ಸುದ್ದಿಒನ್, ಚಿತ್ರದುರ್ಗ, ಜೂನ್. 22 : ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ನಂಜನಗೂಡು – ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಅಧುನಾಪೀಠ ವಿರಾಜಮಾನರಾದ ಪರಮಪೂಜ್ಯ ಶ್ರೀಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಮಹಾಸ್ವಾಮಿಗಳವರ ಕೃಪಾಶೀರ್ವಾದಗಳಿಂದ ಚಿತ್ರದುರ್ಗದಲ್ಲಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯಾರ್ಪಣ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಚಿತ್ರದುರ್ಗದ (ಆನೆಬಾಗಿಲು ಹತ್ತಿರ, ಚಿಕ್ಕಪೇಟೆ) ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ, ಮಠದ ವ್ಯವಸ್ಥಾಪಕರು, ಗೌರವ ವಿಚಾರಣಾಕರ್ತರ ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶ್ವ ಸಂಗೀತ ದಿನ ಹಾಗೂ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಚಿತ್ರದುರ್ಗದ ಲಾಸಿಕಾ ಫೌಂಡೇಶನ್ (ರಿ.) ವತಿಯಿಂದ 21 ಜೂನ್ 2026ರ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ `ನೃತ್ಯಾರ್ಪಣ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರು ಗಣೇಶ ಸ್ತುತಿ, ಲಕ್ಷ್ಮೀನರಸಿಂಹ ಸ್ತುತಿ, ಕೂಚಿಪುಡಿ, ಹನುಮಾನ್ ಚಾಲೀಸಾ, ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ ಹಾಗೂ ‘ಹರಿಕುಣಿದ’ ನೃತ್ಯಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರರಾದರು. ವೈವಿಧ್ಯಮಯ ನೃತ್ಯಗಳ ಮೂಲಕ ಭಾರತೀಯ ಸಂಸ್ಕೃತಿ, ಭಕ್ತಿ ಹಾಗೂ ಕಲೆಯ ವೈಭವವನ್ನು ಅಚ್ಚುಕಟ್ಟಾಗಿ ಅನಾವರಣಗೊಳಿಸಲಾಯಿತು.
ಶ್ರೀ ಗುರುರಾಯರ ಮಹದನುಗ್ರಹದೊಂದಿಗೆ ವಿಶ್ವ ಸಂಗೀತದಿನ ಮತ್ತು ಅಂತರರಾಷ್ಟ್ರೀಯ ಯೋಗ ದಿನದ ಮಹತ್ವವನ್ನು ಸ್ಮರಿಸುತ್ತಾ, ಸಂಗೀತ, ನೃತ್ಯ ಹಾಗೂ ಯೋಗವು ಕೇವಲ ಕಲೆಯಲ್ಲ, ಬದಲಿಗೆ ಅವು ಅಧ್ಯಾತ್ಮದ ಮಹತ್ವವನ್ನು ಹೊಂದಿವೆ. ಅದರ ಜೊತೆಜೊತೆಗೆ ವ್ಯಕ್ತಿತ್ವ ವಿಕಸನ ಮತ್ತು ಸಾತ್ವಿಕ ಆರೋಗ್ಯಕರ ಜೀವನಕ್ಕೆ ಇವು ಪೂರಕವಾಗಿವೆ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಲಾಯಿತು.
ಸಾಂಸ್ಕೃತಿಕ ಸಂಭ್ರಮದ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಗೌರವ ವಿಚಾರಣಾಕರ್ತರು, ಸಿಬ್ಬಂದಿಗಳು, ಶ್ರೀಮಠದ ಸ್ವಯಂಸೇವಕರು, ಶ್ರೀ ಗುರುರಾಯರ ಭಕ್ತರು, ಕಲಾಭಿಮಾನಿಗಳು ಹಾಗೂ ಕಲಾವಿದರ ಪೋಷಕರು ಉಪಸ್ಥಿತರಿದ್ದರು. ಅಲ್ಲದೆ, ಲಾಸಿಕಾ ಫೌಂಡೇಶನ್’ನ ಕಲಾಗುರುಗಳಾದ ವಿದುಷಿ ಶ್ರೀಮತಿ ಶ್ವೇತಾ ಭಟ್ ರವರು, ಫೌಂಡೇಶನ್’ನ ಪದಾಧಿಕಾರಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಮುಕ್ತಕಂಠದಿಂದ ಅಭಿನಂದಿಸಿದರು.
ಶ್ರೀಮಠದ ಪರವಾಗಿ ಗೌರವ ವಿಚಾರಣಾಕರ್ತರಾದ ಶ್ರೀ ಗೋವಿಂದಮೂರ್ತಿ ಆಚಾರ್ಯರು ಕಲಾವಿದರ ಕಲಾ ಸೇವೆಯನ್ನು ಮನಸಾರೆ ಪ್ರಶಂಸಿಸಿ, ಅಭಿನಂದಿಸಿದರು. ಎಲ್ಲಾ ಕಲಾವಿದರಿಗೂ ಹಾಗೂ ಲಾಸಿಕಾ ಫೌಂಡೇಶನ್ ಕಲಾ ಶಾಲೆಗೂ ಶ್ರೀಗುರುರಾಯರ ಪೂರ್ಣ ಅನುಗ್ರಹವನ್ನು ಕೋರಿದ ಅವರು, ಶ್ರೀಮಠದ ವತಿಯಿಂದ ಪ್ರಸಾದರೂಪವಾದ ಫಲ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












