ಗೌನಹಳ್ಳಿ ಗೋವಿಂದಪ್ಪ,
ಸಂಪಾದಕರು, ಜನಾಶಯ ಪ್ರಭ
ಚಿತ್ರದುರ್ಗ, ಮೊ : 88809 99001
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 10 : ಜನರ ದಶಕಗಳ ನಿರೀಕ್ಷೆಯ ಭದ್ರಾ ಮೇಲ್ದಂಡೆ ಯೋಜನೆಯ ಪ್ರಾಯೋಗಿಕ ನೀರು ಹರಿಯಲು ಸರ್ಕಾರ ಆರಂಭಿಸಿದೆ. ಹಳ್ಳಿ ಹಳ್ಳಿಗಳಲ್ಲಿ ಜನ ಕಾತುರದಿಂದ ಭದ್ರೆಯನ್ನು ಸ್ವಾಗತಿಸಿಕೊಂಡು, ಸಂಭ್ರಮಿಸಿ ಸಂತೃಪ್ತ ಮನೋಭಾವದ ಮಂದಹಾಸ ಮೂಡಿಸಿದೆ. ಪಶ್ಚಿಮಘಟ್ಟದ ಮಡಿಲಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಎತ್ತರದ ಬಯಲುಸೀಮೆಗೆ ಹರಿಯುತ್ತಿರುವುದು ಒಂದು ಐತಿಹಾಸಿಕ ಘಟನೆಯಾಗಿದೆ. ತರೀಕೆರೆ, ಕಡೂರು, ಹೊಸದುರ್ಗ, ಹೊಳಲ್ಕೆರೆ ದಾಟಿ 2026ನೇ ಸೆಪ್ಟೆಂಬರ್ 9 ರಂದು ಚಿತ್ರದುರ್ಗವನ್ನು ಗುರುತ್ವಾಕರ್ಷಣೆಯ ಮೂಲಕ ಗೋನೂರು ಕೆರೆ ತಲುಪಿದೆ.
ಬಯಲುಸೀಮೆ ಮಣ್ಣಿನ ಮಕ್ಕಳಿಗೆ ಇದು ಬರೀ ನೀರಲ್ಲ, ತಲಾ ತಲಾಂತರಗಳಿಂದ ಕಂಡ ಬರದ ಮುಕ್ತಿಯ ಕನಸಿನ ಸಾಕ್ಷಾತ್ಕಾರ. ಆದರೆ ಈ ಪ್ರಾಯೋಗಿಕ ನೀರು ಹರಿವಿನ ಕುರಿತು ಪ್ರತಿಯೊಬ್ಬರ ಮನದಲ್ಲೂ ಕುತೂಹಲ ಹಾಗೂ ಪ್ರಶ್ನೆ ಮೂಡಿದೆ. ಈ ನೀರು ಎಷ್ಟು ದಿನ ಬರಲಿದೆ? ಪ್ರಾಯೋಗಿಕವಾಗಿ ಬಿಟ್ಟ ನಂತರ ನಿಗದಿತ ಸ್ಥಳ ಮುಟ್ಟಿದ ಮೇಲೆ ನಿಲ್ಲಿಸಿಬಿಡುತ್ತಾರಾ? ಎಷ್ಟು ಕೆರೆಗಳು ತುಂಬಬಹುದು? ಹೀಗೆ ಹತ್ತು ಹಲವು ಪ್ರಶ್ನೆಗಳು ಜನರಲ್ಲಿ ಹುಟ್ಟಿಕೊಂಡಿವೆ.
