಷ್ ಕೆ. ವಿ. ಅವರ ವಿಶೇಷ ಲೇಖನ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಸುದ್ದಿಒನ್
ನಮ್ಮ ಇಡೀ ದೇಹದ ಅಂಗಾಂಗಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು ನೀರೇ ಪ್ರಮುಖ ಆಧಾರ. ನೀರು ಇಲ್ಲದಿದ್ದರೆ ಯಾವುದೇ ಅಂಗ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ದೇಹದ ಎಲ್ಲಾ ಅಂಗಾಂಗಗಳಂತೆ ಹಲ್ಲುಗಳು ಕೂಡ ಒಂದು ಪ್ರಮುಖ ಅಂಗವಾಗಿದೆ. ಇಂಥ ಹಲ್ಲುಗಳು ಆರೋಗ್ಯಕರ ಸ್ಥಿತಿಯಲ್ಲಿ ಉತ್ತಮ ರೀತಿಯಲ್ಲಿ ಜೀವನ ಪರ್ಯಂತ ಮಾನವನ ದೇಹಕ್ಕೆ ಸೇವೆ ಕೊಡಲು ನೀರು ಒಂದು ಪ್ರಮುಖವಾದ ಅಂಶವಾಗಿದೆ.
ಪ್ರತಿನಿತ್ಯ ದೇಹಕ್ಕೆ ನೀರಿನ ಅವಶ್ಯಕತೆ ಹಾಗೂ ಬಳಕೆ ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ನೀರಿನಿಂದಲೇ ಆರೋಗ್ಯ ಎಂಬುದನ್ನು ಮನಗಾಣಬೇಕಾಗಿದೆ.

ಸಾಮಾನ್ಯವಾಗಿ ನಾವು ಊಟ ಮಾಡಿದಾಗ ಬಾಯಿಯಲ್ಲಿ ಸ್ರವಿಕೆಯಾಗುವ ಲಾಲಾರಸ (ಜೊಲ್ಲು) ಮತ್ತು ಆಹಾರವು ಪರಸ್ಪರ ಜೊತೆಗೆ ಸೇರಿಕೊಂಡು ನುಂಗಲು ಅನುವಾಗುವಂತೆ, ಆಹಾರ ಜರುಗುವಂತೆ ಹಾಗೂ ಜೀರ್ಣಕ್ರಿಯೆಗೆ ಅನುಕೂಲವಾಗುವಂತಹ ವಾತಾವರಣ ಜೊಲ್ಲಿನಿಂದ ನಿರ್ಮಾಣಗೊಳ್ಳುತ್ತದೆ.ಈ ಜೊಲ್ಲಿನ ಪ್ರಮಾಣ ಸಮಸ್ಥಿತಿಯಲ್ಲಿ ಇರಲು ದೇಹದಲ್ಲಿ ಪೂರಕವಾಗಿ ನೀರಿನ ಲಭ್ಯತೆ ಇರಬೇಕು. ನೀರು ಆಗಾಗ ಸೇವನೆ ಮಾಡುವುದರಿಂದ ಲಾಲ ರಸವು ಉತ್ತಮ ರೀತಿಯಲ್ಲಿ ಸ್ರವಿಕೆಯಾಗುತ್ತದೆ.
ದೇಹದಲ್ಲಿ ನೀರಿನ ಲಭ್ಯತೆ ಇಲ್ಲದಾಗ ಆಹಾರ ಸರಿಯಾಗಿ ರುಚಿಸುವುದಿಲ್ಲ. ಆಹಾರವು ಸರಿಯಾಗಿ ಜಗೆಯಲು ಸಾಧ್ಯವಾಗುವುದಿಲ್ಲ. ಜೀರ್ಣವೂ ಸರಿಯಾಗಿ ಆಗುವುದಿಲ್ಲ. ಬಾಯಿ ಒಣಗಿದಂತಾಗಿ ಬಾಯಿ ಆದಾಗ ಹುಣ್ಣಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಹುಣ್ಣಿನಿಂದ ಆಗುವಾಗ ಗಾಯಗಳು ದೀರ್ಘಕಾಲಿನವಾಗಿ ಉಳಿದು ಆಹಾರವನ್ನು ಸರಿಯಾಗಿ ತಿನ್ನಲು ಕೂಡ ಆಗುವುದಿಲ್ಲ. ಇದರ ಜೊತೆಗೆ ದೇಹದಲ್ಲಿ ಆಮ್ಲೀಯ ಗುಣ ಹೆಚ್ಚಾಗಿ ಅತಿಯಾದ ಗ್ಯಾಸ್ಟಿಕ್ ಸಮಸ್ಯೆ ಕಾಡಬಹುದು. ಗ್ಯಾಸ್ಟಿಕ್ ಸಮಸ್ಯೆ ಹೆಚ್ಚಾಗದಂತೆ ಜೊತೆಗೆ ಅತಿ ಆಮ್ಲೀಯತೆ ಹೆಚ್ಚಾಗದಂತೆ ತಡೆಯಲು ನೀರಿನಿಂದ ಮಾತ್ರ ಸಾಧ್ಯವಾಗುತ್ತದೆ.
