Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಬಾಟಲಿ ಹಾಲಿನಿಂದ ಮಕ್ಕಳ ಹಲ್ಲು ಹುಳುಕು : ಕಾರಣಗಳು ಮತ್ತು ಚಿಕಿತ್ಸೆ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಹುಟ್ಟಿದಾಗಿನಿಂದ ಮಗುವು ತಾಯಿಯ ಹಾಲು ಕುಡಿದ ನಂತರ ಬೆಳೆಯುವುದೇ ಬಾಟಲಿ ಹಾಲಿನಿಂದ.ಅದು ಕೂಡ ಮಗುವು ಕನಿಷ್ಠ ಒಂದೂವರೆ ಎರಡು ವರ್ಷಗಳ ತನಕ ಬಾಟಲಿ ಹಾಲಿನ ಮೇಲೆ ಅವಲಂಬಿತವಾಗಿರುತ್ತದೆ ಬಹಳಷ್ಟು ಜನರಿಗೆ ಇದು ಎಷ್ಟು ತೊಂದರೆ ಕೊಡಬಲ್ಲದು ಎಂಬ ಸಣ್ಣ ಅರಿವು ಇರುವುದಿಲ್ಲ. ಮಗುವು ಅಳಲು ಪ್ರಾರಂಭಿಸಿದ ತಕ್ಷಣ ಮಗುವಿಗೆ ಹಾಲಿನ ಅವಶ್ಯಕತೆ ಇದೆ ಎಂದು ತಿಳಿದು ಬಹಳಷ್ಟು ಪೋಷಕರು ಬಾಯಿಯೊಳಗೆ ಹಾಲು ತುಂಬಿದ ಬಾಟಲಿ ನಿಪ್ಪಲ್ ಎಂದು ಹಾಕಿ ಮಲಗಿಸಿ ಬಿಡುವುದೇ ಹೆಚ್ಚು. ಆದರೆ ನಿಮಗೆ ತಿಳಿದಿರಲಿ ಈ ರೀತಿ ಹಾಲಿನ ಅಂಶವು ಸತತವಾಗಿ ಹಲ್ಲಿನ ಮೇಲೆ ಕಾರ್ಯನಿರ್ವಹಿಸಿ ಹಲ್ಲುಗಳು ಹುಡುಕು ಇಡುವಂತೆ ಮಾಡುತ್ತವೆ ಜೊತೆಗೆ ಅರೆಕಾಲಿಕವಾಗಿ ಅಂದರೆ ಉದುರುವ ಸಮಯಕ್ಕೆ ಮೊದಲೇ ಹಲ್ಲುಗಳು ಸಂಪೂರ್ಣ ಕರಗಿ ಪೂರ್ಣ ನಾಶವಾಗಿ ಬಿಡುತ್ತವೆ. ಮಗುವ ನೋವಿನಿಂದ ಅತ್ತರು ಅದು ಹಲ್ಲಿನ ನೋವು ಎಂದು ಗೊತ್ತಾಗದೆ ತಾಯಂದಿರು ಹಾಲನ್ನು ಕುಡಿಸುತ್ತಾ ಹೋಗುತ್ತಾರೆ. ನೋಡ ನೋಡುತ್ತಿದ್ದಂತೆ ಕೆಲವು ತಿಂಗಳುಗಳಲ್ಲಿಯೇ ಹಲ್ಲುಗಳು ಹುಳುಕಾಗಿ ಕರಗಿ ಸವೆದು ಹೋಗಿಬಿಡುತ್ತವೆ.

