Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಂಗಭೂಮಿ ಮಾನವ ಕುಲದ ಮೊದಲ ವಿಶ್ವವಿದ್ಯಾಲಯ : ಡಾ.ಬಸವಪ್ರಭು ಮಹಾಸ್ವಾಮೀಜಿ

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 14 : ರಂಗಭೂಮಿ ಮಾನವ ಕುಲದ ಮೊದಲ ವಿಶ್ವವಿದ್ಯಾಲಯ. ಸಾಂಸ್ಕøತಿಕ ಶ್ರೀಮಂತಿಕೆಯನ್ನು ಮೆರೆಸುವ ಉತ್ಕøಷ್ಠ ಮಾಧ್ಯಮ. ಪ್ರತಿಯೊಬ್ಬರಿಗೂ ಜೀವನದ ಪಾಠವನ್ನು ಕಲಿಸುವ ಶ್ರೇಷ್ಠತೆಯ ರಂಗಶಾಲೆ. ನಾಟಕ ಎನ್ನುವುದು ಕೇವಲ ಮನೋರಂಜನೆಯ ಉದ್ದೇಶ ಮಾತ್ರವಲ್ಲ, ಸಮಾಜಮುಖಿಯಾಗಿ ಸಮಾಜವನ್ನು ಎಚ್ಚರಿಸುತ್ತದೆ. ರಂಗಭೂಮಿ ಸಾಮಾನ್ಯರನ್ನೂ ಮಹಾತ್ಮರನ್ನಾಗಿಸುತ್ತದೆ. ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುವ ಪ್ರತಿಯೊಂದೂ ನಾಟಕಗಳು ಜ್ಞಾನದ ಬೆಳಕನ್ನು ನೀಡುವ ಜೊತೆಗೆ ಅಂಧಕಾರವನ್ನು ತೊಡೆದುಹಾಕುತ್ತವೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸುಂದರ ಸಮಾಜವನ್ನು ಕಟ್ಟುವ ಶಕ್ತಿ ರಂಗಭೂಮಿಗಿದೆ ಎಂದು ದಾವಣಗೆರೆ ಶಿವಯೋಗಿ ಆಶ್ರಮದ ಪರಮಪೂಜ್ಯ ಡಾ.ಬಸವಪ್ರಭು ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಪಿಳ್ಳೆಕೆರೇನಹಳ್ಳಿಯ ಬಾಪೂಜಿ ಸ್ಕೂಲ್ ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಂಗಸೌರಭ ಕಲಾ ಸಂಘ, ಬಾಪೂಜಿ ಸಮೂಹ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 13ರಂದು ಸಂಜೆ ಹಮ್ಮಿಕೊಳ್ಳಲಾಗಿದ್ದ ಶಿವಕುಮಾರ ಕಲಾ ಸಂಘದ ಶಿವಸಂಚಾರ ನಾಟಕೋತ್ಸವ-2026 ನಾಟಕಗಳ ಪ್ರದರ್ಶನ, ರಂಗಉಪನ್ಯಾಸ, ಗೀತೆಗಳ ಗಾಯನ ಹಾಗೂ ಕಲಾವಿದರಿಗೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 


