ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ UGCET-2026ರ ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಚಾಲನೆ ನೀಡಿದೆ. ಶನಿವಾರದಿಂದ ಆಪ್ಷನ್ ಎಂಟ್ರಿ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು ಜೂನ್ 30ರವರೆಗೆ ತಮ್ಮ ಇಚ್ಛೆಯ ಕಾಲೇಜು ಹಾಗೂ ಕೋರ್ಸ್‌ಗಳ ಆಯ್ಕೆಯನ್ನು ದಾಖಲಿಸಬಹುದು.
KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಜೂನ್ 20ರಿಂದ ಆಪ್ಷನ್ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಆದ್ಯತೆಯ ಕಾಲೇಜುಗಳು ಮತ್ತು ಕೋರ್ಸ್‌ಗಳನ್ನು ಸೂಕ್ತವಾಗಿ ಆಯ್ಕೆ ಮಾಡಿ ದಾಖಲಿಸಬೇಕಿದೆ.
ಆಪ್ಷನ್ ಎಂಟ್ರಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಜುಲೈ 6ರಂದು ಅಣಕು (Mock) ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಈ ಫಲಿತಾಂಶದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ತಮ್ಮ ಆಯ್ಕೆಗಳನ್ನು ಮರುಪರಿಶೀಲಿಸಿ, ಸೇರಿಸುವುದು, ತೆಗೆದುಹಾಕುವುದು ಅಥವಾ ಬದಲಾಯಿಸುವುದಕ್ಕೆ ಜುಲೈ 6ರಿಂದ 9ರವರೆಗೆ ಅವಕಾಶ ನೀಡಲಾಗಿದೆ.ನಂತರ ಜುಲೈ 15ರಂದು ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದ್ದು, ಅಭ್ಯರ್ಥಿಗಳು KEA ಪೋರ್ಟಲ್‌ನಲ್ಲಿ ತಮ್ಮ ಸೀಟಿನ ವಿವರಗಳನ್ನು ಪರಿಶೀಲಿಸಬಹುದು.
ಇದೇ ವೇಳೆ, NEET-2026 ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಜೂನ್ 22ರ ನಂತರ ಆಪ್ಷನ್ ಎಂಟ್ರಿ ಪ್ರಕ್ರಿಯೆ ಆರಂಭವಾಗಲಿದೆ ಎಂದು KEA ತಿಳಿಸಿದೆ.

ಕೌನ್ಸೆಲಿಂಗ್ ಪ್ರಕ್ರಿಯೆಯ ಅತ್ಯಂತ ಮಹತ್ವದ ಹಂತ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ಎಚ್ಚರಿಕೆಯಿಂದ ಆಯ್ಕೆಗಳನ್ನು ದಾಖಲಿಸಬೇಕು. ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಸಮರ್ಪಕವಾಗಿ ವಿಶ್ಲೇಷಿಸಿ ಅಗತ್ಯ ಬದಲಾವಣೆಗಳನ್ನು ಮಾಡಿದರೆ ಉತ್ತಮ ಕಾಲೇಜು ಹಾಗೂ ಕೋರ್ಸ್‌ನಲ್ಲಿ ಸೀಟು ಪಡೆಯುವ ಸಾಧ್ಯತೆ ಹೆಚ್ಚಾಗಲಿದೆ.








