ಬಾಣಂತಿಯರ ಸಾವು ಪ್ರಕರಣ : ಸರ್ಕಾರದ ನಿರ್ಲಕ್ಷ್ಯ ದಿಂದ ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ : ಸಂಸದ ಗೋವಿಂದ ಎಂ.ಕಾರಜೋಳ

suddionenews
3 Min Read

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 03 : ಕೇಂದ್ರ ಸರ್ಕಾರದ ಪ್ರಬಲ ಇಚ್ಚಾಶಕ್ತಿಯ ನಡುವೆಯೂ, ಕೆಲವು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತೆಯಿಂದಾಗಿ, ಜನಪರ ಕಾಳಜಿ ಇಲ್ಲದೇ ಇರುವ ಕಾರಣದಿಂದಾಗಿ ಬಡಜನರು, ಕೂಲಿಕಾರ್ಮಿಕರು, ಸರ್ಕಾರಿ ಆಸ್ಪತ್ರೆಗಳಿಗೆ ಬರುವುದಕ್ಕೆ ಹಿಂದೇಟು ಹಾಕ್ತಾ ಇದಾರೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕದಲ್ಲಿ ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿವೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿರುವ ಲೋಕಸಭಾ ಅಧಿವೇಶದಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಬಾಣಂತಿಯರ ಸಾವುಗಳ ಕುರಿತು ಶೂನ್ಯ ವೇಳೆಯಲ್ಲಿ ಧ್ವನಿ ಎತ್ತಿದ್ದಾರೆ.

ಕರ್ನಾಟಕದಲ್ಲಿ ಕಳೆದ ನಾಲ್ಕೈದು ತಿಂಗಳಲ್ಲಿ 28 ಕ್ಕೂ ಹೆಚ್ಚು ಬಾಣಂತಿಯರ ಸಾವುಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸಿವೆ. ಅದರಲ್ಲೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನವೆಂಬರ್ ತಿಂಗಳೊಂದರಲ್ಲೇ 4 ಬಾಣಂತಿಯರು ಸಾವಿಗೀಡಾಗಿದ್ದಾರೆ. ಇದು ಕೇವಲ ದುರಂತ ಅಲ್ಲ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಘೋರ ನಿರ್ಲಕ್ಷ್ಯ ಮತ್ತು ಸಂಪೂರ್ಣ ಅದಕ್ಷತೆಯಿಂದಾಗಿ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ತನ್ನ ನಾಗರಿಕರ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸುವ ಮೂಲಭೂತ ಕರ್ತವ್ಯದಿಂದ ಕಾಂಗ್ರೆಸ್ ಸರ್ಕಾರ ಫಲಾಯನ ಮಾಡಿದೆ.

ಮೆಡಿಕಲ್ ಹಾಗೂ ಔಷಧ ಮಾಫಿಯಾಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಮಣಿದಿದೆ ಎಂದು ನಾನು ನೇರವಾಗಿ ಆರೋಪ ಮಾಡ್ತೀನಿ, ಇಲ್ಲದೇ ಇದ್ದರೆ, ಇವತ್ತು ಯಾವ Intra venous ದ್ರಾವಣದಿಂದ ಬಾಣಂತಿಯರ ಸಾವುಗಳು ಸಂಭವಿಸಿದೆ ಎಂದು ಹೇಳಲಾಗುತ್ತಿದೆಯೋ ಅದೇ ದ್ರಾವಣವನ್ನು ಬಳಕೆ ಮಾಡಬಾರದು ಎಂದು ಔಷಧಿ ನಿಯಂತ್ರಕರು ವರದಿ ನೀಡಿದಾಗ್ಯೂ ಕೂಡ ದ್ರಾವಣವನ್ನು ಸರಬರಾಜು ಮಾಡುವ ಮೂಲಕ ರಾಜ್ಯ ಸರ್ಕಾರ ಬಾಣಂತಿಯರ ಸಾವಿಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಈ ಔಷಧ ಕಂಪನಿಯ ಔಷಧವನ್ನು ತರಲು ಅನುಮತಿ ನೀಡಿದ್ದು ಹೇಗೆ ಎನ್ನುವ ಸತ್ಯ ರಾಜ್ಯದ ಜನರಿಗೆ ತಿಳಿಯಬೇಕಾಗಿದೆ. ಔಷಧ ಖರೀದಿ ಮೇಲೆ ಪ್ರಭಾವ ಬೀರುತ್ತಿರುವ ಮೆಡಿಕಲ್ ಹಾಗೂ ಔಷಧ ಮಾಫಿಯಾವನ್ನು ಸ್ವತ: ಮುಖ್ಯಮಂತ್ರಿಗಳೇ ಒಪ್ಪಿಕೊಂಡಿರುವುದು ಆಘಾತಕಾರಿಯಾದ ಸಂಗತಿಯಾಗಿದೆ. ಮೆಡಿಕಲ್ ಹಾಗೂ ಔಷಧ ಮಾಫಿಯಾವನ್ನು ಸಕ್ರಿಯಗೊಳಿಸುವವರು ಯಾರು ? ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರವನ್ನು ಅಂತಹ ನಿರ್ಣಾಯಕ ವಲಯದಲ್ಲಿ ನುಸುಳಲು ಅವಕಾಶ ಕಲ್ಪಿಸುವ ಮೂಲಕ ಜನರ ಜೀವಗಳನ್ನು ಅಪಾಯದಂಚಿಗೆ ತಳ್ಳಿದೆ.