ರಂಗಭೂಮಿಯು ಜನಮಾನಸದಲ್ಲಿ ನೆಲೆಯೂರಿದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹಾಗ್ರಂಥ ಮತ್ತು ದಿವೌಷಧ. ಮಾನಸಿಕ ಮತ್ತು ದೈಹಿಕವಾಗಿ ಸದೃಢತೆಯನ್ನು ಕಲ್ಪಿಸುತ್ತದೆ. ಅಮ್ಮನ ಕೈತುತ್ತಿನ ತಾಜಾ ಅಡುಗೆಗೆ ರಂಗಭೂಮಿ ಸಮಾನವಾಗಿದೆ. ನಾಟಕಗಳನ್ನು ನೇರವಾಗಿ ನೋಡಿ ಆನಂದಿಸುವ ಒಂದು ವಿಶಿಷ್ಠ ಅನುಭವ. ಅಕ್ಷರ ಕಲಿಸುವ ಶಾಲೆಗಳಿಗಿಂತ ಮುಂಚಿನಿಂದಲೂ ರಂಗಭೂಮಿ ಜನರಿಗೆ ಸುಜ್ಞಾನ ನೀಡಿದೆ. 5ಜಿ ಯುಗದಲ್ಲೂ ಜೀವಂತಿಕೆಯನ್ನು ಉಳಿಸಿಕೊಂಡ ರಂಗಭೂಮಿಯನ್ನು ಪೋಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಸರ್ಕಾರಿ ಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಹಿರಿಯ ಸಾಹಿತಿ ಡಾ.ಜೆ.ಕರಿಯಪ್ಪ ಮಾಳಿಗೆ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ರಾಷ್ಟ್ರಮಟ್ಟದ ರಂಗ ನಿರ್ದೇಶಕ ಕೃಷ್ಣಮೂರ್ತಿ ಮೂಡಬಾಗಿಲು ಇವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಕಳ್ಳರ ಸಂತೆ ನಾಟಕವನ್ನು ಕುರಿತು ಮಾತನಾಡಿದ ಅವರು 21ನೇ ಶತಮಾನ ಅತ್ಯಂತ ವೇಗವಾಗಿ ಸಾಗುತ್ತಿರುವ ಬಿಕ್ಕಟ್ಟಿನ ಕಾಲಘಟ್ಟವಾಗಿದೆ. ಮೌಲ್ಯಗಳು ಇಂದು ಅಪಮೌಲ್ಯಗಳಾಗುತ್ತಿವೆ. ಸತ್ಯ ಮತ್ತು ಸುಳ್ಳುಗಳ ಗೊಂದಲದಲ್ಲಿರುವ ಈ ದುರಿತಕಾಲದಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ. ವಿಶ್ವದ ಪ್ರಖರ ಮಾಧ್ಯಮ ರಂಗಭೂಮಿ. ಹೊಸ ರಂಗಪ್ರಯೋಗಗಳು ಯುವಕರನ್ನು ಆಕರ್ಷಿಸುತ್ತವೆ. ಸಾಧ್ಯವಾಗದ ಸಾಮಾಜಿಕ ಬದಲಾವಣೆಯನ್ನು ರಂಗಭೂಮಿಯಿಂದ ಮಾತ್ರ ಸಾಧಿಸಲು ಸಾಧ್ಯ. ಸಾಮಾಜಿಕ ಬದಲಾವಣೆಗೆ ರಂಗಭೂಮಿ ಪ್ರಮುಖ ಅಸ್ತ್ರ. ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸುವ ಶಕ್ತಿ ಹೊಂದಿದೆ.

 

 

ಕಳ್ಳ ಎಂಬ ಪದಕ್ಕೆ ಹಲವು ಅರ್ಥಗಳಿವೆ. ಹಣ, ಒಡವೆದೋಚುವ ದರೋಡೆ ಮಾತ್ರವಲ್ಲ ನಮ್ಮಲ್ಲಿ ಮಾತು, ಮೌಲ್ಯ, ನ್ಯಾಯ ಮತ್ತು ಸ್ನೇಹ ಹೀಗೆ ಹಲವು ಕಳ್ಳರಿದ್ದಾರೆ. ಸಮಾಜವು ಮಗುವನ್ನು ಛೀ ಕಳ್ಳ ಎಂದು ಲೇವಡಿ ಮಾಡುವುದೂ ಉಂಟು. ತಪ್ಪು ಮಾಡಿದಾಗ ಅದನ್ನು ಮುಚ್ಚಿಡಲು ಸುಳ್ಳಿನ ಮೊರೆ ಹೋಗಬೇಕಾಗುತ್ತದೆ. ಬಾಲ್ಯದಲ್ಲಿ ಬಿತ್ತಿದ ಕಳ್ಳತನದ ಪ್ರಜ್ಞೆ ಬೆಳೆಯುತ್ತಾ ಬದುಕಿನ ಇತರೆ ಮೌಲ್ಯಗಳ ಮೇಲೂ ಪ್ರಭಾವ ಬೀರುತ್ತದೆ. ಸತ್ಯಕ್ಕೆ ಹೇಳಿದ ಸಾಕ್ಷಿ ಸುಳ್ಳು ಹೇಳಿದರೆ ಬಾರದು. ರಂಗಭೂಮಿ ನೇರವಾಗಿ ಟೀಕಿಸುವುದಿಲ್ಲ ಬದಲಿಗೆ ವಿಡಂಬನೆ ಮತ್ತು ಹಾಸ್ಯದ ಮೂಲಕ ಸಮಾಜದ ಮುಖಕ್ಕೆ ಕನ್ನಡಿ ಹಿಡಿಯುತ್ತದೆ ಎಂದರು.

