ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : ನಗರದ ವನ್ಯಜೀವಿ ಛಾಯಾಗ್ರಾಹಕ ಹಾಗೂ ಪ್ರಕೃತಿ ತಜ್ಞ ಕಾರ್ತಿಕ್ ಎಂ. ಅವರ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ತಿಮ್ಮಣ್ಣನಾಯಕನ ಕೆರೆ ಮತ್ತು ಚೌಡಮ್ಮನ ಕೆರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಂಗ್ಸ್ ಆಫ್ ದಿ ಫೋರ್ಟ್ ಸಿಟಿ” (Wings of the Fort City) ಪಕ್ಷಿ ವೀಕ್ಷಣೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಈ ಕಾರ್ಯಕ್ರಮದಲ್ಲಿ ಒಟ್ಟು 16 ಪಕ್ಷಿ ಪ್ರೇಮಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ 10 ನಿಮಿಷಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಧ್ಯಾನವು ಭಾಗವಹಿಸಿದವರಲ್ಲಿ ಪ್ರಕೃತಿಯತ್ತ ಗಮನಹರಿಸಲು ಪೂರಕವಾಗಿತ್ತು. ಬಳಿಕ ನಡೆದ ಪಕ್ಷಿ ವೀಕ್ಷಣೆಯಲ್ಲಿ ಒಟ್ಟು 34 ಪ್ರಭೇದದ ಪಕ್ಷಿಗಳು ದಾಖಲಾಗಿವೆ.
ಅಪರೂಪದ ಪಕ್ಷಿಗಳ ದರ್ಶನ:
ಚೌಡಮ್ಮನ ಕೆರೆಯ ಭಾಗದಲ್ಲಿ ಆ ಭಾಗಕ್ಕೆ ಅಪರೂಪವೆನ್ನಬಹುದಾದ Painted Stork, Black-headed Ibis, Spot-billed Ducks ಸೇರಿದಂತೆ ಹಲವಾರು ಜಲಚರ ಪಕ್ಷಿಗಳು ಕಂಡುಬಂದವು. ಇನ್ನು ತಿಮ್ಮಣ್ಣನಾಯಕನ ಕೆರೆಯ ಹಾದಿಯಲ್ಲಿ Asian Paradise Flycatcher, Flameback Woodpecker (pair), Grey Hornbill, Indian Robin ಮತ್ತು Purple Sunbird ನಂತಹ ಆಕರ್ಷಕ ಪಕ್ಷಿಗಳು ಪಕ್ಷಿ ವೀಕ್ಷಕರ ಗಮನ ಸೆಳೆದವು. ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಪಕ್ಷಿಯ ಬಣ್ಣ ಬದಲಿಸುವ (Morphing) ಪ್ರಕ್ರಿಯೆಯ ಬಗ್ಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು.
ಮೊಸಳೆ ಮತ್ತು ಸರಿಸೃಪಗಳ ಬಗ್ಗೆ ಜಾಗೃತಿ:
ಪಕ್ಷಿ ವೀಕ್ಷಣೆಯ ವೇಳೆ ಶ್ರೀ ರಾಮದೇವರ ಒಡ್ಡು ಬಳಿ Marsh Crocodile (ಮೊಸಳೆ) ಕಂಡುಬಂದಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಮೊಸಳೆಗಳ ಜೀವನಶೈಲಿ ಹಾಗೂ ಭಾರತದಲ್ಲಿರುವ ಮೂರು ಪ್ರಭೇದದ ಮೊಸಳೆಗಳ ಬಗ್ಗೆ ಕಾರ್ತಿಕ್ ಅವರು ಮಾಹಿತಿ ನೀಡಿದರು. ಅಲ್ಲದೆ, ಹಾವು ಮತ್ತು ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಭಾರತದ ಪ್ರಮುಖ ನಾಲ್ಕು ವಿಷಪೂರಿತ ಹಾವುಗಳ (Big Four Snakes) ಗುರುತಿಸುವಿಕೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಲಾಯಿತು.


















