Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವೈದ್ಯೋ ನಾರಾಯಣ ಹರಿ: ದೇವರ ರೂಪದ ವೈದ್ಯರಿಗೆ ನಮನ; ಜುಲೈ 1 ರಂದು ‘ರಾಷ್ಟ್ರೀಯ ವೈದ್ಯರ ದಿನ’ದ ಹಿನ್ನೆಲೆ ಮತ್ತು ಮಹತ್ವ!

---Advertisement---

ಸುದ್ದಿಒನ್, ಬೆಂಗಳೂರು, ಜುಲೈ. 01 :  “ವೈದ್ಯೋ ನಾರಾಯಣ ಹರಿ” ಎಂದರೆ ವೈದ್ಯರು ದೇವರೊಂದಿಗೆ ಸಮಾನರು ಎಂದರ್ಥ. ಇದು ನೂರಕ್ಕೆ ನೂರು ಸತ್ಯವಾದ ಮಾತು. ಪ್ರತಿಯೊಬ್ಬರಿಗೂ ಆರೋಗ್ಯವೇ ಮಹಾಭಾಗ್ಯ. ಅನಾರೋಗ್ಯಕ್ಕೆ ಒಳಗಾದವರನ್ನು ಮರಳಿ ಆರೋಗ್ಯವಂತರನ್ನಾಗಿ ಮಾಡುವುದು ವೈದ್ಯರ ಪರಮ ಕರ್ತವ್ಯ. ಎಂತಹ ಭೀಕರ ಕಾಯಿಲೆಗಳಿಂದಲೂ ಜನರನ್ನು ಹೊರತಂದು ಪ್ರಾಣ ಉಳಿಸುವ, ಸಾವಿನ ಅಂಚಿಗೆ ಸರಿದವರನ್ನು ಮರಳಿ ಬದುಕಿಸುವ ವೈದ್ಯರು ನಿಜಕ್ಕೂ ಭೂಮಿಯ ಮೇಲಿನ ನಡೆದಾಡುವ ದೇವರೆಂದರೆ ತಪ್ಪಾಗಲಾರದು. ಜುಲೈ 1 ರಂದು ಆಚರಿಸಲಾಗುವ ‘ರಾಷ್ಟ್ರೀಯ ವೈದ್ಯರ ದಿನ’ದ (National Doctors’ Day) ಹಿನ್ನೆಲೆಯಲ್ಲಿ ಕೆಲವು ಪ್ರಮುಖ ವಿಷಯಗಳನ್ನು ಇಲ್ಲಿ ತಿಳಿಯೋಣ.

ವೈದ್ಯರು ನಮಗೆ ಮರುಜನ್ಮ ನೀಡುವ ರಕ್ಷಕರು
ತಾಯಿ ನಮಗೆ ಜನ್ಮ ನೀಡಿದರೆ, ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾದಾಗ ನಮ್ಮನ್ನು ಕಾಪಾಡಿ ವೈದ್ಯರು ಮರುಜನ್ಮ ನೀಡುತ್ತಾರೆ. ಅದಕ್ಕಾಗಿಯೇ ನಮ್ಮ ಜೀವನದಲ್ಲಿ ವೈದ್ಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸಣ್ಣ ಜ್ವರದಿಂದ ಹಿಡಿದು ಅಪಘಾತ, ತುರ್ತು ಪರಿಸ್ಥಿತಿಗಳವರೆಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ನಾವು ಮೊದಲು ಓಡುವುದು ವೈದ್ಯರ ಬಳಿಗೇ. ಸಮಾಜದಲ್ಲಿ ಅವರಿಗೆ ಅತ್ಯುನ್ನತ ಗೌರವ ಇರುವುದಕ್ಕೆ ಅವರ ನಿಸ್ವಾರ್ಥ ಸೇವೆಯೇ ಕಾರಣ.

ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕ ರೋಗದ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರ ಸೇವೆ ಮರೆಯಲಾಗದ್ದು. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹಗಲಿರುಳು ಶ್ರಮಿಸಿ ಲಕ್ಷಾಂತರ ರೋಗಿಗಳ ಪ್ರಾಣ ಉಳಿಸಿದರು. ಸಾಮಾನ್ಯವಾಗಿ ರೋಗ ವಾಸಿಯಾಗಲು ಔಷಧಗಳು ಬೇಕು, ಆದರೆ ಆ ಕಾಯಿಲೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವೈದ್ಯರ ಸಹಕಾರ ಮತ್ತು ಅವರು ನೀಡುವ ಧೈರ್ಯ ಅತಿ ಮುಖ್ಯ. ವೈದ್ಯರ ಆ ಪ್ರೀತಿಯ ಮಾತುಗಳೇ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಿ ಬೇಗ ಗುಣಮುಖರಾಗುವಂತೆ ಮಾಡುತ್ತದೆ.

