ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಜಾತ್ರೆ ಪಟ್ಟಿ ಹಣ ನೀಡದ ಕಾರಣ ಏಳು ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸುವಂತೆ ತಹಸೀಲ್ದಾರ್ ಅನಿಲ ಬಡಿಗೇರ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಏಪ್ರಿಲ್ 2ರಂದು ಗ್ರಾಮದಲ್ಲಿ ಹನುಮಂತ ದೇವರ ಒಕುಳಿ ಜಾತ್ರೆ ನಡೆಯಿದ್ದು, ಇದಕ್ಕಾಗಿ ಪ್ರತಿ ಕುಟುಂಬದಿಂದ ₹600 ಪಟ್ಟಿ ಹಣ ಸಂಗ್ರಹಿಸಲಾಗಿತ್ತು. ಆದರೆ, ಏಳು ಕುಟುಂಬಗಳು ಈ ಹಣವನ್ನು ನೀಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದರಿಂದ ಏಪ್ರಿಲ್ 5ರಂದು ಗ್ರಾಮ ಹಿರಿಯರು ಸಭೆ ಸೇರಿ, ಆ ಕುಟುಂಬಗಳ ಮನೆಗಳಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಬಹಿಷ್ಕಾರ ಘೋಷಣೆ ಮಾಡಿರುವುದು ತಿಳಿದುಬಂದಿದೆ.

ಈ ಕ್ರಮವನ್ನು ಪ್ರಶ್ನಿಸಿ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಲ್ಲಪ್ಪ ಛಗನ್ನವರ ಅವರು ಜಮಖಂಡಿ ತಹಸೀಲ್ದಾರ್, ಸಹಾಯಕ ಆಯುಕ್ತ (ಎಸಿ) ಹಾಗೂ ಜಿಲ್ಲಾಧಿಕಾರಿ (ಡಿಸಿ) ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು.ಘಟನೆಯ ಹಿನ್ನೆಲೆ ತಿಳಿದು ತಾಲೂಕು ಮಟ್ಟದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಂಧಾನ ಸಭೆ ಏರ್ಪಡಿಸಿತ್ತು. ಆದರೆ, ದೂರುದಾರರು ಸಭೆಗೆ ಹಾಜರಾಗದ ಕಾರಣ ಸಭೆ ನಡೆಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಬಹಿಷ್ಕಾರಕ್ಕೊಳಗಾದ ಕುಟುಂಬದವರು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ, ಪ್ರಕರಣ ದಾಖಲಿಸುವಂತೆ ಅಧಿಕಾರಿಗಳು ಪೊಲೀಸರಿಗೆ ಸೂಚಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.



