 

ಇದನ್ನು ವೈದ್ಯಕೀಯ ಭಾಷೆಯಲ್ಲಿ ನಾವು ಬೇಬಿ (ನರ್ಸಿಂಗ್) ಬಾಟಲಿ ಸಿಂಡ್ರೋಮ್ ಎನ್ನುತ್ತೇವೆ. ಸಾಮಾನ್ಯವಾಗಿ ಹಾಲು ಕುಡಿಯುತ್ತಾ ಮಗು ನಿದ್ದೆಗೆ ಜಾರುತ್ತದೆ ಆಗ ಅದರಲ್ಲಿರುವ ಹಾಲಿನ ಅಂಶವು,ಅಂಟಿನ ಸಕ್ಕರೆ ಅಂಶವು ಹಲ್ಲಿನ ಮೇಲೆ ನಿಧಾನಕ್ಕೆ ದಿನೇದಿನೇ ಸೇರುತ್ತಾ ಸಾಗುತ್ತವೆ. ಜೊತೆಗೆ ರಾತ್ರಿಯ ಸಮಯದಲ್ಲಿ ಬಾಯಿಯಲ್ಲಿ ಲಾಲಾರಸ ಅಂದರೆ ಜೊಲ್ಲು ಪ್ರಮಾಣ ಕೂಡ ಹರಿವು ಕಡಿಮೆ ಇರುತ್ತದೆ. ಇದರಿಂದ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ನಿರಂತರವಾಗಿ ಏರಿಕೆಯಾಗುತ್ತ ಸಾಗಿ ಅವು ತಮ್ಮ ಆಮ್ಲೀಯ ಗುಣಲಕ್ಷಣದಿಂದ ಹಲ್ಲುಗಳನ್ನು ಕರಗಿಸಲು ಪ್ರಾರಂಭಿಸುತ್ತವೆ. ಹಿಂಭಾಗದ ಹಲ್ಲುಗಳಲ್ಲಿ ನಾಲಿಗೆಯ ರಕ್ಷಾ ಕವಚ ಇರುವ ಕಾರಣಕ್ಕೆ ಹಿಂದಿನ ಹಲ್ಲುಗಳು ಅಷ್ಟಾಗಿ ಹುಳುಕು ಆಗುವುದಿಲ್ಲ.

 

ಕಾರಣಗಳು :
* ಸದಾಕಾಲ ಬಾಟಲಿ ಮೂಲಕ ಸಿಹಿಯಾದ ದ್ರವ ಆಹಾರ ಅಥವಾ ಹಾಲು ಕುಡಿಸುತ್ತಿದ್ದರೆ.
* ಆಗಾಗ ಬಾಯಿ ಸ್ವಚ್ಛ ಮಾಡಿಸದೆ ಊಟ ಮಾಡಿಸಿದ ಹಾಲು ಕುಡಿಸಿದ ತಕ್ಷಣವೇ ಮಕ್ಕಳನ್ನು ಮಲಗಿಸಿ ಬಿಡುವುದು.
* ಪ್ರತಿನಿತ್ಯ ಬಾಯನ್ನು ಸ್ವಚ್ಛ ಮಾಡಿಸದೆ ಇದ್ದಾಗ.
* ಹಲ್ಲುಗಳು ಕಪ್ಪಗಾಗಿ ಹುಳುಕು ಹಿಡಿಯುತ್ತಿದ್ದರೂ ಅದನ್ನು ಗಮನಿಸದೇ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಬಿಡುವುದು.
* ರಾತ್ರಿಯ ಹೊತ್ತು ಬಾಟಲಿ ಸಮೇತ ಕಚ್ಚಿಕೊಂಡು ಚೀಪಿಕೊಂಡು ಮಗು ಮಲಗಿ ಬಿಡುವುದು.

