Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಂದಿನ 8 ವರ್ಷ ಡಿ.ಕೆ.ಶಿವಕುಮಾರ್ ಗದ್ದುಗೆ ಅಲ್ಲಾಡಿಸೋರು ಯಾರೂ ಇಲ್ಲ : ದ್ವಾರಕನಾಥ್ ಗುರೂಜಿ ಭವಿಷ್ಯ

---Advertisement---

ಸುದ್ದಿಒನ್,ಬೆಂಗಳೂರು,ಮೇ.30: ಕರ್ನಾಟಕ ರಾಜಕೀಯದ ದಿಕ್ಸೂಚಿ ಬದಲಾಗಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಯ ಬೆನ್ನಲ್ಲೇ ರಾಜ್ಯದ ಮುಂದಿನ ಚುಕ್ಕಾಣಿ ಯಾರಿಗೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಡಿ.ಕೆ. ಶಿವಕುಮಾರ್ ಸಿಎಂ ಕುರ್ಚಿ ಏರುವುದು ಬಹುತೇಕ ಖಚಿತವಾಗಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಡಿಕೆಶಿ ಅವರ ಪರಮಾಪ್ತ ಹಾಗೂ ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಡಿಕೆಶಿ ಜಾತಕದಲ್ಲಿ ಈಗ ಪ್ರಬಲ ರಾಜಯೋಗ ಆರಂಭವಾಗಿದ್ದು, ಮುಂದಿನ ಎಂಟು ವರ್ಷಗಳ ಕಾಲ ಅವರ ಅಧಿಕಾರವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಡಿ.ಕೆ. ಶಿವಕುಮಾರ್ ಅವರೊಂದಿಗೆ ತಮಗಿರುವ 35 ವರ್ಷಗಳ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡ ದ್ವಾರಕನಾಥ್ ಗುರೂಜಿ, ಕುತೂಹಲಕಾರಿ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. “ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಸಿಗುವುದು ತಡವಾಗುತ್ತಿದ್ದರಿಂದ ನಾನು ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶೃಂಗೇರಿಯ ಶಾರದಾಂಬೆ ದೇವಸ್ಥಾನಕ್ಕೆ ಹೋಗಿದ್ದೆ. ಗರ್ಭಗುಡಿಯ ಮುಂದೆ ನಾನು ಬೇಡಿಕೊಳ್ಳುತ್ತಿದ್ದಾಗಲೇ ಖುದ್ದು ಡಿ.ಕೆ. ಶಿವಕುಮಾರ್ ಅವರೇ ನನಗೆ ಕರೆ ಮಾಡಿ, ‘ಗುರೂಜಿ, ಕೆಲಸ ಮುಗಿಯಿತು’ ಎಂದು ಸಂತಸದ ಸುದ್ದಿ ನೀಡಿದರು ಎಂದು ಗುರೂಜಿ ತಿಳಿಸಿದ್ದಾರೆ.

ದಶಕಗಳ ಹಿಂದೆ ಎಸ್. ಬಂಗಾರಪ್ಪನವರ ಸಂಪುಟದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಜೈಲು ಮಂತ್ರಿಯಾಗಿದ್ದಾಗಲೇ, ‘ನೀನು ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗ್ತೀಯಾ’ ಎಂದು ತಾವು ನುಡಿದಿದ್ದ ಮಾತು ಈಗ ಅಕ್ಷರಶಃ ನಿಜವಾಗುತ್ತಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.

ಇಬ್ಬರು ನಾಯಕರ ಜಾತಕ ಮತ್ತು ಗ್ರಹಗತಿಗಳ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ ನಡೆಸಿರುವ ಗುರೂಜಿ, “ಸಿದ್ದರಾಮಯ್ಯ ಅವರದ್ದು ವೃಶ್ಚಿಕ ರಾಶಿ. ಪ್ರಸ್ತುತ ಅವರಿಗೆ ಗುರು ಹಾಗೂ ಶನಿ ಇಬ್ಬರ ಬಲವೂ ಇಲ್ಲದ ಕಾರಣ, ಅವರ ಸಿಎಂ ಆಗುವ ರಾಜಯೋಗ ಸದ್ಯಕ್ಕೆ ಮುಕ್ತಾಯವಾಗಿದೆ. ಆದರೆ, ರಾಜ್ಯಕ್ಕೆ ಅವರ ಮಾರ್ಗದರ್ಶನದ ಅವಶ್ಯಕತೆ ಖಂಡಿತಾ ಇದೆ. ಇನ್ನೊಂದೆಡೆ ಡಿಕೆಶಿಗೆ ಸುವರ್ಣ ಕಾಲ ಆರಂಭವಾಗಿದೆ. ಗೋಚಾರ ಫಲದ ಪ್ರಕಾರ ಗುರು ಈಗ ಮಿಥುನ ರಾಶಿಯಲ್ಲಿದ್ದಾನೆ. ಇದು ಶಿವಕುಮಾರ್ ಅವರಿಗೆ ಪ್ರಬಲ ರಾಜಯೋಗ ತಂದುಕೊಡಲಿದ್ದು, ಮುಂದಿನ 8 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ಅವರದ್ದೇ ಪಾರುಪತ್ಯ ಇರಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

Join WhatsApp

Join Now

Join Telegram

Join Now