Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ವಜ್ಞರ ತ್ರಿಪದಿಗಳಲ್ಲಿದೆ ಅದ್ಭುತ ಸಂದೇಶ : ಎಡಿಸಿ ಬಿ.ಟಿ.ಕುಮಾರಸ್ವಾಮಿ

---Advertisement---

ಚಿತ್ರದುರ್ಗ. ಫೆ.20: ಸಮಾಜದ ಆಗು-ಹೋಗು, ಅಂಕು-ಡೊಂಕುಗಳನ್ನು, ಒರೆ-ಕೋರೆಗಳನ್ನು ಅತ್ಯಂತ ಸುಲಭ, ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥೈಸುವ ಶೈಲಿಯಲ್ಲಿ ತ್ರಿಪದಿ ರಚಿಸಿ ಸರ್ವಜ್ಞ ಅವರು ನೀಡಿದ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ, ಕುಂಬಾರ ಗುಂಡಯ್ಯ ಮಹಾಸಂಸ್ಥಾನ, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ಕುಲಕೋಟಿಗೆ ಚಿರಪಚಿರಿತನಾದವರು ಕವಿ ಸರ್ವಜ್ಞ. ಸಮಾಜದ ಅಂಕುಡೊಂಕುಗಳನ್ನು, ಮೌಢ್ಯಗಳನ್ನು ನಿರ್ಧಾಕ್ಷಿಣ್ಯವಾಗಿ, ಕಟುವಾಗಿ ಟೀಕಿಸಿ ತನ್ಮೂಲಕ ಸಮಾಜ ತಿದ್ದಲು ಸರ್ವಜ್ಞರು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದ ಅವರು, ಸರ್ವಜ್ಞರ ವಚನಗಳು ನೇರ ಹಾಗೂ ಸರಳವಾಗಿದ್ದು, ಜನಸಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ ಎಂದು ಹೇಳಿದರು.

ಚಿಕ್ಕಬೆನ್ನೂರು ಶಿಕ್ಷಕಿ ಗೀತಾ  ಭರಮಸಾಗರ ಮಾತನಾಡಿ, ಕರ್ನಾಟಕದ ಭಾಷಾ ಪರಂಪರೆಯಲ್ಲಿ ಸರ್ವಜ್ಞನ ತ್ರಿಪದಿಗಳು ಅತ್ಯಂತ ಮಹತ್ವದ ಪಾತ್ರ ವಹಿಸಿವೆ. ಕನ್ನಡ ಸಾಹಿತ್ಯ ಶ್ರೀಮಂತ ಪರಂಪರೆಗೆ ತ್ರಿಪದಿಗಳ ಕೊಡುಗೆ ಅನನ್ಯ. ಸರ್ವಜ್ಞರು ಸಾಮಾಜಿಕ ಬದುಕನ್ನು, ಸ್ವ ಅನುಭವ, ಅರಿವು ಕಟ್ಟಿಕೊಡುವ ಕೆಲಸವನ್ನು ತ್ರಿಪದಿಗಳು ಮಾಡುತ್ತಿವೆ. ಇಂದಿನ ಬದುಕಿಗೆ ಸರ್ವಜ್ಞನ ತ್ರಿಪದಿಗಳು ಅತ್ಯಂತ ಹೆಚ್ಚು ಪ್ರಸ್ತುತವಾಗಿವೆ ಎಂದು ಹೇಳಿದರು.
ಸರ್ವಜ್ಞರು ಸಮಾಜದ ಒಳಗಿರುವ ಲೋಪ-ದೋಷ ತಿದ್ದಿ, ಪರಿಹಾರ ಕಂಡುಕೊಳ್ಳುತ್ತಾ, ಸಮಾಜ ತಿದ್ದುವ ಕೆಲಸ ಮಾಡಿದರು. ರಾಜರು ಕಳೆಗುಂದಿ, ಸಮಾಜದಲ್ಲಿ ಧಾರ್ಮಿಕ ನೀತಿ, ನಿಯಮಗಳು ಶಿಥಿಲಾವಸ್ಥೆಯಲ್ಲಿದ್ದ ಸಮಯದಲ್ಲಿ ಕ್ರಾಂತಿಪುರುಷನಾದ ಸರ್ವಜ್ಞ ಹೊರಹೊಮ್ಮುತ್ತಾರೆ. ಆ ಸಂದರ್ಭದಲ್ಲಿ ಮೇಲ್ವರ್ಗದ ಜನರಿಂದ ತಳಸಮುದಾಯದವರ ಮೇಲೆ ಆಗುವ ಶೋಷಣೆ, ಸಮಾಜದಲ್ಲಿರುವ ಅಸಮಾನತೆ, ಮೌಢ್ಯತೆ ಹೋಗಲಾಡಿಸಿ, ಸಮ ಸಮಾಜದ ಕಲ್ಪನೆ ಕಟ್ಟಿಕೊಟ್ಟವರು ಕವಿ ಸರ್ವಜ್ಞರು ಎಂದು ಹೇಳಿದರು.

ಕರ್ನಾಟಕ ಕುಂಬಾರ ಮಹಿಳಾ  ಮಹಾಸಭಾ ಅಧ್ಯಕ್ಷೆ  ಎಸ್.ಬೈಲಮ್ಮ ಅವರು ಪ್ರತ್ಯೇಕ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಿ, ರೂ.200 ಕೋಟಿ ಅನುದಾನ ನೀಡಬೇಕು. ಪ್ರತಿಯೊಂದು ಹಳ್ಳಿಯಲ್ಲಿ ಕುಂಬಾರಿಕೆ ಪ್ರೋತ್ಸಾಯಿಸಲು ಮಣ್ಣು ಪರಿಷ್ಕರಣಾ ಘಟಕ, ಪ್ರತಿ ತಾಲ್ಲೂಕಿನಲ್ಲಿಯೂ ಕುಂಬಾರರ ಮಣ್ಣಿನ ಮಡಿಕೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಹಾಗೂ ಮಳಿಗೆಗಳನ್ನು ಸ್ಥಾಪಿಸುವುದು, ಪ್ರತಿಯೊಂದು ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಕುಡಿಯುವ ನೀರಿಗೆ ಮಣ್ಣಿನ ಮಡಿಕೆಗಳನ್ನು ಬಳಸುವಂತೆ ಆದೇಶಿಸುವುದು ಸೇರಿದಂತೆ ಕುಂಬಾರ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಯರ್ರಿಸ್ವಾಮಿ, ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ನಿರ್ದೇಶಕ ಕೆ.ಟಿ.ರಮೇಶ್, ಕರ್ನಾಟಕ ಕುಂಬಾರ ಮಹಿಳಾ  ಮಹಾಸಭಾದ ಕಾರ್ಯದರ್ಶಿ ಹೇಮಾವತಿ, ಜಿಲ್ಲಾ ಕುಂಬಾರ ಸಮಾಜ ಉಪಾಧ್ಯಕ್ಷ ಸುನಿಲ್ ಸೇರಿದಂತೆ ಕುಂಬಾರ ಸಮಾಜದ ಮುಖಂಡರು ಹಾಗೂ ಗಣ್ಯರು ಇದ್ದರು. ಜಗದೀಶ್ ಮತ್ತು ತಂಡ ಗೀತಗಾಯನ ನಡೆಸಿಕೊಟ್ಟರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment