ಸುದ್ದಿಒನ್, ಚಿತ್ರದುರ್ಗ, ಜುಲೈ. 30 : ಹಸಿರೇ ನಮ್ಮ ಉಸಿರು, ಕಾಡು ಬೆಳೆದರೆ ನಾಡು ಬೆಳೆಯುತ್ತದೆ ಎಂಬ ನಾಣ್ಣುಡಿಗಳಿವೆ, ಆದರೆ ದುಷ್ಕರ್ಮಿಗಳು ನೇರಳೆ ಮರಗಳನ್ನು ಕಡಿದು ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ನಗರದ ಜೋಗಿಮಟ್ಟಿ ರಸ್ತೆಯಲ್ಲಿ ಹಣ್ಣುಗಳನ್ನು ಬಿಡುತ್ತಿದ್ದ ಹಳೆಯ ದೊಡ್ಡ ನೇರಳೆ ಮರಗಳನ್ನು ಕಡಿದು ಹಾಕಿದ್ದಾರೆ.ಇದರಿಂದ ಪರಿಸರ ಹಾಗೂ ವನ್ಯ ಜೀವಿ ಸಂರಕ್ಷಣಾ ವೇದಿಕೆ, ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಮರಕಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲಿಸಲು ಆಗ್ರಹಿಸಿದರು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪ್ಯಾನಾಯ್ಕ ಅವರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಪ್ರಭುಶಂಕರ್ ಮತ್ತು ಸಿಬ್ಬಂದಿ ಗಳು ಆಗಮಿಸಿ ಮಹಜರು ಮಾಡಿದರು.

ಇದೇ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಮಾಲತೇಶ್ ಅರಸ್ , ಜೋಗಿಮಟ್ಟಿ ಗೆಳೆಯರ ಬಳದ ಮಾರ್ಗದರ್ಶಕ ರಾಜಣ್ಣ , ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಘವೇಂದ್ರ, ಕಾರ್ಯದರ್ಶಿ ಮಂಜುನಾಥ್ , ರವಿಬಡಗಿ, ಸ್ನೇಕ್ ಚೇತನ್ ಇತರರು ಇದ್ದರು.