ಪ್ರಾಯೋಗಿಕವಾಗಿ ಹಂಚಿಕೆಯಾಗಿರುವ 3 ಟಿಎಂಸಿ ಅಡಿ ನೀರಿನ ಪ್ರಮಾಣ ಮತ್ತು ಕಾಲಮಿತಿ ಸಂಪೂರ್ಣವಾಗಿ ಶಾಂತಿಪುರ ಮತ್ತು ಬೆಟ್ಟತಾವರೆಕೆರೆಯ ಪಂಪ್ ಹೌಸ್ ಗಳಲ್ಲಿ ಅಳವಡಿಸಿರುವ ಯಂತ್ರಗಳ ಸಾಮರ್ಥ್ಯವನ್ನು ಅವಲಂಬಿಸಿದೆ. ಒಂದು ಟಿಎಂಸಿ ಅಡಿ ನೀರು ಹರಿಸಲು 16 ದಿನಗಳ ಕಾಲ ಅದೇ ವೇಗದಲ್ಲಿ 18,400 ಹೆಚ್ಪಿ (HP) ಸಾಮರ್ಥ್ಯದ ಮೋಟಾರ್ ನೀರನ್ನು ಮೇಲಕ್ಕೆ ಎತ್ತಬೇಕಾಗುತ್ತದೆ. ಹೀಗಾಗಿ 3 ಟಿಎಂಸಿ ಅಡಿ ನೀರನ್ನು ಮೇಲೆತ್ತಿ ಬಯಲುಸೀಮೆಗೆ ಸಾಗಿಸಲು ಆ ಬೃಹತ್ ಮೋಟಾರುಗಳು ನಿರಂತರವಾಗಿ ಕನಿಷ್ಠ 48 ದಿನಗಳ ಕಾಲ ಘರ್ಜಿಸಬೇಕಾಗುತ್ತದೆ. ನೀರನ್ನು 48 ದಿನಗಳ ಕಾಲ ಮೇಲೆತ್ತಿ ಕಳುಹಿಸಲು ತಗಲುವ ಒಟ್ಟು ವಿದ್ಯುತ್ ವೆಚ್ಚ ರೂ.18 ಕೋಟಿ. ದಿನಕ್ಕೆ ರೂ.37,50,000 ವಿದ್ಯುತ್ ವೆಚ್ಚ ತಗಲುವುದು. ಸರ್ಕಾರ ನಿಗದಿಪಡಿಸಿರುವ 3 ಟಿಎಂಸಿ ಅಡಿ ನೀರು ಹರಿಯುವುದು ಖಚಿತವಾಗಿದ್ದು, ನೀರು ನಿಗದಿತ ಸ್ಥಳಕ್ಕೆ ತಲುಪುವುದಕ್ಕಿಂತ ಸರ್ಕಾರ ನಿಗದಿಪಡಿಸಿದ ನೀರಿನ ಪೂರೈಕೆ ಇಲ್ಲಿ ಗಮನಾರ್ಹವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದ ಮುಖ್ಯ ಇಂಜಿನಿಯರ್ ಹೆಚ್. ರವಿಶಂಕರ್ ಅವರು, ಭದ್ರಾ ಮೇಲ್ದಂಡೆಯಿಂದ 3 ಟಿಎಂಸಿ ಅಡಿ ನೀರನ್ನು ಪ್ರಾಯೋಗಿಕವಾಗಿ ಹರಿಸಲಾಗುವುದು. ಗೋನೂರಿಗೆ ನೀರು ತಲುಪಿದ ನಂತರ ನಿಗದಿಪಡಿಸಿರುವ 78 ಕೆರೆಗಳಿಗೆ ಸಂದರ್ಭ ನೋಡಿಕೊಂಡು ನೀರನ್ನು ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಭದ್ರೆಗೆ ಅಧಿಕಾರಿಗಳ ಎಸ್ಕಾರ್ಟ್ ದೊರೆತಿತ್ತು. ಭದ್ರೆ ಕಾಲುವೆ ಮೂಲಕ ಹರಿಯುವುದನ್ನು ವೀಕ್ಷಿಸುತ್ತ ಭದ್ರಾ ಮೇಲ್ದಂಡೆಯ ಇಂಜಿನಿಯರ್ಗಳು ಮತ್ತು ಚಿತ್ರದುರ್ಗಕ್ಕೆ ಹತ್ತಿರವಾದಾಗ ಕಚೇರಿಯ ಇಡೀ ಅಧಿಕಾರಿ ಸಮೂಹವೇ ಕಾಲುವೆ ಪಕ್ಕ ವಾಹನಗಳಲ್ಲಿ ಸಾಗುತ್ತ ಭದ್ರೆ ಹರಿಯುವುದನ್ನು ಕಣ್ಣು ತುಂಬಿಕೊಳ್ಳುತ್ತಿದ್ದರು. ಬೆಟ್ಟದತಾವರೆಕೆರೆಯಿಂದ ಚಿತ್ರದುರ್ಗದ ಗೋನೂರು ಕೆರೆಯವರೆಗೆ ಭದ್ರಾ ಪಯಣ 2026 ಸೆಪ್ಟೆಂಬರ್ 7 ರಂದು ಮಧ್ಯಾಹ್ನ 02:00 ಕ್ಕೆ ಪ್ರಾರಂಭವಾಗಿ 2026 ಸೆಪ್ಟೆಂಬರ್ 9 ರಂದು ಸಂಜೆಗೆ ಮುನ್ನ 3.75 ಕ್ಕೆ (3 ಗಂಟೆ 45 ನಿಮಿಷಕ್ಕೆ) ಗೋನೂರು ಕೆರೆಯನ್ನು ತಲುಪಿತು. ಈ ಮಾರ್ಗದಲ್ಲಿ ಅದು ಕ್ರಮಿಸಿದ ಒಟ್ಟು ದೂರ 130.162 ಕಿ.ಮೀ ಆಗಿದ್ದು, ತೆಗೆದುಕೊಂಡ ಒಟ್ಟು ಸಮಯ 73 ಗಂಟೆ 45 ನಿಮಿಷಗಳು. ಹರಿವಿನ ಸರಾಸರಿ ವೇಗ ಗಂಟೆಗೆ ಸುಮಾರು 1.76 ಕಿ.ಮೀ ಆಗಿದೆ.