ಸಮಸ್ಯೆ ಗೊತ್ತಾಗುವ ಲಕ್ಷಣಗಳು:
ಮಗು ತೀರಾ ಸಣ್ಣದಾಗಿದ್ದು ತನಗೆ ಆಗುತ್ತಿರುವ ತೊಂದರೆ ಸಮಸ್ಯೆ ಬಗ್ಗೆ ತಿಳಿಸಲು ಅಶಕ್ತವಾಗಿರುತ್ತದೆ. ಆ ಕಾರಣಕ್ಕೆ ಹಿರಿಯರು ಅದನ್ನು ಗಮನಿಸಬೇಕು. ಮುಖ್ಯವಾಗಿ ಹಲ್ಲುಗಳಲ್ಲಿ ಬಿಳಿ ಹಾಗೂ ಕಪ್ಪು ಕಲೆಗಳು, ತಿಂದ ಆಹಾರಕಣ ಒಂದೇ ಕಡೆ ಜಮೆಯಾಗುವುದು, ಹಲ್ಲು ಮತ್ತು ವಸಡುಗಳಲ್ಲಿ ಸಣ್ಣದಾಗೆ ಊತ,ರಕ್ತ ಬರುವುದು ನೋವು ಕಾಣಿಸುವುದು.

ಮೇಲೆ ತಿಳಿಸಿದ ಬಹಳಷ್ಟು ಲಕ್ಷಣಗಳು ಪೋಷಕರ ಅರಿವಿಗೆ ಬಂದರೂ ಹಾಲು ಹಲ್ಲುಗಳು ಹೇಗೂ ಉದುರುತ್ತವೆ,ಅದಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಮಕ್ಕಳಹಲ್ಲುಗಳನ್ನು ನಿರ್ಲಕ್ಷ್ಯ ಮಾಡಿಬಿಡುತ್ತಾರೆ. ಆದರೆ ನಿಮಗೆ ನೆನಪಿರಲಿ ಹಾಲು ಹಲ್ಲುಗಳೇ ಶಾಶ್ವತ ಹಲ್ಲುಗಳಿಗೆ ಅಡಿಪಾಯ ಆಗಿರುತ್ತವೆ. ಹಾಲು ಹಲ್ಲುಗಳ ಆರೈಕೆ ಮಾಡಿದಷ್ಟು ಮುಂದೆ ಬರುವ ಹಲ್ಲುಗಳು ಸುಸ್ಥಿತಿಯಲ್ಲಿ ಬೆಳೆದು ಬರುತ್ತವೆ.

ಚಿಕಿತ್ಸೆ :
* ಮಗುವಿನ ಬಾಯಲ್ಲಿ ಹಾಳಾಗಿರುವ ಹಾಲು ಹಲ್ಲುಗಳ ಸ್ಥಿತಿಯನ್ನು ಗಮನಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
* ಸಾಧ್ಯವಾದಷ್ಟು ರಾತ್ರಿಯ ಸಮಯದಲ್ಲಿ ಬಾಟಲಿ ಸಮೇತ ಎಂದಿಗೂ ಮಲಗಿಸಬಾರದು. ಎಚ್ಚರದ ಸ್ಥಿತಿಯಲ್ಲಿಯೇ ಹಾಲು ಕುಡಿಸಬೇಕು.
* ಆಹಾರ ಪದ್ಧತಿಯನ್ನು ವೈದ್ಯರಿಂದ ತಿಳಿದು ಅದರಂತೆ ಮುಂದುವರೆಯಬೇಕು.
* ಆರಂಭಿಕ ಹಂತದಲ್ಲಿಯೇ ಅದಕ್ಕೆ ಸಿಮೆಂಟ್ ಹಾಗೂ ಹುಳುಕು ಸ್ವಚ್ಛ ಮಾಡುವ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
* ತೀವ್ರ ಸೋಂಕು ಹಾಗೂ ಊತ ಇದ್ದಾಗ ಹಲ್ಲನ್ನು ಉಳಿಸಲು ಸಾಧ್ಯವಾಗುವುದಿಲ್ಲ.

