ಮೈಶುಗರ್ ಖಾಸಗೀಕರಣ ಸಂಬಂಧ ಉಪ ಸಮಿತಿ ರಚನೆ : ಮಾಧುಸ್ವಾಮಿ

suddionenews
3 Min Read

ಬೆಂಗಳೂರು: ಪೊಲೀಸ್ ನೇಮಕ ನಿಯಮಾವಳಿ ರೂಪಿಸಲು ಅನುಮತಿ ದೊರೆತಿದೆ. ಪೊಲೀಸ್ ಪೇದೆಯಿಂದ ಸಬ್ ಇನ್ಸ್​​ಪೆಕ್ಟರ್ ವರೆಗಿನ ಬಡ್ತಿಗೆ 8 ಮತ್ತು 5 ವರ್ಷ ಇತ್ತು. ಇದೀಗ ಇದನ್ನು 4 ವರ್ಷಕ್ಕೆ ಇಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು. ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದೇ ರೀತಿ ಮಂಡ್ಯ ಶುಗರ್ ಕಾರ್ಖಾನೆ ಪ್ರಾರಂಭ ಕುರಿತು ಚರ್ಚಿಸಲು ಸಚಿವ ಸಂಪುಟದ ಉಪ ಸಮಿತಿ ರಚನೆ ಹಾಗೂ ದತ್ತ ಪೀಠಕ್ಕೆ ಅರ್ಚಕರ ನೇಮಕ ವಿಚಾರದಲ್ಲಿ ಹೈಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಕಾನೂನು ಸಚಿವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಸೇರಿದಂತೆ ಹಲವು ಮಹತ್ವದ ವಿಷಯಗಳಿಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದರು.

ಸಹಕಾರ ಇಲಾಖೆ ಸಾಲ ಪಡೆಯಲು ಶೂರಿಟಿಬಾಂಡ್​​​​ ನಿಂದ 1550 ಕೋಟಿ ರೂ. ಸಾಲ ಪಡೆಯಲು ಖಾತರಿಗೆ ಒಪ್ಪಿಗೆ ನೀಡಲಾಗಿದೆ. ‌ಕರಾವಳಿ ನದಿ ಕಾರ್ ಲ್ಯಾಂಡ್ ಯೋಜನೆಗೆ 300 ಕೋಟಿ ರೂ. ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಪೊಲೀಸ್ ನೇಮಕಾತಿಗೆ ನಿಯಮಾವಳಿ ರೂಪಿಸಲು ಅನುಮತಿ ನೀಡಲಾಗಿದ್ದು, ಇದರಿಂದ ಪೊಲೀಸ್ ಪೇದೆಯಿಂದ ಸಬ್​​​​​​ ಇನ್ಸ್​​​​ಪೆಕ್ಟರ್ ಹುದ್ದೆವರೆಗೆ ಬಡ್ತಿ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲಿದೆ. ಈ ಹಿಂದೆ ಬಡ್ತಿಗೆ 8 ವರ್ಷ, 5 ವರ್ಷ ನಿಗದಿಯಾಗಿತ್ತು. ಈಗ ಇದನ್ನು 4 ವರ್ಷಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಿದರು.ಪೊಲೀಸ್ ಆಧುನೀಕರಣ ಯೋಜನೆಯಡಿ ಬೆಂಗಳೂರಿಗೆ ಅತ್ಯಾಧುನಿಕ ಡಿಜಿಟಲ್ ಸಂಪರ್ಕ ವ್ಯವಸ್ಥೆಗೆ 14.65 ಕೋಟಿ ವೆಚ್ಚದಲ್ಲಿ ವಿನ್ಯಾಸ, ಸರಬರಾಜು, ನಿರ್ವಹಣೆ ಮಾಡಲು ಒಪ್ಪಿಗೆ ನೀಡಿದೆ ಎಂದರು.

ಮಂಡ್ಯ ಮೈಶುಗರ್ ಖಾಸಗೀಕರಣ ವಿಚಾರದ ಬಗ್ಗೆ ಚರ್ಚಿಸಲು ಸಚಿವ ಸಂಪುಟದ ಉಪಸಮಿತಿ ರಚನೆ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕ್ರೀಡಾ ಸಚಿವ ನಾರಾಯಣಗೌಡ ನೇತೃತ್ವದಲ್ಲಿ ಉಪ ಸಮಿತಿ ರಚನೆ ಮಾಡಲಾಗಿದೆ. ಮೈ ಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಬೇಕಾ, ಬೇಡಬೇ? ಎಂಬುದರ ಬಗ್ಗೆ ಉಪ ಸಮಿತಿ ವರದಿ ಕೊಡಲಿದೆ. ಅನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ದತ್ತ ಪೀಠ ಸಂಬಂಧ ಉಪ ಸಮಿತಿ ರಚನೆ: ದತ್ತ ಪೀಠಕ್ಕೆ ಅರ್ಚಕರ ನೇಮಕ ವಿಚಾರ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಕಾನೂನು ಸಚಿವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ‌. ಸಚಿವರಾದ ಆರ್. ಅಶೋಕ್, ಸುನೀಲ್ ಕುಮಾರ್, ಶಶಿಕಲಾ ಜೊಲ್ಲೆ ಸದಸ್ಯರಾಗಿದ್ದು, ಮುಂದಿನ ಪ್ರಕ್ರಿಯೆ ನಡೆ ಬಗ್ಗೆ ಸಮಿತಿ ಚರ್ಚಿಸಿ ವರದಿ ಕೊಡಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಇನ್ನೂ ಕಾಯ್ದೆ ಆಗಿಲ್ಲ. ವಿಧಾನಪರಿಷತ್​​​ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಇನ್ನೂ ಸಹಿ ಹಾಕಿಲ್ಲ. ಸಭಾಪತಿ ಅವರ ಸಹಿ ಬಳಿಕ ರಾಜ್ಯಪಾಲರಿಗೆ ಮಸೂದೆ ಕಳುಹಿಸಲಾಗುವುದು. ರಾಜ್ಯಪಾಲರ ಒಪ್ಪಿಗೆ ಬಳಿಕ ಕಾಯ್ದೆಯಾಗುತ್ತದೆ. ನಂತರ ಸುಪ್ರೀಂಕೋರ್ಟ್ ಗಮನಕ್ಕೆ ಕಾಯ್ದೆ ತರಲಾಗುತ್ತದೆ ಎಂದು ಹೇಳಿದರು.ಉತ್ತರ ಕನ್ನಡದಲ್ಲಿ ಖಾರ್ ಲ್ಯಾಂಡ್ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಸಮುದ್ರದಿಂದ ಉಪ್ಪು ನೀರು ನದಿಗಳಿಗೆ ಬರದಂತೆ ತಡೆಯುವ ಯೋಜನೆ ಇದಾಗಿದ್ದು, 1500 ಕೋಟಿ ರೂ. ವೆಚ್ಚದ ಯೋಜನೆಗೆ ಈಗ 300 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕಾರ್ಕಳ ತಾಲೂಕಿನಲ್ಲಿ ಹೊಸದಾಗಿ ರಚನೆಯಾದ ಹೆಬ್ರಿ ಹೋಬಳಿ ರಚನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ವಿವರಿಸಿದರು. ಹಾಗೂ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಬಗ್ಗೆ ಚರ್ಚೆ ಆಗಿಲ್ಲ. ನೀತಿ ಸಂಹಿತೆ ಕುರಿತು ಸಭೆಯ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *