ಚಿತ್ರದುರ್ಗ. ಮೇ.12: ಚಿತ್ರದುರ್ಗ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್ ಗುನ್ಯಾ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಕುರಿತು ಪೌರಕಾರ್ಮಿಕರಿಗೆ ಜಾಗೃತಿ ಕಾರ್ಯಗಾರ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡೆಂಗ್ಯೂ ಭಿತ್ತಿ ಪತ್ರ ಅನಾವರಣಗೊಳಿಸುವ ಮೂಲಕ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಸುರೇಶ್ ಬಾಬು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಸುರೇಶ್ ಬಾಬು, ಪ್ರಸ್ತುತ ಮಳೆಗಾಲ ಪ್ರಾರಂಭವಾಗುತ್ತಿದ್ದು, ಘನ ತ್ಯಾಜ್ಯಗಳಾದ ಎಳನೀರು ಚಿಪ್ಪು, ಒಡೆದ ಪ್ಲಾಸ್ಟಿಕ್ ಬಾಟಲ್, ಪಿಂಗಾಣಿ ವಸ್ತುಗಳಲ್ಲಿ ಮಳೆ ನೀರು ನಿಂತು ಲಾರ್ವಾ ಸೊಳ್ಳೆ ಉತ್ಪತ್ತಿಯಾಗಿ ಹಗಲು ಹೊತ್ತಿನಲ್ಲಿ ಸೊಳ್ಳೆಗಳು ಕಡಿಯುವುದರಿಂದ ಡೆಂಗಿ, ಚಿಕನ್ ಗುನ್ಯಾ ಹೆಚ್ಚಾಗುವ ಸಂಭವವಿದ್ದು, ಇದರ ನಿಯಂತ್ರಣಕ್ಕಾಗಿ ಪೌರಕಾರ್ಮಿಕರು ಖಾಲಿ ನಿವೇಶನ ಹೊರಗಿನ ಸ್ಥಳಗಳಲ್ಲಿ ಬಿಸಾಡಿರುವ ಈ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡುವಂತೆ ಕರೆ ನೀಡಿದರು.
ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಯಶಸ್ ಮಾತನಾಡಿ, ಸಾರ್ವಜನಿಕರು ಮನೆಗಳಲ್ಲಿ ಬಳಸಲು ಡ್ರಮ್, ಸಿಮೆಂಟ್ ತೊಟ್ಟಿ, ಬ್ಯಾರೆಲ್‍ಗಳಲ್ಲಿ ನೀರನ್ನು ಸಂಗ್ರಹಿಸುವುದರಿಂದ ಅವುಗಳಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ, ಸೊಳ್ಳೆ ಮರಿಗಳು ಉತ್ಪತ್ತಿಯಾಗಿ ನಮಗೆ ಹಗಲು ಹೊತ್ತಿನಲ್ಲಿ ಕಡಿಯುವುದರಿಂದ ಇದರ ತೀವ್ರತೆ ಹೆಚ್ಚಾಗುತ್ತದೆ. ಪ್ರಯುಕ್ತ ನೀರನ್ನು ಶೇಖರಿಸಿರುವ ತಾಣಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಿಟ್ಟು ಬಳಸುವಂತೆ ತಿಳಿಸಿದರು.
ವೈದ್ಯಾಧಿಕಾರಿ ಡಾ ಸುರೇಂದ್ರ ಕುಮಾರ್ ಮಾತನಾಡಿ, ನಿಂತ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಬೇಕು. ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಮಾಡಲು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಟಿ.ಮಲ್ಲಿಕಾರ್ಜುನ್, ಶ್ರೀನಿವಾಸ್ ಮಳಲಿ, ನಾಗರಾಜ್, ಶ್ರೀನಿವಾಸ್ ಮೂರ್ತಿ, ಗುರುಮೂರ್ತಿ, ಪಾಂಡು, ಗೋಪಾಲಕೃಷ್ಣ, ನಂದೀಶ್, ನಗರಸಭೆಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ್, ಹೀನಾಕೌಸರ್, ಭಾರತಿ ಮತ್ತು ಕೀಟ ಸಂಗ್ರಹಕಾರರಾದ ಶ್ರೀಕಾಂತ್, ಕಾವ್ಯ ಇದ್ದರು.