ಬಹು ವರ್ಷಗಳ ಕಾಲ ಬಯಲುಸೀಮೆ ಜನರ ಕಾಯುವಿಕೆಗೆ ಕೊನೆಗೂ ತೆರೆಬಿದ್ದ ಮನೋಭಾವ ಮೂಡಿದೆ. ಬಾಯಾರಿದ ಒಣ ಭೂಮಿಗೆ, ದಶಕಗಳಿಂದ ನೀರಿಗಾಗಿ ದಾರಿ ಕಾಯುತ್ತಿದ್ದ ರೈತರ ಕಣ್ಣುಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ತಂಪೆರೆದಿದೆ. ಹೊಸದುರ್ಗ ಭಾಗಕ್ಕೆ ನೀರು ಪ್ರವೇಶಿಸುತ್ತಿದ್ದಂತೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನೀರು ಬರುವ ಕ್ಷಣವನ್ನು ಕಣ್ಣು ತುಂಬಿಕೊಳ್ಳಲು ಗಡಿಭಾಗದ ಗ್ರಾಮಸ್ಥರು ಹಗಲು ರಾತ್ರಿ ಎನ್ನದೇ ಕಾಲುವೆ ದಂಡೆಯಲ್ಲಿ ಬೀಡುಬಿಟ್ಟಿದ್ದರು. ಕೊರೆಯುವ ಚಳಿಯಲ್ಲೂ ಕೈಯಲ್ಲಿ ಟಾರ್ಚ್ ಹಿಡಿದು ಕಾದು ನಿಂತಿದ್ದರು. ರಾತ್ರಿಯ ಕತ್ತಲನ್ನು ಸೀಳಿಕೊಂಡು ನೀರು ರಭಸದಿಂದ ಹರಿದುಬಂದ ತಕ್ಷಣ ಜಯಘೋಷ ಕೂಗುತ್ತಾ ಸಿಳ್ಳೆ ಹೊಡೆದು ಸಂಭ್ರಮಿಸಿದರು. ಹಲವು ಹಳ್ಳಿಗಳಲ್ಲಿ ಯುವಕ-ಯುವತಿಯರು ಜುಳು ಜುಳು ಹರಿಯುವ ಭದ್ರೆಗೆ ಸಾಕ್ಷಿಯಾಗಿ ಆ ನಾದವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡುವುದು, ಭದ್ರೆ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿರುವುದು ವಿಶೇಷವಾಗಿತ್ತು.
ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ವಚನ ಗಾಯನದೊಂದಿಗೆ ಭದ್ರೆಗೆ ಬಾಗಿಣ ಅರ್ಪಿಸಿದರು. ಗ್ರಾಮಸ್ಥರು ಹಳ್ಳಿ ಹಳ್ಳಿಗಳಲ್ಲಿ ಹೂವು, ಹಣ್ಣು, ಕರ್ಪೂರ, ಊದುಬತ್ತಿ ಹಚ್ಚಿ ಕಾಲುವೆಗೆ ಪೂಜೆ ಸಲ್ಲಿಸಿದರು. ಮಹಿಳೆಯರು ತಮ್ಮ ಸೀರೆ ಸೆರಗಿನಲ್ಲಿ ಹಾಗೂ ಪುರುಷರು ಟವಲ್ಗಳಲ್ಲಿ ಹೂವುಗಳನ್ನು ತಂದು ಭದ್ರೆಗೆ ಚೆಲ್ಲಿ ಭಾವಪರವಶರಾದರು. ಮದಕರಿಪುರದ ಬಳಿ ಸೇವಂತಿಗೆ ಹೂವನ್ನು ಭದ್ರಾ ಮೇಲ್ದಂಡೆ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಕೈಯಲ್ಲಿ ಹಿಡಿದು ಭದ್ರೆಗೆ ಅರ್ಪಿಸಿದರು. ಗೋನೂರು ಕೆರೆಗೆ ಇಳಿಜಾರಿನಲ್ಲಿ ಬೋರ್ಗರೆಯುತ್ತ ಭದ್ರೆಯ ನೀರು ಹರಿಯುವುದನ್ನು ಕಂಡು ಸೇರಿದ್ದ ಜನಸ್ತೋಮ ಅಬ್ಬರಿಸಿ, ಕೇಕೆ ಹೊಡೆದು ಸಂಭ್ರಮಿಸಿದರು. ಎಲ್ಲೆಡೆ ಹಳ್ಳಿ ಹಳ್ಳಿಗಳಲ್ಲೂ ಹರ್ಷವೋ ಹರ್ಷ ಮುಗಿಲುಮುಟ್ಟಿತ್ತು.