ಈ ಸಾವುಗಳಿಗೆ ನೇರವಾಗಿ ರಾಜ್ಯ ಸರ್ಕಾರವನ್ನು ಹೊಣೆ ಮಾಡಬೇಕಾಗುತ್ತದೆ. ಈ ದ್ರಾವಣ ರಾಜ್ಯದ ಎಷ್ಟು ಜಿಲ್ಲೆಗಳಿಗೆ ಸರಬರಾಜಾಗಿದೆ, ಅಲ್ಲಿ ಎಷ್ಟು ಸಾವುಗಳು ಸಂಭವಿಸಿವೆ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕಾಗಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಎಸ್.ಐ.ಟಿ. ಗೆ ವಹಿಸುವ ಮೂಲಕ ಕೈತೊಳೆದುಕೊಂಡಿದೆ, ರಾಜ್ಯದ ಜನರಿಗೆ ಸತ್ಯಾ ಸತ್ಯತೆ ತಿಳಿಯಲು ಕೇಂದ್ರದ ಆರೋಗ್ಯ ಸಚಿವಾಲಯವೇ ಮದ್ಯಪ್ರವೇಶ ಮಾಡಿ ರಾಜ್ಯ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ ತನಿಖೆ ಮಾಡಿಸಲಿ.

ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸಿದರೆ, ಬಡಜನರು, ಕೂಲಿಕಾರ್ಮಿಕರು ಯಾವ ಭರವಸೆ ಇಟ್ಟುಕೊಂಡು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಆಸ್ಪತ್ರೆಗಳಿಗೆ ಬರುವ ತಾಯಿ-ಮಕ್ಕಳು ಸುರಕ್ಷಿತವಾಗಿ, ಆರೋಗ್ಯಭರಿತವಾಗಿ ಮನೆಗಳಿಗೆ ಮರಳುವಂತಾಗಬೇಕು. ಇಂತಹ ವಾತಾವರಣವನ್ನು ಕಲ್ಪಿಸುವ ಕೊಡುವುದು ಬದ್ದತೆಯಿರುವ ಪ್ರತಿಯೊಂದು ರಾಜ್ಯ ಸರ್ಕಾರದ ಕರ್ತವ್ಯವಾಗಬೇಕು ಮತ್ತು ಅದ್ಯತೆಯಾಗಬೇಕು. ಜನರಿಗೆ ಬಿಟ್ಟಿಭಾಗ್ಯಗಳ ಜೊತೆಗೆ ಉಚಿತ ಸಾವಿನ ಭಾಗ್ಯವೂ ಲಭಿಸದೇ ಇರಲಿ ಅನ್ನೋದು ನಮ್ಮ ಕಳಕಳಿಯಾಗಿದೆ.

ನಾನು ತಮ್ಮ ಮೂಲಕ ಮಾನ್ಯ ಆರೋಗ್ಯ ಸಚಿವರಲ್ಲಿ ವಿನಂತಿ ಮಾಡೋದೇನೆಂದರೆ, ದೇಶದಲ್ಲಿ ಮೆಡಿಕಲ್ ಹಾಗೂ ಔಷಧ ಮಾಫಿಯಾವನ್ನು ನಿಷ್ಕ್ರಿಯೆಗೊಳಿಸಬೇಕಾಗಿದೆ. ಜನರಿಗೆ ಜೀವ ಭದ್ರತೆಯ ಖಾತರಿ ನೀಡಬೇಕಾದ ಅವಶ್ಯಕತೆಯಿದೆ. ಜನರು ವಿಶ್ವಾಸವಿಟ್ಟು ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಸನ್ಮಾನ್ಯ ಆರೋಗ್ಯ ಸಚಿವರು ಮಾರ್ಗದರ್ಶನ ನೀಡುವ ಮೂಲಕ ಅಮೂಲ್ಯ ಜೀವಗಳನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *