ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಚಿತ್ರದುರ್ಗ. ಜುಲೈ16: ಐತಿಹಾಸಿಕ ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಮುಂಬರುವ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಬಯಲಾಟ ಪ್ರದರ್ಶನ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಬಯಲಾಟ ಅಕಾಡೆಮಿಯ ಕಾರ್ಯಕ್ರಮಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಭಾಗದಲ್ಲಿ ಈಗಲೂ ಬಯಲಾಟ ಆಡುವುದು ಚಾಲ್ತಿಯಲ್ಲಿದೆ. ಜಿಲ್ಲೆಯಲ್ಲಿ ಕರಿಭಂಟನ ಕಾಳಗ, ಕರಿಭಂಟನ ಕಥೆ ಬಯಲಾಟ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿ ಪ್ರದರ್ಶಿಸುವ ಬಯಲಾಟದಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ನಿರ್ವಹಿಸುವುದು ವಿಶೇಷವಾಗಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಬಯಲಾಟ ಕಲೆಯ ಮಹತ್ವ ಕುರಿತು ವಿದ್ವಾಂಸರಿಂದ ಚಿಂತನ-ಮಂಥನ ವಿಚಾರ ಸಂಕಿರಣ, ಮೂಲ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕಲಾ ತಂಡಗಳಿಂದ ಹಾಡುಗಾರಿಕೆ ಮತ್ತು ಬಯಲಾಟ ಪ್ರದರ್ಶನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಪುನರುಜ್ಜೀನವನ ಹಾಗೂ ಪ್ರೋತ್ಸಾಹಕ್ಕೆ ಕ್ರಿಯಾ ಯೋಜನೆ:
ರಾಜ್ಯದ 21 ಜಿಲ್ಲೆಗಳಲ್ಲಿ ಬಯಲಾಟ ಕಲೆ ಅಸ್ತಿತ್ವದಲ್ಲಿದೆ. ದಕ್ಷಿಣದಲ್ಲಿ ಚಾಮರಾಜನಗರ ಜಿಲ್ಲೆಯಿಂದ ಹಿಡಿದು ಉತ್ತರದಲ್ಲಿ ಬೀದರ್ ಜಿಲ್ಲೆಯವರೆಗೂ ಈ ಕಲೆ ವ್ಯಾಪಿಸಿದೆ. ಇಂತಹ ಕಲೆಯ ಪನರುಜ್ಜೀವನಕ್ಕೆ ಹಾಗೂ ಬಯಲಾಟ ಕಲಾವಿದರಿಗೆ ಪ್ರೋತ್ಸಾಹ ನೀಡಲು ಕರ್ನಾಟಕ ಬಯಲಾಟ ಅಕಾಡೆಮಿ ಕ್ರಿಯಾ ಯೋಜನೆ ರೂಪಿಸಿದೆ.
ಬಯಲಾಟದ ಜೊತೆಗೆ ತೊಗಲುಗೊಂಬೆಯಾಟ, ಸೂತ್ರದ ಗೊಂಬೆಯಾಟದ ಪ್ರಕಾರಗಳು ಬಯಲಾಟದ ಜೊತೆಯಲ್ಲಿಯೇ ಇವೆ. ಉತ್ತರ ಕರ್ನಾಟಕದಲ್ಲಿ ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ರಾಧನಾಟ ಎಂಬ ಪ್ರಕಾರಗಳು ಇವೆ. ಇಂದಿಗೂ ಈ ಕಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಜೀವಂತವಾಗಿವೆ. ಆದರೆ ಈ ಕಲೆಗಳ ಬಗ್ಗೆ ವಿದ್ಯಾವಂತರು ಹಾಗೂ ನಗರ ಜನರಿಗೆ ಹೆಚ್ಚು ಪರಿಚಯವಿಲ್ಲ. ಇಂದಿನ ಪೀಳಿಗೆಯವರಿಗೆ ಬಯಲಾಟದ ಕುರಿತು ಆಸಕ್ತಿ ಮೂಡವಂತೆ ಕಾರ್ಯಕ್ರಮಗಳನ್ನು ರೂಪಿಸಲು ಅಕಾಡೆಮಿ ರೂಪಿಸಲು ಚಿಂತಿಸಿದೆ ಎಂದು ಪ್ರೊ.ಕೆ.ಆರ್.ದುರ್ಗಾದಾಸ್ ತಿಳಿಸಿದರು.
ಕಲಾವಿದರ ಮಾಹಿತಿ ಸಂಗ್ರಹ:
ಪ್ರತಿ ಜಿಲ್ಲೆಯಲ್ಲೂ ಬಯಲಾಟಕ್ಕೆ ಸಂಬಂದಿಸಿದಂತೆ ವಾದ್ಯಗಾರರು, ಕಥೆಗಾರರು, ಬಣ್ಣಗಾರರು, ವೇಷ ಮಾಡುವವರು ಸೇರಿ ಸಾವಿರಾರು ಕಲಾವಿದರು ಇದ್ದಾರೆ. ಜೀವನ ಪೂರ್ತಿ ಕಲೆಗಾಗಿ ದುಡಿದ ಇವರ ಕುರಿತಂತೆ ಅಕ್ಷರ ಮಾಧ್ಯಮದಲ್ಲಿ ಮಾಹಿತಿ ದೊರಕುವುದಿಲ್ಲ. ಮುಂದಿನ ತಲೆಮಾರಿಗೆ ಇವರ ಕೊಡುಗೆ ತಿಳಿಸಲು ದಾಖಲೀಕರಣ ಅಗತ್ಯ. ಈ ಹಿನ್ನಲೆಯಲ್ಲಿ ಕಲಾವಿದರ ಸಾಧನೆಗಳ ಕುರಿತು ಮಾಹಿತಿ ಸಂಗ್ರಹ ಕೆಲಸಕ್ಕೆ ಅಕಾಡೆಮಿ ಮುಂದಾಗಿದೆ. ಮೊದಲ ಹಂತದಲ್ಲಿ ಕಲಬುರ್ಗಿ ಮತ್ತು ಬೆಳಗಾವಿ ವಿಭಾಗಳ ಜಿಲ್ಲೆಗಳಲ್ಲಿ ಕಲಾವಿದರ ಗುರುತಿಸಿ ಮಾಹಿತಿ ಸಂಗ್ರಹಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಬೆಂಗಳೂರು ಹಾಗೂ ಮೈಸೂರು ವಿಭಾಗದ ಜಿಲ್ಲೆಗಳ ಕಲಾವಿದ ಮಾಹಿತಿ ಸಂಗ್ರಹಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಆಗಸ್ಟ್ ತಿಂಗಳಿಂದ ಮಾಹಿತಿ ಸಂಗ್ರಹ ಆರಂಭವಾಗಲಿದೆ. ಎಂದು ಪ್ರೊ.ಕೆ.ಆರ್.ದುರ್ಗಾದಾಸ್ ಹೇಳಿದರು.
ಹಸ್ತಪ್ರತಿಗಳಿಗೆ ಡಿಜಿಟಲ್ ರೂಪ:
ಬಯಲಾಟ ಗ್ರಾಮೀಣ ಜನರು ಹುಟ್ಟು ಹಾಕಿದ ಜಾನಪದ ಕಲೆ. ಪ್ರತಿ ಜಿಲ್ಲೆಯಲ್ಲೂ ಬಯಲಾಟದ ವಿಭಿನ್ನ ರೂಪಗಳನ್ನು ಕಾಣಬಹುದು. ಬಯಲಾಟ ಕವಿಗಳು ಆಯಾ ಪ್ರದೇಶದ ಜನರು ಆಸಕ್ತಿಗಳಿಗನುಗುಣವಾಗಿ ಬಯಲಾಟ ಕಥೆಗಳನ್ನು ಮೌಖಿಕ ಮತ್ತು ಲಿಖಿತ ರೂಪದಲ್ಲಿ ರಚಿಸಿದ್ದಾರೆ. ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಕಂಬೋಜ ರಾಜ ಕಥೆ, ಬಳ್ಳಾರಿ ಜಿಲ್ಲೆಯಲ್ಲಿ ದ್ರೌಪದಿ ವಸ್ತಾçಪರಣ, ಚಿತ್ರದುರ್ಗ ಜಿಲ್ಲೆಯಲ್ಲಿ ಕರಿಭಂಟನ ಕಥೆ ಬಹಳ ಪ್ರಸಿದ್ಧಿ ಪಡೆದಿವೆ. ರಾಮಾಯಣದ ಕಥಾ ಭಾಗಗಳನ್ನು ಆಯ್ಕೆ ಮಾಡಿಕೊಂಡು ಬಯಲಾಟ ಪ್ರದರ್ಶಿಸಲಾಗುತ್ತದೆ. ಈ ಕಥೆಗಳನ್ನು ಆಯಾ ಕಲಾವಿದರೇ, ಹಸ್ತ ಪ್ರತಿಗಳನ್ನು ಮಾಡಿಕೊಂಡು ಅಮೂಲ್ಯ ಆಸ್ತಿಯಂತೆ ಸಂರಕ್ಷಿಸಿದ್ದಾರೆ. ಈ ಎಲ್ಲಾ ಈ ಕಥೆಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಇವುಗಳಿಗೆ ಡಿಜಿಟಲ್ ರೂಪ ನೀಡಿ ಬಯಲಾಟ ಅಕಾಡೆಮಿ ವೆಬ್‌ಸೈಟ್‌ನಲ್ಲಿ ಹಾಕಲಾಗುವುದು. ಇದರಿಂದ ಸುಲಭವಾಗಿ ಪ್ರತಿಗಳು ಎಲ್ಲರಿಗೂ ದೊರಕುತ್ತವೆ ಎಂದು ಪ್ರೊ.ಕೆ.ಆರ್.ದುರ್ಗಾದಾಸ್ ತಿಳಿಸಿದರು.
ಕಲಾವಿದರು ಹಾಗೂ ಸಂಶೋಧನೆ ಪುರಸ್ಕಾರ:
ಅಕಾಡೆಮಿಯಿಂದ ಪ್ರತಿ ವರ್ಷ ಹಿರಿಯ ಬಯಲಾಟ ಕಲಾವಿದರು ಹಾಗೂ ವಿದ್ವಾಂಸರ ಜೀವಮಾನ ಸಾಧನೆಯನ್ನು ಪರಿಗಣಿಸಿ, ಐವರಿಗೆ ಗೌರವ ಪ್ರಶಸ್ತಿ ನೀಡಲಾಗುವುದು. ಜೀವಮಾನ ಸಾಧನೆ ಪ್ರಶಸ್ತಿ ರೂ.50 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ಕಲಾವಿದರು ಮತ್ತು ವಿದ್ವಾಂಸರಲ್ಲಿ ಹತ್ತು ಜನರಿಗೆ ವಾರ್ಷಿಕ ಪ್ರಶಸ್ತಿ ಕೊಡಲಾಗುತ್ತದೆ. ಇದು ರೂ.25 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಬಯಲಾಟ ಸಾಹಿತ್ಯ, ಸಂಶೋಧನೆ, ಸಂಪಾದಿತ ಕೃತಿಗಳಲ್ಲಿ ಯಾವುದಾದರೂ ಒಂದು ಕೃತಿಗೆ ರೂ.25 ಸಾವಿರ ನಗದು ಬಹುಮಾನ ನೀಡಲಾಗುವುದು. 58 ವರ್ಷ ತುಂಬಿದ ಬಯಲಾಟ ಕಲಾವಿದರಿಗೆ ಮಾಶಾಸನ ನೀಡಲಾಗುತ್ತಿದೆ. ಅಕಾಡೆಮಿ ಕಾಲಕಾಲಕ್ಕೆ ಅರ್ಹ ಕಲಾವಿದರನ್ನು ಗುರುತಿಸಿ ಮಾಶಾಸನ ನೀಡಲು ಶಿಫಾರಸ್ಸು ಮಾಡುತ್ತಿದೆ ಎಂದು ಪ್ರೊ.ಕೆ.ಆರ್.ದುರ್ಗಾದಾಸ್ ಹೇಳಿದರು.
