ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 18 : ಬುದ್ದಿ ಮಾಂಧ್ಯರು, ವಿಕಲಚೇತನ ಮಕ್ಕಳನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಗಾಡ್ಸ್ ಸಂಸ್ಥೆ ಇಂತಹ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ ಎಂದು ಲೋಕಾಯುಕ್ತ ಡಿ.ವೈ.ಎಸ್ಪಿ. ಮೃತ್ಯುಂಜಯ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನಸಿಕ ರೋಗಿಗಳ ಹಗಲು ಪುನಶ್ಚೇತನ ಕೇಂದ್ರದಲ್ಲಿ ಗಾಡ್ಸ್ ಸಂಸ್ಥೆಯ 30 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಾಡ್ಸ್ ಸಂಸ್ಥೆಯ ಸೂರ್ಯನಾರಾಯಣರವರು ತಾಳ್ಮೆ ಸಮಾಧಾನದಿಂದ ಬುದ್ದಿ ಮಾಂಧ್ಯ ಮಕ್ಕಳ ಜೋಪಾನ ಮಾಡುವ ಪವಿತ್ರವಾದ ಕೆಲಸದಲ್ಲಿ ತೊಡಗಿದ್ದಾರೆ. ಸರ್ಕಾರ ಮತ್ತು ಸಮಾಜ ಇಂತಹ ಕಾರ್ಯಕ್ಕೆ ಕೈಜೋಡಿಸಿ ಸಹಕರಿಸಬೇಕು. ದೇಹದ ಎಲ್ಲಾ ಅಂಗಾಂಗಳು ಚೆನ್ನಾಗಿರುವವರೆ ಸಮಾಜಕ್ಕೆ ಹೆಚ್ಚು ತೊಂದರೆ ಕೊಡುವುದನ್ನು ನೋಡುತ್ತಿದ್ದೇವೆ. ಆದರೆ ಬುದ್ದಿ ಮಾಂಧ್ಯ ಹಾಗೂ ವಿಕಲಚೇತನರು ಯಾರಿಗೂ ಕಾಟ ಕೊಡುವುದಿಲ್ಲ ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸಣ್ಣಕ್ಕಿ ಮಾರುತಿ ಮಾತನಾಡಿ ಬುದ್ದಿ ಮಾಂಧ್ಯ ಮಕ್ಕಳ ರಕ್ಷಣೆಗೆ ಗಾಡ್ಸ್ ಸಂಸ್ಥೆ ಶ್ರಮಿಸುತ್ತಿರುವುದು ಪುಣ್ಯದ ಕೆಲಸ. ಒಂದು ಮನೆಯಲ್ಲಿ ಒಬ್ಬ ಬುದ್ದಿ ಮಾಂಧ್ಯನಿದ್ದರೆ ತಂದೆ-ತಾಯಿಗಳಿಗೆ ತಾಪತ್ರೆಯಾಗುತ್ತದೆ. ಜೋಪಾನ ಮಾಡುವುದು ಸವಾಲಿನ ಕೆಲಸ. ಆರೈಕೆ ಜೊತೆ ಯಾವುದಾದರೂ ತರಬೇತಿ ನೀಡಿದಾಗ ಬುದ್ದಿ ಮಾಂಧ್ಯರು ಸ್ವಾವಲಂಭಿಯಾಗಿ ಬದುಕಲು ನೆರವಾಗಲಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡುತ್ತ ಮಾನಸಿಕ ಅಸ್ವಸ್ಥರನ್ನು ಹಗಲು-ರಾತ್ರಿ ಸುರಕ್ಷಿತವಾಗಿ ನೋಡಿಕೊಳ್ಳುವುದು ತ್ರಾಸಿನ ಕೆಲಸ. ಮನೆಯಲ್ಲಿ ಪೋಷಕರುಗಳೇ ರೋಸಿ ಹೋಗುತ್ತಾರೆ. ವಿಕಲಚೇತನ ಮಕ್ಕಳಿಗೆ ಅನೇಕ ಕಂಪನಿಗಳು ಕೆಲಸ ಕೊಡುತ್ತಿವೆ. ಸ್ವಾವಲಂಭಿಯಾಗಿ ಬದುಕುವ ಆಸಕ್ತಿಯಿರಬೇಕೆಂದರು.
ರಾಮು ಮಾತನಾಡಿ ಗಾಡ್ಸ್ ಸಂಸ್ಥೆ 30 ವರ್ಷಗಳಿಂದಲೂ ವಿಕಲಚೇತನರು ಹಾಗು ಬುದ್ದಿ ಮಾಂಧ್ಯ ಮಕ್ಕಳನ್ನು ಸಲಹುತ್ತಿರುವುದು ಕಷ್ಟದ ಕೆಲಸ. ತಂದೆ ತಾಯಿಗಳಿಗೆ ಹೊರೆಯಾಗಿರುವ ಮಕ್ಕಳನ್ನು ಸಂರಕ್ಷಿಸುತ್ತಿರುವ ಗಾಡ್ಸ್ ಸಂಸ್ಥೆ ಇನ್ನು ದೊಡ್ಡ ಹೆಮ್ಮರವಾಗಿ ಬೆಳೆದು ಆಸರೆಯಾಗಲಿ ಎಂದು ಹಾರೈಸಿದರು.
ಗಾಡ್ಸ್ ಸಂಸ್ಥೆಯ ಮುಖ್ಯಸ್ಥರಾದ ಸೂರ್ಯನಾರಾಯಣ ವೇದಿಕೆಯಲ್ಲಿದ್ದರು. ಗಾಡ್ಸ್ ಸಂಸ್ಥೆ ಅಧ್ಯಕ್ಷೆ ಕವಿತ, ನ್ಯಾಯವಾದಿ ಮಾಧವಿ ಲತ ಹಾಗೂ ಸಿಬ್ಬಂದಿಯವರು ಈ ಸಂದರ್ಭದಲ್ಲಿ ಹಾಜರಿದ್ದರು.



