Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯುಗಾದಿ ವಿಶೇಷ: ಆರೋಗ್ಯದ ಗುಟ್ಟು “ಅಭ್ಯಂಗ”ದಲ್ಲಿದೆ

---Advertisement---

ಚಿತ್ರದುರ್ಗ. ಮಾ.18: ‘ಬೇವು-ಬೆಲ್ಲ’ ಸವಿಯುವ ಯುಗಾದಿ ಹಬ್ಬ ಎಂದರೆ ಕೇವಲ ಸಾಂಪ್ರದಾಯಿಕ ಆಚರಣೆಯಲ್ಲ.  ಅದು ಬದಲಾಗುವ ವಾತಾವರಣಕ್ಕೆ ತಕ್ಕಂತೆ ನಮ್ಮ ದೇಹವನ್ನು ಸಜ್ಜುಗೊಳಿಸುವ ವಿಜ್ಞಾನವೂ ಹೌದು. ಈ ಯುಗಾದಿಯ ಸುಸಂದರ್ಭದಲ್ಲಿ ಕೇವಲ ಹಬ್ಬದ ಸಡಗರಕ್ಕೆ ಸೀಮಿತವಾಗದೆ, ಆರೋಗ್ಯದ ದೃಷ್ಟಿಯಿಂದ ‘ಅಭ್ಯಂಗ’ ಸ್ನಾನಕ್ಕೆ ಪ್ರತಿಯೊಬ್ಬರೂ ಹೆಚ್ಚಿನ ಒತ್ತು ನೀಡಬೇಕು ಎನ್ನುತ್ತಾರೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ.

 

ಇಂದು ಆರಂಭವಾಗಲಿರುವ ಪರಾಭವ ನಾಮ ಸಂವತ್ಸರವು ಎಲ್ಲರಿಗೂ ಆಯುರಾರೋಗ್ಯದ ಹೊಸ ಅನುಭವ ತರಲಿ ಎಂದು ಹಾರೈಸಿರುವ ಅವರು, ಆಯುರ್ವೇದದ ಪ್ರಮುಖ ಭಾಗವಾದ ಅಭ್ಯಂಗದ ಮಹತ್ವದ ಕುರಿತು ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.

 

ಅಭ್ಯಂಗ ಎಂದರೆ ಮೈಗೆಲ್ಲಾ ತೈಲ ಹಚ್ಚಿಕೊಂಡು ಕನಿಷ್ಠ 45 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡುವುದು. ಇದು ಕೇವಲ ಧಾರ್ಮಿಕ ವಿಧಿಯಲ್ಲ, ಬದಲಾಗಿ ಚರ್ಮದ ಆರೋಗ್ಯ ಕಾಪಾಡುವ ಒಂದು ನೈಸರ್ಗಿಕ ಕವಚ. ಚರ್ಮವು ನಿರಂತರವಾಗಿ ಹೊರಗಿನ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳ ದಾಳಿಗೆ ಒಳಗಾಗುತ್ತಿರುತ್ತದೆ. ಅಭ್ಯಂಗ ಮಾಡುವುದರಿಂದ ತೈಲದಲ್ಲಿರುವ ಔಷಧೀಯ ಅಂಶಗಳು ಚರ್ಮದ ಒಳ ಸೇರಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆಯುರ್ವೇದದ ಪ್ರಕಾರ ಅಭ್ಯಂಗಕ್ಕೆ ಎಳ್ಳೆಣ್ಣೆ ಅತ್ಯಂತ ಶ್ರೇಷ್ಠವಾಗಿದ್ದರೂ, ವ್ಯಕ್ತಿಯ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ತೈಲಗಳನ್ನು ಬಳಸಬಹುದು. ಮಾಂಸಖಂಡಗಳ ಬಲವರ್ಧನೆಗೆ ಅಶ್ವಗಂಧಬಲಕ್ಷಾದಿ ತೈಲ, ತ್ವಚೆಯ ಕಾಂತಿಗೆ ಮಹಾಮಂಜಿಷ್ಟ ತೈಲ, ಮಕ್ಕಳಿಗೆ ಬಲತೈಲ ಹಾಗೂ ಹಿರಿಯ ನಾಗರಿಕರಿಗೆ ಮಹಾ ನಾರಾಯಣ ತೈಲವು ರಾಮಬಾಣದಂತೆ ಕೆಲಸ ಮಾಡುತ್ತದೆ.

