ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜೂ. 30 : ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲಾ ಹುಡುಕಿದರು, ಹಿತ್ತಲಗಿಡ ಮದ್ದಲ್ಲ ಹೀಗೆ ಅನೇಕ ಮಾತುಗಳಿಗೆ ಚಿತ್ರದುರ್ಗದ ನೆಲವನ್ನು ಸಾಕ್ಷಿಕರಿಸುತ್ತದೆ. ಈ ನೆಲದ ದಿಗ್ಗಜ ಸಾಹಿತಿ, ನಾಟಕಕಾರರು, ಬರಹಗಾರರನ್ನು ಸ್ಮರಿಸುವುದಕ್ಕಿಂತಲೂ ನೆರೆಹೊರೆಯ ಜನರನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಹೃದಯವಂತರು ಕೋಟೆನಾಡಿನ ಜನ. ನಮ್ಮ ನೆಲದ ಪ್ರತಿಭೆಗಳನ್ನು ಹೆಕ್ಕೆ ತೆಗೆಯುವಲ್ಲಿ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲವೆಂಬುದಕ್ಕೆ ನಮ್ಮೊಂದಿಗೆ ಸದಾ ಹೆಜ್ಜೆ ಹಾಕುವ ಕೆ.ಪಿ.ಓಂಕಾರಮೂರ್ತಿಯಲ್ಲಿ ಕಥೆಗಾರನಿದ್ದಾನೆಂಬುದನ್ನು ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪರಿಚಯಿಸಿಕೊಟ್ಟಿರುವುದು.
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚಿತ್ರದುರ್ಗದ ಪ್ರಜಾವಾಣಿ ಸಹಾಯಕ ವರದಿಗಾರ ಕೆ.ಪಿ.ಓಂಕಾರಮೂರ್ತಿ ಸುದ್ದಿಮನೆಯ ‘ಡೆಡ್‍ಲೈನ್’ ಒತ್ತಡವನ್ನೇ ಕಥೆಯಾಗಿಸಿ, ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಗೆದ್ದು ಮಧ್ಯಕರ್ನಾಟಕ ಪತ್ರಿಕಾ ಲೋಕದ ಚರ್ಚೆಯ ಕೇಂದ್ರಬಿಂದು ಆಗಿದ್ದಾರೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ಬೆಳ್ಳಿ ಮಹೋತ್ಸವದ ಅಂಗವಾಗಿ ಆಹ್ವಾನಿಸಲಾಗಿದ್ದ ರಾಜ್ಯಮಟ್ಟದ ಕಥೆ, ಕವನ ಸ್ಪರ್ಧೆಯಲ್ಲಿ ಅವರ ‘ಡೆಡ್‍ಲೈನ್’ ಕಥೆ ಪ್ರಥಮ ಸ್ಥಾನ ಪಡೆದು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿಗೆ ಪಾತ್ರವಾಗಿದೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಎನ್. ಗೌರಿಪುರದ ಮಣ್ಣಿನಲ್ಲಿ ಹುಟ್ಟಿ ಅಕ್ಷರದ ಬೆನ್ನತ್ತಿದ ಓಂಕಾರಮೂರ್ತಿ ಅವರ ಪತ್ರಿಕೋದ್ಯಮ ಪಯಣವೇ ಒಂದು ರೋಚಕ ಕಾದಂಬರಿ. ಚಿತ್ರದುರ್ಗದ ‘ಪ್ರಜಾಪ್ರಗತಿ’ಯಿಂದ ಪತ್ರಿಕಾ ಬದುಕು ಆರಂಭಿಸಿದ ಅವರು, ಚಿತ್ರದುರ್ಗ, ಬೆಂಗಳೂರಲ್ಲಿ ವಿಜಯವಾಣಿ, ಮೈಸೂರು, ದಾವಣಗೆರೆಯಲ್ಲಿ ವಿಜಯಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ಗಮನಸೆಳೆಯುವ ರೀತಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಚಿತ್ರದುರ್ಗದಲ್ಲಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ವರದಿಗಾರರಾಗಿ ಜನಮೆಚ್ಚಿದ ಬರಹಗಾರರಾಗಿದ್ದಾರೆ.
ವಿಜಯವಾಣಿಯ ಅಂಗಳದಲ್ಲಿ ಪಳಗಿ, ಮೈಸೂರು ಮತ್ತು ದಾವಣಗೆರೆಯ ವಿಜಯಕರ್ನಾಟಕದ ಪುಟಗಳಲ್ಲಿ ಅಕ್ಷರದ ಬೆಳೆ ತೆಗೆದು, ಈಗ ತಾಯಿ ಜಿಲ್ಲೆ ಚಿತ್ರದುರ್ಗಕ್ಕೆ ಮರಳಿ ಪ್ರಜಾವಾಣಿಯ ಮೂಲಕ ಜನಸಾಮಾನ್ಯರ ದನಿಯಾಗಿದ್ದಾರೆ. ಒಂದೇ ಜಿಲ್ಲೆಯಲ್ಲಿ ಮೂರು ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ದುಡಿದಿರುವುದು ವಿಶೇಷ.
ಪೂರ್ಣಚಂದ್ರ ತೇಜಸ್ವಿ ಅವರ ಕಾಡಿನ ಒಡಲು ಹೊಕ್ಕು ಬಂದಿರುವ ಓಂಕಾರಮೂರ್ತಿ, ವರದಿಗಾರಿಕೆಗೂ ಸಾಹಿತ್ಯದ ಸೊಬುಗು ತುಂಬಿದವರು. ಕರ್ವಾಲೊ ಮತ್ತು ಜುಗಾರಿ ಕ್ರಾಸ್ ಅವರ ಕೈಬಿಡದ ಸಂಗಾತಿಗಳು. ತೇಜಸ್ವಿ ಅವರಿಂದ ಪ್ರಭಾವಿತರಾಗಿರುವ ಅವರು, ನೇರ, ನಿಷ್ಠುರ ಮತ್ತು ಸರಳ ನಿರೂಪಣೆ ಮೂಲಕ ವರದಿ ಕಟ್ಟಿಕೊಡುವಲ್ಲಿ ಮುಂಚೂಣಿ. ಮಾನವೀಯತೆಯೇ ಅವರ ವರದಿಗಳ ಜೀವಾಳ. ಪತ್ರಿಕಾ ವೃತ್ತಿಯಲ್ಲಿ ಬಿಡುವು ಸಿಕ್ಕಾಗಲೆಲ್ಲ ಪುಸ್ತಕದೊಳಗೆ ಮುಳುಗುವ ಅವರನ್ನು ನೋಡಿದರೆ ನಡೆಯುವ ಗ್ರಂಥಾಲಯ ಎನಿಸುತ್ತದೆ. ನಿರಂತರ ಓದು ಮತ್ತು ಬರಹವೇ ಅವರನ್ನು ಸಾಹಿತ್ಯ ವಲಯದಲ್ಲಿ ಚಿರಪರಿಚಿತರನ್ನಾಗಿ ಮಾಡಿದೆ.
ಇದೀಗ ಪ್ರಶಸ್ತಿ ಗೆದ್ದ ‘ಡೆಡ್‍ಲೈನ್’ ಕಥೆ, ಸುದ್ದಿಮನೆಯೊಳಗಿನ ವರದಿಗಾರನ ಮಾನಸಿಕ ತುಮುಲ, ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷ, ಸಂಪಾದಕೀಯ ಒತ್ತಡಗಳ ನಡುವೆ ಸಿಕ್ಕಿಬಿದ್ದ ಪತ್ರಕರ್ತನ ಅಂತರಂಗದ ದನಿಯನ್ನು ದಾಖಲಿಸಿದೆ. ತೀರ್ಪುಗಾರರಾಗಿದ್ದ ಕಥೆಗಾರ ಮಹಾಂತೇಶ ನವಲಕಲ್ ಅವರು ವರದಿಗಾರಿಕೆಯ ಒಳಸುಳಿಗಳನ್ನು ಕಥೆಯಾಗಿಸಿರುವ ಪರಿ ಅನನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕವನ ವಿಭಾಗದಲ್ಲಿ ಮೈಸೂರಿನ ದಿ ಟೈಮ್ಸ್ ಆಫ್ ಇಂಡಿಯಾ ವರದಿಗಾರ ಎಂ.ಶ್ರೀನಿವಾಸ ಅವರ ಮುಸ್ಸಂಜೆಯ ಕವನ ಪ್ರಥಮ ಸ್ಥಾನ ಪಡೆದಿದೆ. ಆಗಸ್ಟ್ ಕೊನೆಯ ವಾರ ರಾಯಚೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಣೆಯಾಗಲಿದೆ. ಅಂದು ಓಂಕಾರಮೂರ್ತಿ ಅವರೊಂದಿಗೆ ಮೈಸೂರು, ಚಿತ್ರದುರ್ಗ, ದಾವಣಗೆರೆ, ಬೆಂಗಳೂರಿನ ಪತ್ರಕರ್ತರು ಜೊತೆಯಾಗಲಿದ್ದಾರೆ.
ವರದಿಗಾರಿಕೆ ಮತ್ತು ಸಾಹಿತ್ಯವನ್ನು ಎರಡು ಕಣ್ಣುಗಳಂತೆ ಕಾಣುವ ಓಂಕಾರಮೂರ್ತಿ, ಕೇವಲ ವರದಿಗಾರರಲ್ಲ. ಅಕ್ಷರದ ಮೂಲಕ ಸಮಾಜ ತಿದ್ದುವ ಕಾಯಕಯೋಗಿ ಆಗಿದ್ದಾರೆ. ಗೌರಿಪುರದ ಹಳ್ಳಿಯಿಂದ ಹೊರಟು ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಕಲಂ ವೀರನಿಗೆ ಚಿತ್ರದುರ್ಗ ಸೇರಿ ರಾಜ್ಯದ ವಿವಿಧೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಮಾನವೀಯ ವರದಿ :
ರಾಜ್ಯದ ಮನಕಲಕಿದ ಘಟನೆ ಎಂದರೆ ಚಿತ್ರದುರ್ಗದ ಚಳ್ಳಕೆರೆ ಗೇಟ್ ಸಮೀಪದಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರ ಪತ್ತೆ ಪ್ರಕರಣ. ಬರೀ ಅಪರಾಧ ವರದಿ ಬರೆಯದೆ, ಆ ಐದು ಜೀವಗಳ ಹಿಂದಿನ ಕಥೆಯನ್ನು ಕೆದಕಿ, ಸಾಮಾಜಿಕ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟ ರೀತಿ ಹಿರಿಯ ಪತ್ರಕರ್ತರನ್ನೇ ಗಮನಸಳೆದಿತ್ತು.
ಓಂಕಾರಮೂರ್ತಿ ಬರಹ ಓದಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ಫೇಸಬುಕ್, ವಾಟ್ಸ್ ಆಪ್‍ಗಳಲ್ಲಿ ಶೇರ್ ಮಾಡಿದ್ದು ಅವರ ವರದಿ ಗಟ್ಟಿತನಕ್ಕೆ ಸಾಕ್ಷಿ.
ಪತ್ರಿಕಾ ದಿನಕ್ಕೆ ಬೆಳಕು :
ದುರ್ಗದ ಓಂಕಾರಮೂರ್ತಿ ಅವರ ಕಥೆಗೆ ಸಂದಿರುವ ರಾಜ್ಯಮಟ್ಟದ ಪ್ರಶಸ್ತಿ ಇಡೀ ಕೋಟೆನಾಡಿನ ಪತ್ರಕರ್ತರಿಗೆ ಹೆಮ್ಮೆ, ಸಂಭ್ರಮ ತಂದಿದೆ. ಈಗಾಗಲೇ ನೂರಾರು ಸ್ನೇಹಿತರು, ಹಿರಿಯರು ಓಂಕಾರಮೂರ್ತಿ ಅವರನ್ನು ಅಭಿನಂದಿಸಿದ್ದು, ಶೀಘ್ರದಲ್ಲಿಯೇ ಅವರಿಗೆ ಗೌರವ ಸಮರ್ಪಣೆ ಸಲ್ಲಿಕೆ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ. ಜುಲೈ 1 ಪತ್ರಿಕಾ ದಿನಾಚರಣೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಘ ಸೇರಿ ವಿವಿಧ ಸಂಘಟನೆಗಳು ಹಮ್ಮಿಕೊಳ್ಳುವ ಸಮಾರಂಭದಲ್ಲಿ ಓಂಕಾರಮೂರ್ತಿ ಅವರನ್ನು ವಿಶೇಷವಾಗಿ ಸನ್ಮಾನಿಸುವ ಸಿದ್ಧತೆ ನಡೆದಿದೆ. ಇದು ನಮ್ಮೆಲ್ಲರ ಹೆಮ್ಮೆ.
ಚಿತ್ರರಂಗದತ್ತ ಆಸಕ್ತಿ :
ವಿಶೇಷ, ಮಾನವೀಯ ವರದಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕೆ.ಪಿ.ಓಂಕಾರಮೂರ್ತಿ, ಚಿತ್ರರಂಗದತ್ತ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ವೈವಿಧ್ಯಮಯ ಚಿತ್ರಗಳನ್ನು ಅಚ್ಚುಕಟ್ಟಾಗಿ ವಿಮರ್ಶೆ ಮಾಡುವ ಓಂಕಾರಮೂರ್ತಿ, ರಾಜ್ಯದ ಅನೇಕ ನಟರು, ಸಂಗೀತಗಾರರು, ನಿರ್ದೇಶಕರು, ಹಾಡುಗಾರರನ್ನು ಸಂದರ್ಶನ ಮಾಡಿದ್ದಾರೆ. ಒಮ್ಮೆ ಇವರ ವರದಿಯತ್ತ ಕಣ್ಣಾಯಿಸಿದರೆ ಪೂರ್ಣ ಓದಿಸಿಕೊಂಡು ಹೋಗುವ ರೀತಿ ಅಕ್ಷರ ರೂಪ ನೀಡುವಲ್ಲಿ ಓಂಕಾರಮೂರ್ತಿ ಮಾದರಿ ಪತ್ರಕರ್ತ ಎನ್ನಬಹುದು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














