ಸುದ್ದಿಒನ್, ಚಿತ್ರದುರ್ಗ, ಮೇ. 17 : ಜಲಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸುದ್ದಿಒನ್ ಹಮ್ಮಿಕೊಂಡಿರುವ ‘ನೀರು ಉಳಿಸಿ’ ಅಭಿಯಾನಕ್ಕೆ ಚಿತ್ರದುರ್ಗದ ಜಿಯೋ ರೈನ್ ವಾಟರ್ ಬೋರ್ಡ್ ಸಂಸ್ಥೆಯ ಮುಖ್ಯಸ್ಥ ಹಾಗೂ ಖ್ಯಾತ ಜಲತಜ್ಞ ಎನ್.ಜೆ. ದೇವರಾಜ ರೆಡ್ಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಳೆನೀರು ಕೊಯ್ಲನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿರುವ ಅವರು, “ಜಲಕ್ಷಾಮಕ್ಕೆ ಮಳೆನೀರು ಕೊಯ್ಲೇ ಶಾಶ್ವತ ಪರಿಹಾರ” ಎಂದು ಅಭಿಪ್ರಾಯಪಟ್ಟರು.

“ಪಾತಾಳ ಗಂಗೆಯ ಹುಡುಕಾಟದ ಸ್ಥಿತಿಗೆ ಬಂದಿದ್ದೇವೆ”
ಇಂದಿನ ಜಲ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ದೇವರಾಜ ರೆಡ್ಡಿ, “ಒಂದು ಕಾಲದಲ್ಲಿ ತೆರೆದ ಬಾವಿಗಳು ನೀರಿನಿಂದ ತುಂಬಿರುತ್ತಿದವು. ನಂತರ ಕೊಳವೆ ಬಾವಿಗಳ ಯುಗ ಬಂತು. ಈಗ ಬತ್ತಿಹೋದ ಬೋರ್ವೆಲ್ಗಳೇ ಕಾಣಿಸುತ್ತಿವೆ. ನಾವು ಪಾತಾಳ ಗಂಗೆಯನ್ನು ಹುಡುಕುವ ಪರಿಸ್ಥಿತಿಗೆ ತಲುಪಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಹವಾಮಾನ ವೈಪರೀತ್ಯದಿಂದ ಮಳೆಯ ದಿನಗಳು ಕಡಿಮೆಯಾಗುತ್ತಿದ್ದು, ಅಲ್ಪ ಅವಧಿಯಲ್ಲಿ ಅತಿಯಾದ ಮಳೆಯಾಗುತ್ತಿದೆ. “ಹಿಂದೆ ವರ್ಷಕ್ಕೆ 50 ರಿಂದ 60 ದಿನ ಮಳೆಯಾಗುತ್ತಿತ್ತು. ಈಗ ಅರ್ಧ ಗಂಟೆಯಲ್ಲೇ 100 ಮಿ.ಮೀ ಮಳೆಯಾಗುತ್ತಿದೆ. ಈ ನೀರನ್ನು ಸಂಗ್ರಹಿಸದಿದ್ದರೆ ಅದು ವ್ಯರ್ಥವಾಗಿ ಹರಿದುಹೋಗುತ್ತದೆ” ಎಂದು ಎಚ್ಚರಿಸಿದರು.
ನೀರಿನ ಗುಣಮಟ್ಟಕ್ಕೆ ತಕ್ಕ ಬಳಕೆ ಅಗತ್ಯ. ತಮ್ಮ ಚಿತ್ರದುರ್ಗದ ವಿದ್ಯಾನಗರ ನಿವಾಸದಲ್ಲೇ ಮಳೆನೀರು, ಭದ್ರಾ ನೀರು ಹಾಗೂ ಬೋರ್ವೆಲ್ ನೀರನ್ನು ಪ್ರತ್ಯೇಕವಾಗಿ ಬಳಸುತ್ತಿರುವುದಾಗಿ ತಿಳಿಸಿದ ಅವರು, ಮಳೆನೀರಿನ TDS ಮಟ್ಟ ಕೇವಲ 34 PPM ಇದ್ದು ಕುಡಿಯಲು ಅತ್ಯುತ್ತಮವಾಗಿದೆ ಎಂದು ಹೇಳಿದರು. 150 PPM ಮಟ್ಟದ ಭದ್ರಾ ನೀರನ್ನು ಗೃಹಬಳಕೆಗೆ ಹಾಗೂ 1050 PPM ಮಟ್ಟದ ಕಠಿಣ ಬೋರ್ವೆಲ್ ನೀರನ್ನು ಶೌಚಾಲಯ ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
“ನೀರಿನ ಗುಣಮಟ್ಟಕ್ಕೆ ಅನುಗುಣವಾಗಿ ಅದನ್ನು ಬಳಕೆ ಮಾಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ನೀರೇ ಆರೋಗ್ಯದ ಮೂಲ” ಎಂದು ಅವರು ತಿಳಿಸಿದರು.
“ಒಂದು ಎಕರೆಯಲ್ಲಿ 20 ಲಕ್ಷ ಲೀಟರ್ ನೀರು ಸಂಗ್ರಹ ಸಾಧ್ಯ”
ಚಿತ್ರದುರ್ಗದಂತಹ ಕಡಿಮೆ ಮಳೆಯ ಪ್ರದೇಶದಲ್ಲಿಯೂ ಮಳೆನೀರು ಕೊಯ್ಲಿಗೆ ಅಪಾರ ಅವಕಾಶವಿದೆ ಎಂದು ವಿವರಿಸಿದ ಅವರು, “ಮೊಳಕಾಲ್ಮೂರಿನಂತಹ ಪ್ರದೇಶದಲ್ಲೂ ಒಂದು ಎಕರೆ ಜಾಗದಲ್ಲಿ ವರ್ಷಕ್ಕೆ ಸುಮಾರು 20 ಲಕ್ಷ ಲೀಟರ್ ಮಳೆನೀರು ಸಂಗ್ರಹಿಸಬಹುದು” ಎಂದರು.“5 ಎಕರೆ ಜಮೀನಿನಲ್ಲಿ ವರ್ಷಕ್ಕೆ ಸುಮಾರು 1 ಕೋಟಿ ಲೀಟರ್ ಮಳೆ ಬೀಳುತ್ತದೆ. ರೈತರು ಕೃಷಿ ಹೊಂಡ ನಿರ್ಮಿಸಿ ನೀರು ಸಂರಕ್ಷಿಸಬೇಕು. ಮನೆಗಳ ಮೇಲ್ಚಾವಣಿ ನೀರನ್ನು ಕೂಡ ವ್ಯರ್ಥ ಮಾಡದೆ ಅಂತರ್ಜಲಕ್ಕೆ ಇಳಿಸಬೇಕು” ಎಂದು ಸಲಹೆ ನೀಡಿದರು.
“ಓಡುವ ನೀರನ್ನು ನಡೆಯುವಂತೆ ಮಾಡಿ”
“ಓಡುವ ನೀರು ನಡೆಯುವಂತೆ ಮಾಡಬೇಕು, ನಡೆಯುವ ನೀರು ನಿಲ್ಲುವಂತೆ ಮಾಡಬೇಕು, ನಿಂತ ನೀರನ್ನು ಭೂಮಿಗೆ ಇಂಗಿಸಬೇಕು” ಎಂಬ ಜಲಸೂತ್ರವನ್ನು ನೆನಪಿಸಿದ ದೇವರಾಜ ರೆಡ್ಡಿ, “ಭವಿಷ್ಯದಲ್ಲಿ ಯುದ್ಧಗಳು ನಡೆದರೆ ಅದು ನೀರಿಗಾಗಿ ಮಾತ್ರ” ಎಂದು ಎಚ್ಚರಿಸಿದರು.
ಪ್ರತಿಯೊಬ್ಬರೂ ಸುದ್ದಿಒನ್ ‘ನೀರು ಉಳಿಸಿ ’ ಅಭಿಯಾನದಲ್ಲಿ ಭಾಗವಹಿಸಿ, ಜಲ ಸಂರಕ್ಷಣೆಯನ್ನು ಜನಾಂದೋಲನವಾಗಿಸಬೇಕು ಎಂದು ಅವರು ಕರೆ ನೀಡಿದರು.

















