ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಹಾಗೂ ಲಸಿಕೆ ಅಭಿಯಾನಕ್ಕೆ ಕೇಂದ್ರ ಸಚಿವರ ಮೆಚ್ಚುಗೆ

ಬೆಂಗಳೂರು: ರಾಜ್ಯದಲ್ಲಿನ ಕೋವಿಡ್ 19 ಸೋಂಕಿನ ನಿರ್ವಹಣೆ ಹಾಗೂ ಲಸಿಕೆ ಕಾರ್ಯಕ್ರಮದ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ ಸುಖ್ ಎಲ್. ಮಾಂಡವೀಯ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಮಂತ್ರಿಯವರನ್ನು ಅಭಿನಂದಿಸಿದರು.

ಅವರು ಇಂದು ನಗರದ ಎಸ್.ಡಿ.ಎಸ್.- ಟಿ.ಆರ್.ಸಿ ಮತ್ತು ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ಆವರಣದಲ್ಲಿ ಸರ್ಕಾರದ ಮತ್ತು ಸಿ.ಎಸ್.ಆರ್. ಅನುದಾನದಡಿಯಲ್ಲಿ ನಿರ್ಮಿಸಲಾಗಿರುವ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.

ರಾಜ್ಯದ ಲಸಿಕೆ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿರುವ ಕುರಿತು ಅವರು ತಮ್ಮ ಅನುಭವವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ರಾಜ್ಯದಲ್ಲಿ ಶೇ. 83 ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಸೆಪ್ಟೆಂಬರ್ 17ರಂದು ನಡೆಸಿದ ವಿಶೇಷ ಅಭಿಯಾನದಲ್ಲಿ ದೇಶದಲ್ಲಿ ಒಟ್ಟು 2.5 ಕೋಟಿ ಡೋಸ್ ಲಸಿಕೆ ನೀಡಲಾಯಿತು. ಇದರಲ್ಲಿ ಕರ್ನಾಟಕ ರಾಜ್ಯ ಅತಿ ಹೆಚ್ಚು ಲಸಿಕೆ ನೀಡಿ ದಾಖಲೆ ನಿರ್ಮಿಸಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಜನತೆಯನ್ನು ಸಚಿವರು ಅಭಿನಂದಿಸಿದರು.

ಕೋವಿಡ್ 19 ಸಾಂಕ್ರಾಮಿಕ ನಿಯಂತ್ರಣದಲ್ಲಿದ್ದರೂ ಇನ್ನೂ ಅಂತ್ಯವಾಗಿಲ್ಲ. ಆದ್ದರಿಂದ ಸರ್ಕಾರಗಳು ಜಾಗರೂಕರಾಗಿರುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ಅಗತ್ಯವಿದ್ದೆಡೆ ಸುಲಭವಾಗಿ ಸ್ಥಳಾಂತರಿಸಬಹುದಾದ ಫೀಲ್ಡ್ ಆಸ್ಪತ್ರೆಗಳನ್ನು ಕರ್ನಾಟಕದಲ್ಲಿ ಸ್ಥಾಪಿಸುತ್ತಿರುವುದು ಒಂದು ದೂರದೃಷ್ಟಿಯ ನಡೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!