Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಮೇಲುಕೋಟೆ ಶ್ರೀ ಯೋಗಾ ನರಸಿಂಹ ಸ್ವಾಮಿ ದೇವಾಲಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿರುವಯೋಗಾನರಸಿಂಹ ಸ್ವಾಮಿ ದೇವಾಲಯವು ಬೆಟ್ಟದ ತುದಿಯಲ್ಲಿರುವ ಒಂದು ಪ್ರಾಚೀನ ದೇವಾಲಯವಾಗಿದೆ. ಯೋಗ ಭಂಗಿಯಲ್ಲಿ ಕುಳಿತಿರುವ ನರಸಿಂಹ ಸ್ವಾಮಿ ದೇವರಿಗೆ ಸಮರ್ಪಿತವಾಗಿರುವ ಇದು ಯದುಗಿರಿ ಬೆಟ್ಟದ ಮೇಲಿದೆ.
ನೂರಾರು ವೇದ ಭಾಷೆಗಳ ಚಲನಚಿತ್ರಗಳ ಸಾವಿರಾರು ಹಾಡುಗಳಲ್ಲಿ ಈ ಬೆಟ್ಟದ ದೇವಾಲಯ, ಮೇಲುಕೋಟೆ ಸುತ್ತಮುತ್ತಲಿನ ಸ್ಥಳಗಳನ್ನು ಬಹಳ ಸುಂದರವಾಗಿ ಚಿತ್ರೀಕರಿಸಲಾಗಿದ್ದು ಪ್ರತಿಯೊಬ್ಬರು ನೋಡಿರುತ್ತಾರೆ.
ಆದರೆ ವಾಸ್ತವವಾಗಿ ಇಲ್ಲಿಗೆ ಬಂದು ನೋಡಿದಾಗ ಅದರ ಸೌಂದರ್ಯವನ್ನು ಕಣ್ಣಾರೆ ತುಂಬಿಕೊಳ್ಳಬಹುದು.
ಮುಖ್ಯ ರಸ್ತೆಯಿಂದ ಭಕ್ತರು ಬೆಟ್ಟದ ಮೇಲಿರುವ ದೇವಾಲಯವನ್ನು ತಲುಪಲು ಸುಮಾರು 300 ರಿಂದ 350 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ.

ಮೇಲುಕೋಟೆಯು ಉತ್ತಮ ಪ್ರವಾಸಿ ತಾಣವಾಗಿದ್ದು ಸುತ್ತಮುತ್ತಲಿನ ಹತ್ತಾರು ಜಿಲ್ಲೆಗಳಿಂದ ಉತ್ತಮ ಸಾರಿಗೆ ಸಂಪರ್ಕವನ್ನು ಹಾಗೂ ರಸ್ತೆ ಸಂಪರ್ಕವನ್ನು ಪಡೆದಿದೆ.
ಮೈಸೂರಿನಿಂದ ಸುಮಾರು 50 ಕಿ.ಮೀ ಮತ್ತು ಬೆಂಗಳೂರಿನಿಂದ 135 ಕಿ.ಮೀ. ದೂರವಿರುವ ಈ ಸ್ಥಳವು ಚಾಮರಾಜನಗರ – ಬೀದರ್ ರಾಷ್ಟ್ರೀಯ ಹೆದ್ದಾರಿ 150A ರ ಜಕ್ಕನಹಳ್ಳಿ ಕ್ರಾಸ್ನಿಂದ ಪಶ್ಚಿಮಕ್ಕೆ 5 km ದೂರವಿದೆ.

ಇತಿಹಾಸ:
ಈ ದೇವಾಲಯವನ್ನು ಹೊಯ್ಸಳ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾಯಿತಾದರೂ ನಂತರ ಈ ಪ್ರದೇಶವನ್ನು ಆಳಿದ ಎಲ್ಲಾ ರಾಜವಂಶಗಳ ಪ್ರಮುಖ ರಾಜರುಗಳು ಇಂದಿನ ದೇವಾಲಯವನ್ನು ಅಭಿವೃದ್ಧಿ ಪಡಿಸುತ್ತಾ ಬಂದು ಕಾಲಕಾಲಕ್ಕೆ ದಾನ ದತ್ತಿಗಳನ್ನು ನೀಡಿದ್ದಾರೆ.

ನರಸಿಂಹ ದೇವರ 7 ಪ್ರಮುಖ ಕ್ಷೇತ್ರಗಳಲ್ಲಿ ಇದನ್ನು ಪ್ರಮುಖವಾಗಿ ಗುರುತಿಸಿ ಪೂಜಿಸಲ್ಪಡುತ್ತದೆ. ದಂತಕಥೆಯ ಪ್ರಕಾರ ಮುