ಸುದ್ದಿಒನ್, ಚಿತ್ರದುರ್ಗ, ಮೇ. 19 : ಇಂದಿನ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ವಿದ್ಯಾರ್ಥಿನಿಯರು ಕೇವಲ ಅಂಕಗಳಿಗೆ ಸೀಮಿತವಾಗದೆ, ನಿರಂತರ ಕಲಿಕಾಸಕ್ತಿ ಹಾಗೂ ಬದುಕನ್ನು ಯಶಸ್ವಿಯಾಗಿ ಕಟ್ಟಿಕೊಳ್ಳುವ ಉನ್ನತ ಕನಸುಗಳನ್ನು ಹೊಂದಿರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗೌರಮ್ಮ ಜಿ.ಆರ್. ಅವರು ಕರೆ ನೀಡಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐ.ಕ್ಯೂ.ಎ.ಸಿ. (IQAC) ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ನೆನಪಿನಂಗಳ – 2026’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪದವಿ ಮುಗಿಸಿ ಹೊರಹೋಗುತ್ತಿರುವ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಅವರು, “ಪದವಿ ಮುಗಿಯಿತು ಎಂದರೆ ಕಲಿಕೆ ಮುಗಿಯಿತು ಎಂದರ್ಥವಲ್ಲ. ನಿಜವಾದ ಸವಾಲುಗಳು ಇನ್ನುಮುಂದೆ ಆರಂಭವಾಗುತ್ತವೆ. ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ತಾವೂ ಗುರುತಿಸಿಕೊಳ್ಳಬೇಕಾದರೆ ಕಾಲೇಜು ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಬೇಕಾದ ತುರ್ತು ಅಗತ್ಯವಿದೆ. ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮಾಜದಲ್ಲಿ ಸಬಲೀಕರಣ ಸಾಧ್ಯ,” ಎಂದರು.
ಪ್ರಶ್ನಿಸುವ ಮನೋಭಾವ ಮತ್ತು ವೈಚಾರಿಕತೆ ಅಗತ್ಯ:
ಮತ್ತೊಬ್ಬ ಮುಖ್ಯ ಅತಿಥಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎಚ್.ಟಿ, ಸ್ವಾಮಿ ಅವರು ನಂಬಿಕೆ ಮತ್ತು ಮೂಢನಂಬಿಕೆಗಳ ಕುರಿತು ಮಾರ್ಮಿಕವಾಗಿ ಮಾತನಾಡುತ್ತಾ, “ಸಮಾಜದಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯುವುದು ಇಂದಿನ ಅಗತ್ಯವಾಗಿದೆ. ವಿದ್ಯಾರ್ಥಿಗಳು ಯಾವುದನ್ನೂ ಕುರುಡಾಗಿ ನಂಬದೆ, ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ನಮ್ಮ ಸಂಸ್ಕೃತಿ ಮತ್ತು ಬದುಕಿನ ಜ್ಞಾನಕ್ಕೆ ವೈಚಾರಿಕ ಬುದ್ಧಿಶಕ್ತಿಯೇ ಆಧಾರವಾಗಬೇಕು. ಸರಿ-ತಪ್ಪುಗಳನ್ನು ವಿವೇಚಿಸುವ ಶಕ್ತಿಯನ್ನು ಶಿಕ್ಷಣ ನಮಗೆ ನೀಡಬೇಕು,” ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಣ್ಣ ಅವರು ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಭವಿಷ್ಯದ ಕುರಿತು ದೊಡ್ಡ ಕನಸುಗಳನ್ನು ಕಾಣಬೇಕು ಎಂದು ಪ್ರೇರೇಪಿಸಿದರು. “ಭಾರತದ ಹೆಮ್ಮೆಯ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳುವಂತೆ, ಕನಸು ಎಂದರೆ ನಾವು ನಿದ್ದೆ ಮಾಡುವಾಗ ಕಾಣುವುದಲ್ಲ; ಬದಲಿಗೆ ನಮ್ಮನ್ನು ನಿದ್ದೆ ಮಾಡಲು ಬಿಡದಂತೆ ಕಾಡುವ ಶ್ರೇಷ್ಠ ಆಶಯವೇ ನಿಜವಾದ ಕನಸು. ಅಂತಹ ಉನ್ನತ ಧ್ಯೇಯಗಳನ್ನು ಇಟ್ಟುಕೊಂಡು ವಿದ್ಯಾರ್ಥಿನಿಯರು ಮುನ್ನಡೆಯಬೇಕು,” ಎಂದು ಆಶಿಸಿದರು.

ವೇದಿಕೆಯಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಯಲಕ್ಷ್ಮಮ್ಮ ಕೆ. ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಮಧುಸೂದನ ಪಿ.ಎನ್. ಸಮಾಜಶಾಸ್ತ್ರ ವಿಭಾಗದ ಡಾ. ವಿಜಯಲಕ್ಷ್ಮಿ ಆರ್ , ಕನ್ನಡ ವಿಭಾಗದ ಡಾ. ಗಾಯಿತ್ರಮ್ಮ, ಐಕ್ಯೂಎಸಿ ಸಂಚಾಲಕರಾದ ಶ್ರೀ ಹಲಸಂದಿ ಸತೀಶ್, ವಾಣಿಜ್ಯಶಾಸ್ತ್ರದ ಕನಕರಾಜು, ಗಿರೀಶ್ ಎಂ., ಗ್ರಂಥಪಾಲಕರಾದ ಕುಮಾರಸ್ವಾಮಿ ಬಿ.ಎಚ್., ದೈಹಿಕಶಿಕ್ಷಣ ನಿರ್ದೇಶಕರಾದ ಶಿವಪ್ರಸಾದ್ ಆರ್, ಪತ್ರಾಂಕಿತ ವ್ಯವಸ್ಥಾಪಕರಾದ ವೆಂಕಟೇಶ್ ಆರ್., ಉಪನ್ಯಾಸಕರಾದ ಡಾ. ನಂದಿನಿ ಟಿ. ಹಾಗೂ ಅಂತಿಮ ವರ್ಷದ ಬಿ.ಎ. ಮತ್ತು ಬಿ.ಕಾಂ ವಿದ್ಯಾರ್ಥಿನಿಯರು ಈ ಭಾವನಾತ್ಮಕ ನೆನಪಿನಂಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