ರೂ.25 ಸಾವಿರ ಸಹಾಯಧನ:
ಅಕಾಡೆಮಿಯಿಂದ ಪ್ರಾಯೋಜಕತ್ವ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಊರು ಜಾತ್ರೆ, ಹಬ್ಬದ ದಿನಗಳಲ್ಲಿ ನಡೆಯುವ ಹವ್ಯಾಸಿ ಬಯಲಾಟ ಪ್ರದರ್ಶನಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಆಯ್ದ ತಂಡಗಳ ಒಂದೊAದು ಪ್ರದರ್ಶನಕ್ಕೆ ಅಕಾಡೆಮಿಯು ರೂ.25,000/-ಗಳ ಸಹಾಯಧನ ನೀಡಲಾಗುವುದು. ಪ್ರಸಕ್ತ ವರ್ಷದಲ್ಲಿ 8 ಬಯಲಾಟ ತಂಡಗಳಿಗೆ ಪ್ರೋತ್ಸಾಹಧನ ಪಡೆದಿವೆ ಎಂದು ಪ್ರೊ.ಕೆ.ಆರ್.ದುರ್ಗಾದಾಸ್ ತಿಳಿಸಿದರು.
ಹೊರ ರಾಜ್ಯಗಳಲ್ಲಿ ಬಯಲಾಟ ಪ್ರದರ್ಶನ:
ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಹೊರ ರಾಜ್ಯದ ಜಿಲ್ಲೆಗಳಲ್ಲಿಯೂ ಬಯಲಾಟವನ್ನು ಹೋಲುವ ಜನಪದ ರಂಗ ಕಲೆಗಳಿವೆ. ಈ ರಾಜ್ಯಗಳ ಜೊತೆ ಪರಸ್ಪರ ಸೌಹಾರ್ದ ಸಂಬAಧ ಬೆಳೆಸಲು ಬಯಲಾಟ ಪ್ರದರ್ಶನ ಏರ್ಪಡಿಸುವುದು. ಜೊತೆಗೆ ರಾಷ್ಟçದ ಬೇರೆ ಬೇರೆ ಸಾಂಸ್ಕೃತಿಕ ಕೇಂದ್ರಗಳಲ್ಲಿಯೂ ಆಯ್ದ ತಂಡಗಳಿAದ ಬಯಲಾಟ ಪ್ರದರ್ಶನಕ್ಕೆ ಅವಕಾಶ ಪಡೆದುಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರೊ.ಕೆ.ಆರ್.ದುರ್ಗಾದಾಸ್ ಹೇಳಿದರು.
ಜನಪ್ರಿಯ, ಶಕ್ತಿಶಾಲಿ ಈ ಬಯಲಾಟ ಮಾಧ್ಯಮದ ಕುರಿತಾಗಿ ಬಯಲಾಟ ಪ್ರದರ್ಶನ ನೀಡುವ ಪ್ರದೇಶಗಳಲ್ಲಿಯೇ ಹೆಚ್ಚಿನ ಜನರಿಗೆ ಇದು ಮುಟ್ಟಿಲ್ಲ. ವಿಶೇಷವಾಗಿ ವಿದ್ಯಾವಂತರಿಗೆ ತಲುಪಿಲ್ಲ. ಯಕ್ಷಗಾನಕ್ಕೆ ಹೋಲಿಕೆ ಮಾಡಿದರೆ ಬಯಲಾಟದ ಕಲೆಯ ಬಗ್ಗೆ ಸುಶಿಕ್ಷಿತರು ಆಸಕ್ತಿ ವಹಿಸಿರುವುದು ಬಹಳ ಕಡಿಮೆ ಎಂದು ತಿಳಿಸಿದ ಪ್ರೊ.ಕೆ.ಆರ್.ದುರ್ಗಾದಾಸ್ ಬಯಲಾಟ ಕಲೆ ಉಳಿಸಿ ಬೆಳೆಸಲು ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.
ಈ ವೇಳೆ ನಿವೃತ್ತ ಪ್ರಾಧ್ಯಾಪಕ ಡಾ.ಮೈಲಹಳ್ಳಿ ರೇವಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ಸಮದಪ್ಪ, ಕರ್ನಾಟಕ ಬಯಲಾಟ ಅಕಾಡೆಮಿಯ ಮಂಜುನಾಥ ಹಡಪದ ಇದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್