ಬಾಲ್ಯದಲ್ಲಿ ಲಸಿಕೆಗಳನ್ನು ಹಾಕಿಸಿಕೊಂಡರೆ ಜೀವನಪರ್ಯಂತ ಎಲ್ಲಾ ರೋಗಗಳಿಂದ ರಕ್ಷಣೆ ಸಿಗುತ್ತದೆ ಎಂಬುದು ಹಲವರ ನಂಬಿಕೆ. ಆದರೆ, ಕಾಲಕ್ರಮೇಣ ಕೆಲವು ಲಸಿಕೆಗಳ ರೋಗನಿರೋಧಕ ಶಕ್ತಿ ಕ್ಷೀಣಿಸಬಹುದು. ಹೀಗಾಗಿ, ಪ್ರೌಢಾವಸ್ಥೆಯಲ್ಲೂ ಹಲವು ಗಂಭೀರ ಕಾಯಿಲೆಗಳಿಂದ ದೂರವಿರಲು ಬೂಸ್ಟರ್ ಡೋಸ್ಗಳು ಮತ್ತು ವಯಸ್ಕರಿಗೆ ಸಂಬಂಧಿಸಿದ ಲಸಿಕೆಗಳನ್ನು ಪಡೆದುಕೊಳ್ಳುವುದು ಮುಖ್ಯ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ವಯಸ್ಕರು ಕಡೆಗಣಿಸಬಾರದ ಪ್ರಮುಖ 6 ಲಸಿಕೆಗಳ ವಿವರ ಇಲ್ಲಿದೆ:
ಟೆಟಾನಸ್ ಬೂಸ್ಟರ್ (Tetanus)
ಬಾಲ್ಯದಲ್ಲಿ ಟೆಟಾನಸ್ ಲಸಿಕೆ ಪಡೆದಿದ್ದರೂ, ವಯಸ್ಕರಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಬೂಸ್ಟರ್ ಡೋಸ್ ಅಗತ್ಯವಿರುತ್ತದೆ. ತುಕ್ಕು ಹಿಡಿದ ವಸ್ತುಗಳಿಂದ ಗಾಯವಾದಾಗ, ಸುಟ್ಟ ಗಾಯಗಳು ಅಥವಾ ಮಣ್ಣು ಹಾಗೂ ಪ್ರಾಣಿಗಳ ತ್ಯಾಜ್ಯಕ್ಕೆ ತುತ್ತಾದಾಗ ಟೆಟಾನಸ್ ಸೋಂಕು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಇತ್ತೀಚೆಗೆ ಈ ಲಸಿಕೆ ಪಡೆದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಹೆಪಟೈಟಿಸ್-ಬಿ (Hepatitis B)
ರಕ್ತ, ಸೋಂಕಿತ ಸೂಜಿಗಳು ಮತ್ತು ದೇಹದ ಇತರ ದ್ರವಗಳ ಮೂಲಕ ಹರಡುವ ಹೆಪಟೈಟಿಸ್-ಬಿ ವೈರಸ್, ಯಕೃತ್ತಿನ (ಲಿವರ್) ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಲಿವರ್ ಸಿರೋಸಿಸ್ ಹಾಗೂ ಕ್ಯಾನ್ಸರ್ಗೆ ಕಾರಣವಾಗಬಹುದು. ಬಾಲ್ಯದಲ್ಲಿ ಈ ಲಸಿಕೆಯ ಎಲ್ಲಾ ಡೋಸ್ಗಳನ್ನು ಪೂರ್ಣಗೊಳಿಸದ ವಯಸ್ಕರು ‘Anti-HBs’ ಪರೀಕ್ಷೆಯ ಮೂಲಕ ರೋಗನಿರೋಧಕ ಮಟ್ಟವನ್ನು ತಿಳಿದುಕೊಂಡು, ಅಗತ್ಯವಿದ್ದರೆ ಲಸಿಕೆ ಹಾಕಿಸಿಕೊಳ್ಳಬೇಕು.