ಈ ಎಲ್ಲಾ ಸಮಸ್ಯೆಗಳು ದೇಹದಲ್ಲಿ ನೀರಿನ ಅಲಭ್ಯತೆ ಅಥವಾ ಕಡಿಮೆ ನೀರು ಸೇವನೆಯಿಂದ ಆಗುವ ಕಾರಣಕ್ಕೆ ಪ್ರತಿಯೊಂದಕ್ಕೂ ನೀರೇ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಆ ಕಾರಣಕ್ಕೆ ಪ್ರತಿಯೊಬ್ಬ ವ್ಯಕ್ತಿಯು ನೀರನ್ನು ದೇಹಕ್ಕೆ ಪೂರಕವಾಗುವಂತೆ ಆಗಾಗ ಕುಡಿಯುತ್ತಿರಬೇಕು.

ನೀರಿನಿಂದಾಗುವ ಉಪಯೋಗಗಳು :
ಹಲ್ಲಿನ ಆರೋಗ್ಯಕ್ಕೆ ನೀರು ಒಂದು ಅತ್ಯಂತ ಪರಿಣಾಮಕಾರಿ ಔಷಧದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
*ನೀರಿನ ಬಳಕೆಯಿಂದ ಹಲ್ಲಿನ ಉತ್ತಮ ಆರೋಗ್ಯವನ್ನು ಕಾಪಾಡುವುದಷ್ಟೇ ಅಲ್ಲದೆ ಬಾಯಿಯಲ್ಲಿನ ಆಹಾರ ಕಣಗಳು, ಉಳಿಕೆ ಆಹಾರ ಪದಾರ್ಥಗಳ ಅಂಶ,..ಎಲ್ಲವೂ ನೀರಿನಿಂದ ತೊಳೆದು ಹೋಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ತಡೆಗಟ್ಟುತ್ತದೆ.

ಸದಾಕಾಲ ಬಾಯಿ ತೇವಾಂಶದಿಂದ ಕೂಡಿದ್ದು, ಒಣ ಬಾಯಿ ಅದರಿಂದ ಆಗುವ ಪರಿಣಾಮಗಳು ಆಗುವುದಿಲ್ಲ
•ಅಜೀರ್ಣ ನಂತಹ ಸಮಸ್ಯೆಗಳು,ತೀವ್ರ ಆಮ್ಲೀಯ ಗುಣ ಲಕ್ಷಣ ಇರುವ ಆಹಾರಗಳನ್ನು ಪಚನದಲ್ಲಿ ಆಗುವ ಸಮಸ್ಯೆಗಳನ್ನು ನೀರು ತಡೆಗಟ್ಟುತ್ತದೆ. ಅತಿ ಆಮ್ಲೀಯ ದೇಹ ಪ್ರಕೃತಿ ಇರುವ ವ್ಯಕ್ತಿಗಳಲ್ಲಿ ಹಲ್ಲುಗಳು ಬಹುಬೇಗನೆ ಸವೆದು ಹೋಗುತ್ತವೆ. ಇದನ್ನು ನೀರು ಸಮತೋಲನಗೊಳಿಸುವ ಮೂಲಕ ಆಗುವ ತೊಂದರೆಗಳನ್ನು ಶುರುವಿನಲ್ಲಿಯೇ ತಡೆಯುತ್ತದೆ.

•ಬಾಯಿಯ ದುರ್ವಾಸನೆ ತಡೆಯುತ್ತದೆ.