 

ತೈಲ ಲೇಪಿಸಿದ ನಂತರ ಮುಂಜಾನೆ ಸೂರ್ಯನ ಬೆಳಕಿನಲ್ಲಿ ನಿಲ್ಲುವುದು ವಿಜ್ಞಾನ ಸಮ್ಮತ ಕ್ರಮವಾಗಿದೆ. ಇದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ದೊರೆತು ಮೂಳೆಗಳು ಗಟ್ಟಿಯಾಗುತ್ತವೆ. ಇಂದಿನ ಆಧುನಿಕ ಸಂಶೋಧನೆಗಳೂ ಸಹ ಅಭ್ಯಂಗದಿಂದ ರಕ್ತಪರಿಚಲನೆ ಸುಧಾರಿಸುತ್ತದೆ, ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಿ ಸುಖಕರ ನಿದ್ದೆ ಬರುತ್ತದೆ ಎಂದು ದೃಢಪಡಿಸಿವೆ. ಇನ್ನು ಅತಿಯಾದ ಬೊಜ್ಜು ಇರುವವರಿಗೆ ಆಯುರ್ವೇದವು ಔಷಧೀಯ ಗಿಡಮೂಲಿಕೆಗಳ ಪುಡಿಯಿಂದ ದೇಹ ಉಜ್ಜುವ ‘ಉದ್ವರ್ತನ’ ಅಥವಾ ಶುಷ್ಕ ಅಭ್ಯಂಗವನ್ನು ಸೂಚಿಸಿದೆ. ಹುರುಳಿ ಹಿಟ್ಟು, ಕಡ್ಲೆಹಿಟ್ಟು ಅಥವಾ ಹೆಸರುಕಾಳಿನ ಹಿಟ್ಟಿನಿಂದ ಮಾಡುವ ಈ ಪ್ರಕ್ರಿಯೆಯು ಚರ್ಮದ ಕಾಂತಿ ಹೆಚ್ಚಿಸಲು ಮತ್ತು ತೂಕ ಇಳಿಸಲು ಸಹಕಾರಿಯಾಗಿದೆ.

 

ಶರೀರದಲ್ಲಿ ನೀರಿನ ಅಂಶದ ನಂತರ ಹೆಚ್ಚಿನ ಪಾಲು ಕೊಬ್ಬಿನ ಅಂಶವೇ ಇರುತ್ತದೆ. ಮೆದುಳು ಮತ್ತು ನರವ್ಯೂಹದ ಆರೋಗ್ಯಕ್ಕೆ ತೈಲದ ಅಂಶ ಅತ್ಯಗತ್ಯವಾಗಿರುವುದರಿಂದ, ನಿತ್ಯ ಆಹಾರದಲ್ಲಿ ಎಣ್ಣೆಕಾಳುಗಳು, ಸಾಂಪ್ರದಾಯಿಕ ತುಪ್ಪ ಮತ್ತು ಪೌಷ್ಟಿಕ ತರಕಾರಿಗಳನ್ನು ಬಳಸಬೇಕು ಎಂದು ಡಾ. ಚಂದ್ರಕಾಂತ್ ಕಿವಿಮಾತು ಹೇಳಿದ್ದಾರೆ.

 

ಅಭ್ಯಂಗವು ಕೇವಲ ಯುಗಾದಿ ಅಥವಾ ದೀಪಾವಳಿಗೆ ಸೀಮಿತವಾಗಬಾರದು. ಇಂದಿನ ಧಾವಂತದ ಬದುಕಿನಲ್ಲಿ ಪ್ರತಿದಿನ ಸಾಧ್ಯವಾಗದಿದ್ದರೂ, ವಾರಕ್ಕೊಮ್ಮೆಯಾದರೂ ಅಭ್ಯಂಗ ಆಚರಿಸುವುದು ಆರೋಗ್ಯಕರ ಜೀವನಕ್ಕೆ ಅತ್ಯಗತ್ಯ. ಬೇಸಿಗೆ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ನಿಯಮಿತವಾಗಿ ಅಭ್ಯಂಗವನ್ನು ಆಚರಿಸಿ ಉತ್ತಮ ಆರೋಗ್ಯ ಪಡೆಯಿರಿ ಎಂಬ ಸಂದೇಶವನ್ನು ಯುಗಾದಿ ನೀಡುತ್ತಿದೆ ಎನ್ನುತ್ತಾರೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ
==========

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...