Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

Video: ಮೊದಲ ಬಾರಿಗೆ ಧ್ವಂಸಗೊಂಡ ಖಮೇನಿ ನಿವಾಸದ ವಿಡಿಯೋ ಬಿಡುಗಡೆ ಮಾಡಿದ ಇರಾನ್!

---Advertisement---

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಮೃತಪಟ್ಟ ಇರಾನ್ ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ತೇಹ್ರಾನ್ ನಲ್ಲಿರುವ ನಿವಾಸಕ್ಕೆ ಉಂಟಾಗಿರುವ ಭೀಕರ ಹಾನಿಯ ಮೊದಲ ವಿಡಿಯೋ ದೃಶ್ಯಾವಳಿಗಳನ್ನು ಇರಾನ್ನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಬಿಡುಗಡೆ ಮಾಡಿವೆ. ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ದಿನದಂದೇ ಈ ಹಿಂದೆ ಎಂದೂ ನೋಡಿರದ ವಿಡಿಯೋವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗಿದೆ.

ಬಿಡುಗಡೆ ಮಾಡಲಾದ 35 ಸೆಕೆಂಡುಗಳ ಈ ವಿಡಿಯೋದಲ್ಲಿ, ಖಮೇನಿ ಅವರ ಕಾಂಪೌಂಡ್ ಒಳಗಿರುವ ‘ಇಮಾಮ್ ಖೊಮೇನಿ ಹುಸೇನಿಯಾ’ ಸಭಾಂಗಣವು ಸಂಪೂರ್ಣವಾಗಿ ಧ್ವಂಸಗೊಂಡಿರುವುದು ಕಂಡುಬಂದಿದೆ. ದಾಳಿಯ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಕಬ್ಬಿಣದ ಬೀಮ್ಗಳು ತಿರುಚಿಕೊಂಡಿವೆ. ಎಲ್ಲೆಡೆ ಅವಶೇಷಗಳ ರಾಶಿ ಬಿದ್ದಿದೆ. ಈ ಸಭಾಂಗಣವನ್ನು ಅಲಿ ಖಮೇನಿ ಅವರು ಪ್ರಮುಖ ಸಭೆಗಳನ್ನು ನಡೆಸಲು ಮತ್ತು ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲು ಬಳಸುತ್ತಿದ್ದರು.

ಫೆಬ್ರವರಿ 28ರ ಭೀಕರ ದಾಳಿ

ಕಳೆದ ಫೆಬ್ರವರಿ 28 ರಂದು ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧದ ಮೊದಲ ದಿನವೇ ನಡೆದ ವೈಮಾನಿಕ ದಾಳಿಯಲ್ಲಿ 86 ವರ್ಷದ ಅಲಿ ಖಮೇನಿ ಮೃತಪಟ್ಟಿದ್ದರು. ಈ ದಾಳಿಯಲ್ಲಿ ಅವರ 14 ತಿಂಗಳ ಮೊಮ್ಮಗಳು ಸೇರಿದಂತೆ ಕುಟುಂಬದ ಹಲವು ಸದಸ್ಯರು ಪ್ರಾಣ ಕಳೆದುಕೊಂಡಿದ್ದರು. ಇರಾನ್ನ ಪ್ರಸ್ತುತ ಹೊಸ ಸರ್ವೋಚ್ಚ ನಾಯಕ ಹಾಗೂ ಖಮೇನಿ ಅವರ ಪುತ್ರ ಮೊಜ್ತಬಾ ಅಲಿ ಖಮೇನಿ ಕೂಡ ಈ ದಾಳಿಯಲ್ಲಿ ಗಾಯಗೊಂಡಿದ್ದರು.

ಅಲಿ ಖಮೇನಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಅವರ ತವರು ನಗರಿ ಈಶಾನ್ಯ ಇರಾನ್ನ ಮಶ್ಹಾದ್ನಲ್ಲಿ ಇಂದು ನೆರವೇರಲಿದೆ. ಇದರೊಂದಿಗೆ ಒಂದು ವಾರ ಕಾಲ ನಡೆದ ಭವ್ಯ ಶೋಕಯಾತ್ರೆಗೆ ತೆರೆ ಬೀಳಲಿದೆ. ಇರಾನ್ನ ಟೆಹ್ರಾನ್, ಕೋಮ್ ಹಾಗೂ ಇರಾಕ್ನ ಪವಿತ್ರ ಶಿಯಾ ನಗರಗಳಾದ ನಜಾಫ್ ಮತ್ತು ಕರ್ಬಲಾದಲ್ಲಿ ನಡೆದ ಮೆರವಣಿಗೆಯಲ್ಲಿ ಲಕ್ಷಾಂತರ ಮುಸ್ಲಿಂ ಧರ್ಮೀಯರು ಭಾಗವಹಿಸಿ ಕಣ್ಣೀರಿಟ್ಟಿದ್ದರು.

ಮತ್ತೆ ಹೆಚ್ಚಿದ ಮಹಾಯುದ್ಧದ ಭೀತಿ

ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧ ಕೊನೆಗೊಳಿಸುವ ಮಧ್ಯಂತರ ಒಪ್ಪಂದ ‘ಮುಗಿದ ಅಧ್ಯಾಯ’ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಮೇಲೆ ಅಮೆರಿಕ ಸೇನೆ ಮತ್ತೆ ಹೊಸ ದಾಳಿಗಳನ್ನು ಆರಂಭಿಸಿದೆ. ಆಯಕಟ್ಟಿನ ಗಲ್ಫ್ ಪ್ರದೇಶವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗುಗಳ ಸಂಚಾರವನ್ನು ಮುಕ್ತವಾಗಿಡಲು ಈ ದಾಳಿ ನಡೆಸುತ್ತಿರುವುದಾಗಿ ಯುಎಸ್ ಮಿಲಿಟರಿ ಸಮರ್ಥಿಸಿಕೊಂಡಿದೆ.

ಮಂಗಳವಾರ ಮೂರು ಸರಕು ಸಾಗಣೆ ಹಡಗುಗಳ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಅಮೆರಿಕ ಈ ಕ್ರಮ ಕೈಗೊಂಡಿದ್ದು, ಇರಾನ್ನ ದಕ್ಷಿಣ ಕರಾವಳಿಯ ಹಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಬಹ್ರೇನ್ ಮತ್ತು ಕುವೈತ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಗಲ್ಫ್ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಮಹಾಯುದ್ಧ ಭುಗಿಲೇಳುವ ಆತಂಕ ಸೃಷ್ಟಿಯಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now