ಮಾಹಿತಿ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ನ.09) : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಕರಡು ಪಟ್ಟಿಯನ್ನು ಬುಧವಾರದಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕಿನ ಮತದಾರರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಕರಡು ಪಟ್ಟಿಯನ್ನು ಬುಧವಾರದಂದು ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅರ್ಹರಿರುವ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಒಂದು ತಿಂಗಳ ಕಾಲ ಸ್ವೀಪ್ ಕಾರ್ಯಕ್ರಮದಡಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯ ಪ್ರಭು ಅವರು ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಕರಡು ಮತದಾರರ ಪಟ್ಟಿ ಪ್ರಕಟಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಜಿಲ್ಲೆಯಾದ್ಯಂತ ಆರಂಭವಾಗಿದ್ದು, ಮತದಾರರ ಕರಡು ಪಟ್ಟಿಯನ್ನು ಬುಧವಾರದಂದು ಪ್ರಕಟಿಸಲಾಗಿದೆ. ಕರಡು ಪಟ್ಟಿ ಜಿಲ್ಲೆಯ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ, ಉಪವಿಭಾಗಾದಿಕಾರಿಗಳ ಕಚೇರಿ, ಆಯಾ ಮತಗಟ್ಟೆಗಳು, ಗ್ರಾ.ಪಂ., ನಗರಸಭೆ, ಪುರಸಭೆ, ಪಟ್ಟಣ www.ceokarnataka.kar.nic.in ಮತ್ತು https://chitradurga.nic.in ನಲ್ಲಿಯೂ ಲಭ್ಯವಿದ್ದು, ಪರಿಶೀಲಿಸಬಹುದಾಗಿದೆ.
18 ವರ್ಷ ವಯಸ್ಸು ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಬಹುದಾಗಿದ್ದು, ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಫೋಟೋ ಬದಲಾವಣೆ ಹೀಗೆ ವಿವಿಧ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲು ಸಾರ್ವಜನಿಕರು ಹಾಗೂ ಮತದಾರರಿಗೆ ಡಿ. 08 ರವರೆಗೂ ಕಾಲಾವಕಾಶ ನೀಡಲಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನ. 12, ನ. 20, ಡಿ. 03 ಹಾಗೂ ಡಿ. 04 ರಂದು ಮಿಂಚಿನ ನೊಂದಣಿ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುವುದು.
ದಾಖಲೆಗಳೇನು ಬೇಕು ? ವಯಸ್ಸು ದೃಢೀಕರಣಕ್ಕೆ ಸಕ್ಷಮ ಸ್ಥಳೀಯ ಸಂಸ್ಥೆ, ಪ್ರಾಧಿಕಾರ ನೀಡುವ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಭಾರತೀಯ ಪಾಸ್‍ಪೋರ್ಟ್ ಇವಿಷ್ಟು ದಾಖಲೆಗಳು ಸಾಕು. ವಿಳಾಸ ದೃಢೀಕರಣಕ್ಕೆ ನೀರು, ವಿದ್ಯುತ್, ಗ್ಯಾಸ್ ಸಂಪರ್ಕದ ಬಿಲ್, ಆಧಾರ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಪಾಸ್‍ಬುಕ್, ಪಾಸ್‍ಪೋರ್ಟ್, ಕಿಸಾನ್ ವಹಿ ಒಳಗೊಂಡ ಕಂದಾಯ ಇಲಾಖೆಯ ಭೂ ಮಾಲೀಕತ್ವದ ದಾಖಲೆಗಳು, ಬಾಡಿಗೆದಾರರಿದ್ದಲ್ಲಿ ನೊಂದಾಯಿತ ಬಾಡಿಗೆ ಭೋಗ್ಯ ಪತ್ರ, ಸ್ವಂತ ಮನೆಯಿದ್ದಲ್ಲಿ ನೊಂದಾಯಿತ ಕ್ರಯ ಪತ್ರ. ಇವಿಷ್ಟು ದಾಖಲೆಗಳ ಪೈಕಿ ಯಾವುದಾದರೂ ದಾಖಲೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.