•ಬಾಯಿಯ ಆಮ್ಲ ಪ್ರತ್ಯಾಮ್ಲದ ವಾತಾವರಣವನ್ನು ಸಮತೋಲನ ಕಾಯ್ದುಕೊಳ್ಳುತ್ತದೆ. (ಆಮ್ಲೀಯ ಗುಣಲಕ್ಷಣದ ವಾತಾವರಣವಿದ್ದಾಗ ಹಲ್ಲುಗಳು ಬೇಗನೆ ಹುಳುಕು ಹಿಡಿಯುತ್ತವೆ.) ಸಾಮಾನ್ಯವಾಗಿ ಸಿಹಿ, ಅಂಟು, ತೀವ್ರಹುಳಿ, ತೀವ್ರ ಬಿಸಿ…ಇರುವ ಆಹಾರಗಳನ್ನು ಸೇವಿಸಿದಾಗ ಹಲ್ಲುಗಳು ಸಂವೇದನಶೀಲಗೊಳ್ಳುತ್ತವೆ ಹಾಗೂ ಸಿಹಿ ಪದಾರ್ಥ ಸೇವಿಸಿದಾಗ ಬಾಯಿಯಲ್ಲಿನ ಬ್ಯಾಕ್ಟೀರಿಯಗಳು ಆಮ್ಲವನ್ನು ಉತ್ಪತ್ತಿ ಮಾಡುವ ಮೂಲಕ ಹಲ್ಲುಗಳು ಹುಳುಕು ಆಗುವುದನ್ನು ಸಕ್ರಿಯಗೊಳಿಸುತ್ತವೆ.
•ಬಾಯಿಯಲ್ಲಿ ನೀರಿನ ಲಭ್ಯತೆ ಇದ್ದಾಗ ಮೇಲೆ ತಿಳಿಸಿದ ಈ ಕ್ರಿಯೆಯು ನಡೆಯದೆ ಹಲ್ಲುಗಳು ಆರೋಗ್ಯಪೂರ್ಣ ವಾತಾವರಣದಲ್ಲಿ ಇರುತ್ತವೆ.

ಏನು ಮಾಡಬೇಕು?
•ph ಮಟ್ಟ 7 ಅಂದರೆ ಆಮ್ಲ ಮತ್ತು ಪ್ರತ್ಯಾಮ್ಲದ ಸಮತೋಲನ ಇರುವ ನೀರು ಮತ್ತು ಆಹಾರ ಸೇವನೆ ಮಾಡುವುದು.
•ಬಾಯಿ ಒಣಗಲಿ ಬಿಡಲಿ,ದೇಹ ಬೇಡಲಿ ಬಿಡಲಿ ಆಗಾಗ ಸ್ವಲ್ಪವಾದರೂ ನೀರು ಕುಡಿಯುತ್ತಲೇ ಇರಬೇಕು.
•5 ಪಿಪಿಎಂ ಗಿಂತ ಹೆಚ್ಚಾಗಿರುವ ಫ್ಲೋರೈಡ್ ನೀರು ಬಳಸಬಾರದು.
• ತುಂಬಾ ಗಡುಸಾದ ನೀರನ್ನು ಬಳಸುವುದರಿಂದ ಹಲ್ಲಿನ ಮೇಲೆ ಗಾರೆ ಕಿಟ್ಟ ಪದರ ಹರಡಲು ಶುರುವಾಗುತ್ತದೆ ಇದು ಪರೋಕ್ಷವಾಗಿ ವಸಡು ರೋಗ ತರುತ್ತದೆ. ಜೊತೆಗೆ ತುಂಬಾ ಮೃದುತ್ವ ಇರುವ ನೀರನ್ನು ಕೂಡ ಬಳಸಬಾರದು. ಅತಿ ಮೃದುತ್ವ(TDS ) ಇರುವ ನೀರಿನಲ್ಲಿ ಯಾವುದೇ ಖನಿಜಾಂಶ ಇರದೆ ದೇಹಕ್ಕೆ ಆರೋಗ್ಯ ತರುವುದಿಲ್ಲ. ಮೃದು ನೀರು ಕೇವಲ ನಾಲಿಗೆಗೆ ರುಚಿ ಹೊರತು ದೇಹಕ್ಕೆ ಯಾವುದೇ ಉಪಯೋಗವಾಗುವುದಿಲ್ಲ.
