ಸುದ್ದಿಒನ್,ಉತ್ತರ ಕನ್ನಡ,ಮೇ.24: ಭಾನುವಾರದ ರಜಾ ದಿನದಂದು ಕರಾವಳಿ ಜಿಲ್ಲೆಯಲ್ಲಿ ಕಣ್ಣೀರು ತರಿಸುವ ಘೋರ ದುರಂತವೊಂದು ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ಆರಿಸಲು ಹೋದ ಸ್ಥಳೀಯ ಗ್ರಾಮಸ್ಥರ ಪೈಕಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನದಿಯ ಭೀಕರ ಸೆಳತಕ್ಕೆ ಸಿಲುಕಿ ಅಸ್ವಸ್ಥಗೊಂಡಿರುವ 8 ಜನರ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಭಾನುವಾರ ರಜೆಯ ಮಜಾ ಕಳೆಯಲು ಶಿರಾಲಿ ಗ್ರಾಮದ ಸುಮಾರು 14 ಜನರ ತಂಡವೊಂದು ತಟ್ಟೆಹಕ್ಕಲು ನದಿ ತೀರಕ್ಕೆ ಬಂದಿತ್ತು. ಕರಾವಳಿ ಭಾಗದಲ್ಲಿ ಆಹಾರ ಮತ್ತು ವ್ಯಾಪಾರದ ಉದ್ದೇಶಕ್ಕಾಗಿ ನದಿಯಲ್ಲಿ ಕಪ್ಪೆಚಿಪ್ಪುಗಳನ್ನು (ಸಿಂಪಿ/ಶಂಖ) ಸಂಗ್ರಹಿಸುವುದು ಸಾಮಾನ್ಯ. ಅದರಂತೆ ಈ ತಂಡದ ಸದಸ್ಯರು ಕೂಡ ನದಿಗೆ ಇಳಿದಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.
ನದಿಯ ಆಳ ಮತ್ತು ನೀರಿನ ರಭಸದ ಅರಿವಿಲ್ಲದೆ ಇವರೆಲ್ಲರೂ ನದಿಯ ಮಧ್ಯಭಾಗಕ್ಕೆ ತೆರಳಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ನೀರಿನ ಪ್ರವಾಹದ ವೇಗ ಹೆಚ್ಚಾಗಿದ್ದು, ನದಿಯ ಸುಳಿಗೆ ಸಿಲುಕಿ ಎಲ್ಲರೂ ತೇಲಿ ಹೋಗಲಾರಂಭಿಸಿದ್ದಾರೆ. ಒಬ್ಬರನ್ನೊಬ್ಬರು ಬಚಾವ್ ಮಾಡಲು ಹೋದಾಗ ದುರಂತದ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.
ನದಿಯ ಆಳಕ್ಕೆ ಸಿಲುಕಿದ ಮೂವರು ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸದ್ಯ ಮೃತದೇಹಗಳನ್ನು ಹೊರತೆಗೆಯಲು ನದಿಯಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡಿಯುತ್ತಿದೆ. ಸ್ಥಳೀಯ ಈಜುಗಾರರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಇದೇ ವೇಳೆ, ನದಿಯ ಪ್ರವಾಹದಿಂದ ಹೇಗೋ ಬದುಕುಳಿದು, ತೀವ್ರ ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದ 9 ಜನರನ್ನು ಸ್ಥಳೀಯರು ತಕ್ಷಣವೇ ರಕ್ಷಿಸಿದ್ದಾರೆ. ಇವರನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿತಿಯೂ ಸದ್ಯ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















