ಬೆಂಗಳೂರು.ಜುಲೈ.18: ಗ್ರಾಮೀಣ ಭಾಗದ ಜನರಿಗೆ ಇ-ಸ್ವತ್ತು ದಾಖಲೆಗಳನ್ನು ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಮತ್ತು ಪಂಚಾಯಿತಿ ಕಚೇರಿಗಳಿಗೆ ಅಲೆಯುವುದನ್ನು ಮುಕ್ತಾಯಗೊಳಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇ-ಸ್ವತ್ತು ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ಮತ್ತು ನಿಯಮಾವಳಿಗಳ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಐದು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಸಚಿವ ಈಶ್ವರ ಖಂಡ್ರೆ ಅವರು ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿದ್ದಾರೆ.
ಪ್ರಸ್ತುತ ಸಾಫ್ಟ್ವೇರ್ ಹಾಗೂ ಸರ್ವರ್ ಸಮಸ್ಯೆಗಳಿಂದಾಗಿ ಸಾವಿರಾರು ಇ-ಸ್ವತ್ತು ಅರ್ಜಿಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಕಾರ್ಯದರ್ಶಿ ಡಿ. ರಂದೀಪ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು (CEO) ಒಳಗೊಂಡ ಸಮಿತಿಯನ್ನು ರಚಿಸಲಾಗುತ್ತಿದೆ. ಈ ಸಮಿತಿಯು ಇ-ಸ್ವತ್ತು ನಿಯಮಗಳಿಗೆ ತರಬೇಕಾದ ಅಗತ್ಯ ಬದಲಾವಣೆಗಳ ಕುರಿತು ಪರಿಶೀಲನೆ ನಡೆಸಿ, ಮುಂದಿನ 10 ದಿನಗಳ ಒಳಗಾಗಿ ಸ್ಪಷ್ಟ ವರದಿಯನ್ನು ಸಲ್ಲಿಸಬೇಕಿದೆ.
ದಾಖಲೆ ಇಲ್ಲದ ಆಸ್ತಿಗಳಿಗೂ ಪರಿಹಾರದ ಚಿಂತನೆ
ಗ್ರಾಮಠಾಣ ವ್ಯಾಪ್ತಿಯಲ್ಲಿ ತಲೆಮಾರುಗಳಿಂದ ವಾಸಿಸುತ್ತಿದ್ದರೂ ಸೂಕ್ತ ದಾಖಲೆಗಳಿಲ್ಲದೆ ಇ-ಸ್ವತ್ತು ಪಡೆಯಲು ಸಾಧ್ಯವಾಗದ ನಿವಾಸಿಗಳ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಚಿವರು ಸೂಚಿಸಿದ್ದಾರೆ. ದಾಖಲೆಗಳ ಕೊರತೆಯಿಂದಾಗಿ ಜನರಿಗೆ ಬ್ಯಾಂಕ್ ಸಾಲ ಪಡೆಯಲು, ಮನೆ ದುರಸ್ತಿ ಹಾಗೂ ಸ್ವತ್ತು ಮಾರಾಟ ಮಾಡಲು ತೊಂದರೆಯಾಗುತ್ತಿದ್ದು, ಇದಕ್ಕೆ ಸೂಕ್ತ ಮಾರ್ಗೋಪಾಯಗಳನ್ನು ಹುಡುಕಲು ಮನೆ ಸಮೀಕ್ಷೆ ನಡೆಸುವಂತೆ ತಿಳಿಸಲಾಗಿದೆ.

ಇದರೊಂದಿಗೆ, ಗ್ರಾಮಠಾಣಾ ವ್ಯಾಪ್ತಿಯ ಹೊರಗೆ ಕಂದಾಯ ಭೂಮಿ, ಬಿ ಖರಾಬು ಮತ್ತು ಗೋಮಾಳದಂತಹ ಜಾಗಗಳಲ್ಲಿ ಅನಧಿಕೃತವಾಗಿ ತಲೆಎತ್ತಿರುವ ಬಡಾವಣೆಗಳಿಗೆ ನಮೂನೆ 11ಬಿ ನೀಡಲು ಸದ್ಯದ ನಿಯಮಗಳಲ್ಲಿ ಅವಕಾಶವಿಲ್ಲ. ಇಂತಹ ಕಡೆಗಳಲ್ಲಿ ರಸ್ತೆ, ನೀರು, ಚರಂಡಿಯಂತಹ ಮೂಲಭೂತ ಸೌಕರ್ಯಗಳನ್ನು ಪಂಚಾಯಿತಿಗಳೇ ಒದಗಿಸುತ್ತಿದ್ದರೂ, ತೆರಿಗೆ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಗೊಂದಲಗಳನ್ನು ಬಗೆಹರಿಸಿ, ಗ್ರಾಮೀಣ ಭಾಗದ ಎಲ್ಲಾ ಸ್ವತ್ತುಗಳಿಗೂ ಸುಗಮವಾಗಿ ಇ-ಸ್ವತ್ತು ವಿತರಿಸಲು ಅನುಕೂಲವಾಗುವಂತೆ ವರದಿ ನೀಡಲು ಸಚಿವ ಈಶ್ವರ ಖಂಡ್ರೆ ಅವರು ಸಮಿತಿಗೆ ನಿರ್ದೇಶನ ನೀಡಿದ್ದಾರೆ.