• ಆಮ್ಲೀಯ ಗುಣಲಕ್ಷಣವಿರುವ ಜ್ಯೂಸ್, ಹೆಚ್ಚು ಸಕ್ಕರೆ ಮಿಶ್ರಿತ ಹಣ್ಣಿನ ರಸ, ಕಾರ್ಬೋನೇಟೆಡ್ ಅಂದರೆ ಕೋಕಕೋಲಾ,ಪೆಪ್ಸಿ ಸ್ಪ್ರಿಂಗ್… ನಂತಹ ಪಾನೀಯಗಳನ್ನು ಎಂದಿಗೂ ಸೇವಿಸಬಾರದು. ಇದು ಅತಿ ಆಮ್ಲಿಯತೆ ಹೆಚ್ಚಿಸುತ್ತದೆ, ಹಲ್ಲನ್ನು ಕರಗಿಸುವ ಕಾರ್ಬೊನೇಟ್ ಆಮ್ಲಗಳು ನೇರವಾಗಿ ಹಲ್ಲಿನ ಮೇಲೆ ದಾಳಿ ಮಾಡಿ ಹಲ್ಲು ಬೇಗ ಹುಳುಕು ಹಿಡಿಯುವಂತೆ ಮಾಡುತ್ತವೆ, ಹಲ್ಲುಗಳನ್ನು ಕರಗುವಂತೆ ಮಾಡುತ್ತವೆ.

• ಹಲ್ಲಿನ ಪೂರಕ ಆರೋಗ್ಯ ಹಾಗೂ ಸಂರಕ್ಷಣೆ ಕುರಿತಾಗಿ ಪ್ರತಿ ಆರು ತಿಂಗಳಿಗೆ ಒಮ್ಮೆ ದಂತ ವೈದ್ಯರನ್ನು ತಪ್ಪದೆ ಭೇಟಿ ಮಾಡಬೇಕು.
•ಸಕ್ಕರೆ ಅಂಶ ಕಡಿಮೆ ಇರುವ ಆಹಾರವನ್ನೇ ಸೇವಿಸಬೇಕು.
•ಪ್ರತಿದಿನ ತಪ್ಪದೆ ಎರಡು ಬಾರಿ ಬ್ರಷ್ ಮಾಡಬೇಕು.
• ನೀರು ಹೆಚ್ಚು ಕುಡಿದರೆ ಪದೇಪದೇ ಶೌಚಾಲಯಕ್ಕೆ ಹೋಗಬೇಕು ಎಂದುಕೊಂಡು ನೀರು ಕುಡಿಯದೆ ಹಾಗೆ ಇದ್ದರೆ ಜೀರ್ಣಕ್ರಿಯೆಯಲ್ಲಿ ವ್ಯತ್ಯಯ ಜೊತೆಗೆ ಹಲ್ಲಿನ ಅನಾರೋಗ್ಯ ಎರಡೂ ಸಮಸ್ಯೆ ಬರಬಹುದು.
• ನೀರಿನಲ್ಲಿರುವ ಖನಿಜಾಂಶಗಳು ನೀರಿನ ಬಳಕೆಯಿಂದ ಹಲ್ಲಿನ ಆರೋಗ್ಯಕ್ಕೆ ಪೂರಕವಾಗುವಂತೆ ಕೆಲಸ ಮಾಡುತ್ತವೆ.
•ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಬೆರೆಸಿಕೊಂಡು ವಾರಕ್ಕೆ ಎರಡು ಮೂರು ಬಾರಿ ಮುಕ್ಕಳಿಸಿದರೆ ಇದು ಕ್ರಿಮಿ ನಿರೋಧಕವಾಗಿ ಕೆಲಸ ಮಾಡುತ್ತವೆ.
ಬಾಯಿಯ ಆರೋಗ್ಯವೇ ದೇಹದ ಆರೋಗ್ಯಕ್ಕೆ ಪೂರಕ ಎಂಬುದನ್ನು ಎಂದಿಗೂ ಮರೆಯಬಾರದು. ಬಾಯಿಯ ಹಾಗೂ ದಂತಾರೋಗ್ಯಕ್ಕೆ ನೀರೇ ಅಮೃತ.
ನೀರು ಸೇವನೆ ಕಡಿಮೆಗೊಳಿಸಿದಷ್ಟು ದಂತ ಆರೋಗ್ಯದ ಹಾನಿ ನಿಶ್ಚಿತ.

ಯಾವ ರೀತಿ ನೀರು ನಮಗೆ ಮುಖ್ಯ?
• ನೈಸರ್ಗಿಕವಾಗಿ ಸಿಗುವ ನೀರು ಬಹಳ ಅತ್ಯುತ್ತಮ ಔಷಧಿ ಆಗಿರುತ್ತದೆ. ಉದಾಹರಣೆಗೆ ಮಳೆ ನೀರು, ಬಾವಿಯ ನೀರು.. ಇದರಲ್ಲಿ ಎಲ್ಲಾ ಖನಿಜಾಂಶಗಳು ಸಮತೋಲನ ಪ್ರಮಾಣದಲ್ಲಿ ಇತ್ತು ದೇಹಕ್ಕೆ ಅತ್ಯುತ್ತಮವಾಗಿ ಆರೋಗ್ಯ ಒದಗಿಸುತ್ತದೆ.