ನ್ಯೂಮೋಕೊಕಲ್ ಲಸಿಕೆ (Pneumococcal)
ನ್ಯೂಮೋಕೊಕಲ್ ಬ್ಯಾಕ್ಟೀರಿಯಾದಿಂದ ನ್ಯುಮೋನಿಯಾ ಮತ್ತು ಇತರ ತೀವ್ರ ಶ್ವಾಸಕೋಶದ ಸೋಂಕುಗಳು ಉಂಟಾಗುತ್ತವೆ. ವಿಶೇಷವಾಗಿ ಹಿರಿಯ ನಾಗರಿಕರು, ಮಧುಮೇಹ, ಶ್ವಾಸಕೋಶದ ತೊಂದರೆ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ವೈದ್ಯರ ಸಲಹೆಯ ಮೇರೆಗೆ ಈ ಲಸಿಕೆಯನ್ನು ಪಡೆಯುವುದು ಸುರಕ್ಷಿತ.
ಇನ್ಫ್ಲುಯೆಂಜಾ / ಫ್ಲೂ ಲಸಿಕೆ (Influenza)
ಫ್ಲೂ ವೈರಸ್ ತನ್ನ ಸ್ವರೂಪವನ್ನು ಕಾಲಕಾಲಕ್ಕೆ ಬದಲಾಯಿಸಿಕೊಳ್ಳುತ್ತಿರುತ್ತದೆ. ಆದ್ದರಿಂದ ಹಿರಿಯರು, ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇರುವವರು ವಾರ್ಷಿಕವಾಗಿ (ಪ್ರತಿ ವರ್ಷ) ಫ್ಲೂ ಲಸಿಕೆ ಪಡೆಯುವುದು ಸೂಕ್ತ. ಇದು ಆಸ್ಪತ್ರೆಗೆ ದಾಖಲಾಗುವಂತಹ ಗಂಭೀರ ಪರಿಸ್ಥಿತಿಗಳನ್ನು ತಪ್ಪಿಸಲು ಸಹಕರಿಸುತ್ತದೆ.
ಎಚ್ಪಿವಿ ಲಸಿಕೆ (HPV – Human Papillomavirus)
ಹ್ಯೂಮನ್ ಪ್ಯಾಪಿಲೋಮಾವೈರಸ್ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ಗೆ (Cervical Cancer) ಪ್ರಮುಖ ಕಾರಣವಾಗಿದೆ. ಹದಿಹರೆಯದವರಲ್ಲಿ ಇದು ಹೆಚ್ಚು ಪರಿಣಾಮಕಾರಿಯಾದರೂ, ಬಾಲ್ಯದಲ್ಲಿ ಅಥವಾ ಹದಿಹರೆಯದಲ್ಲಿ ಪಡೆಯದ ವಯಸ್ಕ ಮಹಿಳೆಯರು ಹಾಗೂ ಪುರುಷರು ತಮ್ಮ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಆಧರಿಸಿ ವೈದ್ಯರ ಮಾರ್ಗದರ್ಶನದಲ್ಲಿ ಈ ಲಸಿಕೆ ಪಡೆಯಬಹುದು.
ವರಿಸೆಲ್ಲಾ ಲಸಿಕೆ (Varicella – ಚಿಕನ್ಪಾಕ್ಸ್)
ಬಾಲ್ಯದಲ್ಲಿ ಚಿಕನ್ಪಾಕ್ಸ್ (ಅಮ್ಮನ ಕಾಯಿಲೆ) ಬಾರದ ವಯಸ್ಕರಿಗೆ ಈ ಸೋಂಕು ತಗಲುವ ಅಪಾಯವಿರುತ್ತದೆ. ಮಕ್ಕಳಿಗಿಂತ ವಯಸ್ಕರಲ್ಲಿ ಚಿಕನ್ಪಾಕ್ಸ್ ಬಂದಾಗ ಅದರ ತೀವ್ರತೆ ಹಾಗೂ ಅಡ್ಡಪರಿಣಾಮಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಈ ಸೋಂಕಿನ ಇತಿಹಾಸವಿಲ್ಲದ ವಯಸ್ಕರು ವರಿಸೆಲ್ಲಾ ಲಸಿಕೆ ಕುರಿತು ಯೋಚಿಸುವುದು ಒಳಿತು.
ಗಮನಿಸಿ: ಪ್ರತಿಯೊಬ್ಬರ ಆರೋಗ್ಯ ಪರಿಸ್ಥಿತಿ, ವಯಸ್ಸು ಮತ್ತು ಹಿಂದಿನ ಚಿಕಿತ್ಸಾ ಇತಿಹಾಸ ಬೇರೆಯಾಗಿರುತ್ತದೆ. ಯಾವುದೇ ಲಸಿಕೆಯನ್ನು ಪಡೆಯುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯುವುದು ಅಗತ್ಯ.














