ಬುದ್ಧಿ ಮಾಂದ್ಯರನ್ನು ಮಾನವೀಯತೆಯಿಂದ ನೋಡಿಕೊಳ್ಳಿ : ಗೋಪ್ಯಾನಾಯ್ಕ್

1 Min Read

 

ಸುದ್ದಿಒನ್, ಚಿತ್ರದುರ್ಗ, ಡಿ.17: ಬುದ್ಧಿ ಮಾಂದ್ಯರನ್ನು ಮಾನವೀಯತೆಯಿಂದ ನೋಡಿಕೊಳ್ಳುವ ಮೂಲಕ ಸಮಾಜದಲ್ಲಿ ಅವರೂ ಕೂಡ ಸಮಾನರಾಗಿ ಬದುಕುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್ ಹೇಳಿದರು.

ಚಿತ್ರದುರ್ಗದ ಮಾನಸಧಾರ ಮತ್ತು ಗಾಡ್ಸ್ ಸಂಸ್ಥೆ ವತಿಯಿಂದ ಬುದವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು ತಮಗರಿವಿಲ್ಲದಂತೆ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನಡೆದುಕೊಳ್ಳುವಂತಹ ಪರಿಸ್ಥಿತಿಗಳು ನಿರ್ಮಾಣವಾಗಬಹುದು ಅಂತಹವರನ್ನು ಮಾನವೀಯತೆಯಿಂದ ನಡೆಸಿಕೊಳ್ಳುವ ಮೂಲಕ ಕೇರ್ ಸೆಂಟರ್‍ಗಳಲ್ಲಿ ಅವರಿಗೆ ವಿಶೇಷ ಆದ್ಯತೆಯನ್ನು ನೀಡಬೇಕಾದ ಜವಾಬ್ದಾರಿ, ಪಾಲನೆ ಮತ್ತು ಪೋಷಣೆಯ ಹೊಣೆ ಹೊತ್ತವರದ್ದಾಗಿದೆ ಎಂದರು.

 

ಮಾನಸಿಕ ಅಸ್ವಸ್ಥರನ್ನು ತಮ್ಮ ಕುಟುಂಬಗಳಲ್ಲೇ ಕಡೆಗಣಿಸುವಂತಹ ಪರಿಸ್ಥಿತಿಗಳಿದ್ದು, ಅಂತಹ ಸಂದರ್ಭಗಳಲ್ಲಿ ಗಾಡ್ಸ್‍ನಂತಹ ಸಂಸ್ಥೆಗಳು ಕರೆತಂದು ಅವರಿಗೆ ಮಾನಸಧಾರ ಸೆಂಟರ್‍ನಲ್ಲಿ ಇರಿಸಿ, ವಸತಿ ಊಟೋಪಚಾರ, ಆರೋಗ್ಯ ತಪಾಸಣೆ, ನಿತ್ಯ ಅಭ್ಯಾಸಮಾಡಿಸುವ ಮೂಲಕ ಮಾನಸಿಕ ಅಸ್ವಸ್ಥೆತೆಯಿಂದ ಹೊರಬರುವಂತೆ ನೋಡಿಕೊಳ್ಳುತ್ತಿರುವುದು ನಿಜಕ್ಕೂ ಉತ್ತಮವಾದ ಕಾರ್ಯ ಎಂದು ಹೇಳಿದರು.

ಅರಣ್ಯ ಇಲಾಖೆಯಿಂದ ಈ ಸಂಸ್ಥೆಗೇನಾದರೂ ನೆರವು ನೀಡುವ ಅವಕಾಶ ಒದಗಿಬಂದರೆ ಖಂಡಿತವಾಗಲೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಗೋಪ್ಯನಾಯ್ಕ್ ನುಡಿದರು. ಗಾಡ್ಸ್ ಸಂಸ್ಥೆಯ ಅಧ್ಯಕ್ಷರಾದ ಸೂರ್ಯನಾರಾಯಣ್ ಮಾತನಾಡಿ ಸಂಸ್ಥೆಯ ಮೂಲಕ ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗಿದ್ದು, ಮಾನಸಿಕ ಅಸ್ವಸ್ಥರು, ವೃದ್ಧಾಪ್ಯದಲ್ಲಿರುವಂತವರು ನಿರಾಶ್ರಿತರನ್ನು ಕರೆತಂದು ಪೋಷಣೆಮಾಡುವಂತಹ ಕಾರ್ಯವನ್ನು ನಿರಂತರವಾಗಿ ಮುಂದುವರೆಸಿಕೊಂಡು ಬರಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ವಸಂತಕುಮಾರ್, ಕಾಂಗ್ರೆಸ್ ಯುವ ಮುಖಂಡ ಚಿದಾನಂದಪ್ಪ ಮತ್ತು ಗಾಡ್ಸ್ ಸಂಸ್ಥೆಯ ಸಿಬ್ಬಂಧಿಗಳು ಹಾಗೂ ಅರಣ್ಯ ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Share This Article
Enable Notifications OK No thanks