• ಮನೆಯಲ್ಲಿ ನಾವು ಬಳಸುವ ಫಿಲ್ಟರ್ ನೀರು, RO ಫಿಲ್ಟರ್ಡ್ ನೀರಿನಲ್ಲಿ ಎಷ್ಟು ಖನಿಜಾಂಶ ಪೋಷಕಾಂಶಗಳು ಸೇರಿವೆ, TDS ಪ್ರಮಾಣವೇನು? ಎಲ್ಲದರ ಅರಿವು ಇರಬೇಕು.
ಅತಿ ಫಿಲ್ಟರ್ ನೀರು ಬಳಸುವುದರಿಂದ ಪೂರಕ ಪೋಷಕಾಂಶಗಳು ದೇಹಕ್ಕೆ ದೊರಕುವುದಿಲ್ಲ.
• ಹಾನಿಕಾರಕ ಖನಿಜಾಂಶಗಳಾದ ಕ್ಯಾಡ್ಮಿಯಂ, ಸಲ್ಫರ್(ಗಂಧಕ ) ನಂತಹ ಯಾವ ಪ್ರಮಾಣದಲ್ಲಿ ನೀರಲ್ಲಿ ಬೆರೆತಿದೆ ಎಂಬುದರ ಪರೀಕ್ಷೆಗಳನ್ನು ಸರ್ಕಾರದ ಮಟ್ಟದಲ್ಲಿ ನಡೆಸುವಂತಾಗಬೇಕು.
• ನಾವು ಕುಡಿಯುವ ನೀರು ಯಾವ ಮೂಲದಿಂದ ಬರುತ್ತಿದೆ ಎಂಬುದರ ಬಗ್ಗೆ ಅರಿವು ಇರಬೇಕು.
• ಕಾರಣವಿಲ್ಲದೆ ಆಗಾಗ ಕಾಯಿಲೆ ಬೀಳುತ್ತಿದ್ದರೆ ಅದಕ್ಕೆ ನಾವು ಬಳಸುತ್ತಿರುವ ನೀರು ಕಾರಣವಾಗಿರಬಹುದು.
• ಫ್ಲೋರೈಡ್ ಪ್ರಮಾಣ ನೀರಿನಲ್ಲಿ ಅತಿ ಹೆಚ್ಚಾಗಿ ಇರದಂತೆ ನೋಡಿಕೊಳ್ಳಬೇಕು ಇದರಿಂದ ಹಲ್ಲುಗಳು ಶೀಘ್ರ ಹಾಳಾಗುತ್ತದೆ ತನ್ನ ಗಡಸುತನ ಕಳೆದುಕೊಳ್ಳುತ್ತವೆ. ಸಾಂದ್ರತೆ ಇರದ ಹಲ್ಲುಗಳ ಮೇಲೆ ಹಳದಿ ಚುಕ್ಕಿಗಳು ಮೂಡುತ್ತವೆ.
•ತೀರಾ ಕಡಿಮೆಯಾಗದಂತೆ, ತೀರಾ ಹೆಚ್ಚಾಗದಂತೆ ಎಲ್ಲಾ ಖನಿಜಾಂಶಗಳು ನಾವು ಕುಡಿಯುವ ನೀರಿನಲ್ಲಿ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳಬೇಕು.
•ಬಾಟಲಿ ನೀರು ಅತ್ಯುತ್ತಮ ಎಂಬ ಭ್ರಮೆಯಿಂದ ಹೊರಗೆ ಬರಬೇಕು.
• ತಾಮ್ರದ ಪಾತ್ರೆಗಳನ್ನು ನೀರನ್ನು ಶೇಖರಿಸಲು ಬಳಸಬೇಕು ಮತ್ತು ಅದೇ ನೀರನ್ನು ಪ್ರತಿನಿತ್ಯ ಬಳಸಲು ಪ್ರಾರಂಭಿಸಬೇಕು.
•ಪ್ಲಾಸ್ಟಿಕ್ ಕ್ಯಾನುಗಳನ್ನು ನೀರನ್ನು ಶೇಖರಿಸಲು ಬಳಸುವಾಗ ಎಂದಿಗೂ ಅದನ್ನು ಬಿಸಿಲಲ್ಲಿ ಇರಿಸಬಾರದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now