ವೈದ್ಯರ ಬಳಿ ಸುಳ್ಳು ಹೇಳಬೇಡಿ!
ನಾವು ಅನಾರೋಗ್ಯದಿಂದ ಬಳಲುತ್ತಿರುವಾಗ ಮಾನಸಿಕವಾಗಿಯೂ ಕುಗ್ಗಿಹೋಗುತ್ತೇವೆ. ಅಂತಹ ಸಮಯದಲ್ಲಿ ವೈದ್ಯರು ನಮಗೆ ಧೈರ್ಯ ತುಂಬಿ ಆ ಸಮಸ್ಯೆಯಿಂದ ಹೊರಬರುವಂತೆ ಮಾಡುತ್ತಾರೆ. ಇದಕ್ಕಾಗಿ ನಾವು ಮೊದಲು ಮಾಡಬೇಕಾದ ಕೆಲಸವೆಂದರೆ, ನಮ್ಮ ಸಮಸ್ಯೆ ಏನೆಂಬುದನ್ನು ವೈದ್ಯರಿಗೆ ಸಂಪೂರ್ಣವಾಗಿ ವಿವರಿಸಬೇಕು. ಮುಖ್ಯವಾಗಿ, ವೈದ್ಯರ ಬಳಿ ಎಂದಿಗೂ ಯಾವುದೇ ಆರೋಗ್ಯ ವಿಷಯವನ್ನು ಮುಚ್ಚಿಡಬಾರದು ಅಥವಾ ಸುಳ್ಳು ಹೇಳಬಾರದು. ಹಾಗೆ ಮಾಡಿದರೆ ನಮ್ಮ ಅನಾರೋಗ್ಯವನ್ನು ನಾವೇ ಇನ್ನಷ್ಟು ದೊಡ್ಡದು ಮಾಡಿಕೊಂಡಂತಾಗುತ್ತದೆ. ನಮ್ಮ ದೇಹದ ಸ್ಥಿತಿಯನ್ನು ಸರಿಯಾಗಿ ಹೇಳಿದಾಗ ಮಾತ್ರ ಅವರು ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಇನ್ನು ಇಂದಿನ ದಿನಗಳಲ್ಲೂ ಎಷ್ಟೋ ವೈದ್ಯರು ಉನ್ನತ ಶಿಕ್ಷಣ ಪಡೆದಿದ್ದರೂ, ಹಣದ ಆಸೆ ಇಲ್ಲದೆ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಇಂತಹ ವೈದ್ಯರೆಲ್ಲರೂ ಮಾನವ ರೂಪದಲ್ಲಿರುವ ದೇವರೆ ಸರಿ.

ವೈದ್ಯರ ದಿನವನ್ನು ಏಕೆ ಆಚರಿಸಲಾಗುತ್ತದೆ?
ಭಾರತದಲ್ಲಿ ಪ್ರತಿ ವರ್ಷ ಜುಲೈ 1 ರಂದು ‘ರಾಷ್ಟ್ರೀಯ ವೈದ್ಯರ ದಿನ’ವನ್ನು ಆಚರಿಸಲಾಗುತ್ತದೆ. ಇದನ್ನು ಮೊದಲ ಬಾರಿಗೆ 1991 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಈ ವಿಶೇಷ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದರ ಹಿನ್ನೆಲೆಯನ್ನು ನೋಡುವುದಾದರೆ, ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಪ್ರಸಿದ್ಧ ವೈದ್ಯ ಡಾ. ಬಿಧನ್ ಚಂದ್ರ ರಾಯ್ (Dr. Bidhan Chandra Roy) ಅವರ ಗೌರವಾನ್ವಿತ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇವರು 1882 ರ ಜುಲೈ 1 ರಂದು ಜನಿಸಿ, ಭಗವಂತನ ಪವಾಡ ಎಂಬಂತೆ 1962 ರ ಜುಲೈ 1 ರಂದೇ ನಿಧನರಾದರು.

ಡಾ. ಬಿಧನ್ ಚಂದ್ರ ರಾಯ್ ಅವರು ತಮ್ಮ ವೈದ್ಯಕೀಯ ಸೇವೆಯ ಅವಧಿಯಲ್ಲಿ ಅಸಂಖ್ಯಾತ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದರು. ವೈದ್ಯಕೀಯ ಕ್ಷೇತ್ರ ಮತ್ತು ಸಮಾಜಕ್ಕೆ ಅವರು ನೀಡಿದ ನಿಸ್ವಾರ್ಥ ಕೊಡುಗೆಯನ್ನು ಪರಿಗಣಿಸಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ. ಅವರ ಜನ್ಮದಿನ ಮತ್ತು ಪುಣ್ಯತಿಥಿಯ ಸವಿನೆನಪಿನಲ್ಲಿಯೇ ಭಾರತದಲ್ಲಿ ಜುಲೈ 1 ರಂದು ವೈದ್ಯರ ದಿನವನ್ನು ಆಚರಿಸಿ, ಸಮಾಜದ ಎಲ್ಲಾ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now