ಚಿತ್ರದುರ್ಗ : ಗುರುಪರಂಪರೆ ದೇಶ ಭಾರತದಲ್ಲಿ ಶಿಕ್ಷಕರುಗಳಿಗೆ ಉನ್ನತ ಸ್ಥಾನಮಾನವಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿಖಾಯ ಮುಖ್ಯಸ್ಥ ಡಾ.ವೆಂಕಟೇಶ್ ಕೆ. ಹೇಳಿದರು.
ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮ ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ. ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಿ.ಇಡಿ. ಶಿಕ್ಷಣ ತರಬೇತಿ ಪಡೆದರೆ ಸ್ವಂತ ಕಾಲ ಮೇಲೆ ನಿಂತು ಸ್ವಾವಲಂಭಿಗಳಾಗಿ ಬದುಕಬಹುದು. ಬಿ.ಇಡಿ.ಗೆ ತನ್ನದೆ ಆದ ಶಕ್ತಿಯಿದೆ. ಚಾಕಚಕ್ಯತೆ, ಕೌಶಲ್ಯತೆ, ಆತ್ಮವಿಶ್ವಾಸ ಮೂಡಿಸುವ ಕೋರ್ಸ್ ಇದಾಗಿರುವುದರಿಂದ ಸಕಾರಾತ್ಮಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಬಿ.ಇಡಿ.ಎಂದರೆ ಸೈಕಾಲಜಿ ಎನ್ನುವುದು ನೆನಪಿಗೆ ಬರುತ್ತದೆ. ಸ್ಪರ್ಧಾತ್ಮಕ ಹಾಗೂ ಸಿ.ಇ.ಟಿ.ಪರೀಕ್ಷೆಗಳನ್ನು ಎದುರಿಸಬೇಕಾಗಿರುವುದರಿಂದ ಪ್ರೋತ್ಸಾಹಿಸುವವರು ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಬಿಜಾಪುರ ವನಶ್ರೀಮಠದ ಪೀಠಾಧ್ಯಕ್ಷ ಬಸವಕುಮಾರ ಮಹಾಸ್ವಾಮೀಜಿ ಮಾತನಾಡುತ್ತ ನೂರು ಪುಸ್ತಕ ಓದುವುದು ಒಂದು ಒಳ್ಳೆಯ ಮಾತು ಕೇಳುವುದಕ್ಕೆ ಸಮ. ಇದರಿಂದ ಶ್ರಮ ಮತ್ತು ಸಮಯ ಉಳಿಯುತ್ತದೆ. ಮಾತು ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು.
ಅದಕ್ಕೆ ಬದಲಾಗಿ ಮನಸ್ಸನ್ನು ಅರಳಿಸುವಂತಿರಬೇಕು. ಮನುಷ್ಯರನ್ನು ಕಟ್ಟುವುದೇ ಕಲಾ ಮತ್ತು ಬಿ.ಇಡಿ.ವಿಭಾಗ. ಯಾವ ಕ್ಷೇತ್ರದಲ್ಲಿದ್ದೇವೆನ್ನುವುದಕ್ಕಿಂತ ಎಷ್ಟು ಕ್ರಿಯಾಶೀಲವಾಗಿದ್ದೇವೆನ್ನುವುದು ಮುಖ್ಯ. ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದೆ ಎಂದು ಬಿ.ಇಡಿ.ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಒಳ್ಳೆ ಹವ್ಯಾಸ, ಅಭಿರುಚಿಯಲ್ಲಿ ತೊಡಗಿಕೊಳ್ಳಬೇಕು. ಕೃತಜ್ಞತೆಗಿಂತ ಮಧುರವಾದುದು ಜೀವನದಲ್ಲಿ ಬೇರೆ ಯಾವುದೂ ಇಲ್ಲ. ಸದೃಢ ದೇಶ ಕಟ್ಟುವ ಶಕ್ತಿ ಶಿಕ್ಷಕರುಗಳಲ್ಲಿದೆ. ಯಾವುದೇ ರಂಗದಲ್ಲಿರಿ ಮಸಸ್ಪೂರ್ವಕವಾಗಿ ಕೆಲಸ ಮಾಡಿ. ಪ್ರತಿಭಾವಂತರು, ಒಳ್ಳೆಯವರು, ಶ್ರಮಜೀವಿಗಳು ಸಾಕಷ್ಟು ಇದ್ದಾರೆ. ಆದರೆ ಕಣ್ಣಿಗೆ ಕಾಣುವುದಿಲ್ಲ. ಸ್ವಾರ್ಥ ಪ್ರಪಂಚದಲ್ಲಿ ಯಾರೂ ಮುಳುಗಬಾರದು. ನಾಲ್ಕು ಜನರಿಗೆ ಕ್ರಿಯಾಶೀಲವಾಗಿರಬೇಕೆಂದು ಆಲೋಚನೆ ಮಾಡುವುದೇ ನಿಜವಾದ ಶಿಕ್ಷಣ. ಸಮ ಸಮಾಜ ನಿರ್ಮಿಸಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕಿಂತ ದೊಡ್ಡ ಸಾಧನೆ ಬೇರೆಯಿಲ್ಲ ಎಂದು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ರಂಗ ಪ್ರಶಸ್ತಿ ಪುರಸ್ಕøತ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಜಂಬುನಾಥ ಕೆ. ಮಾತನಾಡಿ ಬಿ.ಇಡಿ. ಎಂದರೆ ಶಿಕ್ಷಣದ ತರಬೇತಿ. ಶಿಕ್ಷಣವನ್ನು ಹೇಗೆ ಯಾವ ರೀತಿ ಎಷ್ಟು ಕೊಡಬೇಕು ಎನ್ನುವುದೇ ಬಿ.ಇಡಿ.ಉದ್ದೇಶ. ತರಬೇತಿಯನ್ನು ಮುಗಿಸಿಕೊಂಡು ಹೋದ ಮೇಲೆ ಗಟ್ಟಿ, ದಿಟ್ಟ ವೃತ್ತಿಯನ್ನಾಗಿಸಿಕೊಂಡು ಪವಿತ್ರವಾದ ಶಿಕ್ಷಕ ವೃತ್ತಿಯ ಘನತೆಯನ್ನು ಕಾಪಾಡಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಬಿ.ಇಡಿ.ತರಬೇತಿ ಮುಗಿಸಿಕೊಂಡು ಹೋಗುವವರು ಆದರ್ಶ ಶಿಕ್ಷಕ/ಶಿಕ್ಷಕಿಯಾಗಬೇಕೆಂಬ ಪಣ ತೊಡಬೇಕು. ಆಗ ಮಾತ್ರ ನಿಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯಲು ಸಾಧ್ಯ. ತಂತ್ರಜ್ಞಾನ ಮುಂದುವರೆದಿದೆ. ಹಳೆ ಶಿಕ್ಷಣ ಪದ್ದತಿಯನ್ನೆ ಅವಲಂಭಿಸುವ ಬದಲು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ, ಬಾಪೂಜಿ ದೂರಶಿಕ್ಷಣ ಸಂಯೋಜನಾಧಿಕಾರಿ ಪ್ರೊ.ಎ.ಎಂ.ರುದ್ರಪ್ಪ, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ.ಪ್ರಭುದೇವ್ ವೇದಿಕೆಯಲ್ಲಿದ್ದರು.
2019-2021 ಸಾಲಿನ ಬಿ.ಇಡಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ತಸ್ಮಿಯಭಾನು, ರಮ್ಯ, ಸುಷ್ಮ, ತನ್‍ಹಾಜ್ ಇವರುಗಳನ್ನು ಅಭಿನಂದಿಸಲಾಯಿತು.