ತಡೆಗಟ್ಟುವ ವಿಧಾನವೇನು?
* ಇವುಗಳೆಲ್ಲ ಹಾಲು ಹಲ್ಲುಗಳಾಗಿದ್ದು ಇವಕ್ಕೆ ಶಾಶ್ವತ ಚಿಕಿತ್ಸೆ ಮಾಡಲಾಗುವುದಿಲ್ಲ.
* ಆ ಕಾರಣಕ್ಕೆ ಸಮಸ್ಯೆ ಆಗದಂತೆ ತಡೆಗಟ್ಟುವುದೇ ಉಳಿದಿರುವ ಒಂದು ವಿಧಾನ.
* ಹಲ್ಲು ಬರುವ ಮುಂಚೆ ವಸಡುಗಳ ಸ್ವಚ್ಛತೆ ಕಾಪಾಡಬೇಕು. ತಾಯಿಯೇ ಬೆರಳನ್ನು ಹಾಕಿ ವಸಡುಗಳನ್ನು ನಯವಾಗಿ ತಿಕ್ಕಿ ಸ್ವಚ್ಛಗೊಳಿಸಬೇಕು.
* ಲೋಟದಲ್ಲಿ ಹಾಲು ಕುಡಿಸಿ ಮಲಗಿಸುವ ವ್ಯವಸ್ಥೆ ಮಾಡಬೇಕು. ಎಂದಿಗೂ ಬಾಟಲಿಯಲ್ಲಿ ಹಾಕಿ ಮಲಗಿದ ಮೇಲೆ ಹಾಲನ್ನು ಕುಡಿಸುವ ಅಭ್ಯಾಸ ಮಾಡಿಸಬಾರದು.
* ರಾತ್ರಿಯ ಸಮಯ ಸಿಹಿ ದ್ರವ, ಹಲ್ಲಿಗೆ ಅಂಟುವ ಪದಾರ್ಥಗಳನ್ನು ಅಭ್ಯಾಸ ನಿಲ್ಲಿಸಬೇಕು.
* ಬಾಟಲಿ ಬಿಡಲು ಮಗು ತಯಾರಾಗಿಲ್ಲದೆ ಇದ್ದಾಗ ಅಥವಾ ಬಾಟಲಿ ತೆಗೆದ ತಕ್ಷಣ ಜೋರಾಗಿ ಅಳುತ್ತಿದ್ದರೆ ನೀರನ್ನು ಹಾಕಿ ಕೊಡಬೇಕು ಅಥವಾ ಹೆಚ್ಚು ನೀರನ್ನು ಹಾಲಿಗೆ ಹಾಕಿ ಹಂತ ಹಂತವಾಗಿ ಬಾಟಲಿಯನ್ನು ಬಿಡಿಸಬೇಕು.
* ಪ್ರತಿ ಬಾರಿ ಆಹಾರ ಸೇವಿಸಿದ ನಂತರ ಬಾಯಲ್ಲಿ ನೀರನ್ನು ಹಾಕಿಕೊಂಡು ಮುಕ್ಕಳಿಸಿ ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಸಬೇಕು.
* ಇಡೀ ದಿನ ಸಕ್ಕರೆ ಪದಾರ್ಥಗಳನ್ನು ಕೊಡಲೇಬಾರದು.
* ಪೌಷ್ಟಿಕಾಂಶಯುಕ್ತ ಆಹಾರ ತರಕಾರಿ ಸೇವಿಸಲು ಉತ್ತೇಜಿಸಬೇಕು. ಸಿಹಿ ಅಂಟು ಬೇಕರಿ ತಿನಿಸು ತಿನ್ನಿಸಲು ಅಭ್ಯಾಸ ಮಾಡಿಸಬಾರದು.
* ಹಲ್ಲು ಮೂಡುವಾಗ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಕಂಡು ದಂತ ಪರೀಕ್ಷಣೆ ಮಾಡಿಸಬೇಕು.
* ಹಾಲು ಹಲ್ಲುಗಳ ಕಡೆಗೆ ಪೋಷಕರು ಗಮನ ಹರಿಸಬೇಕು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now