 

ಹಿರಿಯ ಸಾಹಿತಿ ಚಂದ್ರಶೇಖರ ತಾಳ್ಯ ಸಮಾರಂಭದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ರಂಗಕಲೆಯು ಪ್ರಭುತ್ವದ ವಿರುದ್ಧ ದನಿಯೆತ್ತುವಂತಿರಬೇಕು. ಮತ್ತು ಯಾವುದೇ ಕಾರಣಕ್ಕೂ ಪ್ರಭುತ್ವಕ್ಕೆ ತಲೆಬಾಗಬಾರದು. ಲೋಕದ ಡೊಂಕು ತಿದ್ದಲು ರೂಪಕ ಮತ್ತು ನಾಟಕಗಳಿಂದ ಮಾತ್ರ ಸಾಧ್ಯ. ರಂಗ ಮಾಧ್ಯಮ ಒಳನೋಟಗಳನ್ನು ಮತ್ತು ಸಂಸ್ಕøತಿಯ ಬೇರುಗಳಾಗಿ ಬೆಳೆದು ಬಂದಿದೆ. ವಚನ ಸಾಹಿತ್ಯವು ನಾಟಕಗಳಿಗೆ ಮತ್ತಷ್ಟು ಪ್ರೇರಣೆಯಾಗಿವೆ. ಇಪ್ಪತ್ತು ವರ್ಷಗಳಿಂದ ಶಿವಸಂಚಾರವು ನಾಟಕಗಳ ಮೂಲಕ ಸಮಾಜಕ್ಕೆ ಮೌಲ್ಯಯುತ ಸಂದೇಶಗಳನ್ನು ನೀಡುತ್ತಾ ಬಂದಿದೆ ಎಂದರು.

 

ಬಾಪೂಜಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಪತ್ರಕರ್ತ ರವಿ ಮಲ್ಲಾಪುರ, ನಗರಸಭೆಯ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಸ್ಕೌಟ್ ಅಂಡ್ ಗೈಡ್ ಕಾರ್ಯದರ್ಶಿ ಅನಂತರೆಡ್ಡಿ, ಗ್ರಾ.ಪಂ ಸದಸ್ಯೆ ಜ್ಯೋತಿ ದೇವೇಂದ್ರಪ್ಪ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಉಪಸ್ಥಿತರಿದ್ದು ಮಾತನಾಡಿದರು. ಸಾಹಿತಿ ಹುರುಳಿ ಬಸವರಾಜ್ ಸ್ವಾಗತಿಸಿದರು. ಗಾಯಕಿ ತ್ರಿವೇಣಿ ಮತ್ತು ತಂಡದವರು ಸುಗಮ ಸಂಗೀತ ನಡೆಸಿಕೊಟ್ಟರು. ಪ್ರಶಿಕ್ಷಣಾರ್ಥಿ ಕೆ.ಸಿ.ರೇಖಾ ಪ್ರಾರ್ಥಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಂಗಕರ್ಮಿ ಕೃಷ್ಣಮೂರ್ತಿ ಮೂಡಬಾಗಿಲು ಇವರ ರಚನೆ, ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕಳ್ಳರ ಸಂತೆ ನಾಟಕವನ್ನು ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಅಭಿನಯಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...