ಸುದ್ದಿಒನ್, ಚಿತ್ರದುರ್ಗ, ಜುಲೈ. 06 : ಅಕಾಲಿಕವಾಗಿ ದೂರವಾದರೂ ಇತರರ ಬಾಳಿಗೆ ಬೆಳಕಾಗುವ ಮತ್ತು ಜೀವ ನೀಡುವ ಉದಾತ್ತ ಕಾರ್ಯದ ಮೂಲಕ ಚಿತ್ರದುರ್ಗದ ಯುವಕನೊಬ್ಬನ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ.
ನಗರದ ಪ್ರಮುಖ ಮುಖಂಡರಾದ ಟೈಗರ್ ತಿಪ್ಪೇಸ್ವಾಮಿ ಅವರ ದ್ವಿತೀಯ ಪುತ್ರ ದಿವಂಗತ ರಾಣಾ ಪ್ರತಾಪ ಸಿಂಹ (ಪ್ರತ್ತು) ಅವರು ಕಳೆದ ಜೂನ್ 18ರಂದು ವಿಧಿವಶರಾಗಿದ್ದರು. ಆ ಸಂದರ್ಭದಲ್ಲೂ ಅವರ ನೇತ್ರದಾನ ಮಾಡುವ ಮೂಲಕ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಇದೀಗ ಅವರ ಪುಣ್ಯಸ್ಮರಣೆಯ ದಿನದಂದು ಮತ್ತೊಂದು ಮಾನವೀಯ ಕಾರ್ಯವನ್ನು ಕೈಗೊಳ್ಳಲಾಗಿದೆ.
ರಾಮಕೃಷ್ಣ ನಗರದಲ್ಲಿರುವ ಅವರ ಸ್ವಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿ ಭೋಜನದ ಕಾರ್ಯಕ್ರಮವನ್ನು ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಳಿಸದೆ, ಅರ್ಥಪೂರ್ಣ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ಈ ಶಿಬಿರದಲ್ಲಿ ಮೃತರ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಶಿಬಿರದಲ್ಲಿ ಒಟ್ಟು 21 ಯೂನಿಟ್ ರಕ್ತ ಸಂಗ್ರಹಣೆಯಾಗಿದ್ದು, ತುರ್ತು ಸಂದರ್ಭದಲ್ಲಿ ರಕ್ತ ಸಿಗದೆ ಪರದಾಡುವ ಬಡ ರೋಗಿಗಳ ಪ್ರಾಣ ಉಳಿಸಲು ಈ ರಕ್ತವನ್ನು ಬಳಸಿಕೊಳ್ಳಲಾಗುವುದು. ಅಗಲಿದ ಚೇತನದ ಆತ್ಮಕ್ಕೆ ವಿಶಿಷ್ಟ ಹಾಗೂ ಸಮಾಜಮುಖಿ ಕಾರ್ಯದ ಮೂಲಕ ಶಾಂತಿ ಕೋರಿದ ತಿಪ್ಪೇಸ್ವಾಮಿ ಅವರ ಕುಟುಂಬದ ಈ ನಿರ್ಧಾರಕ್ಕೆ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ನಗರದ ಗಣ್ಯರು ಅಪಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಟೈಗರ್ ತಿಪ್ಪೇಸ್ವಾಮಿ ಅವರ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








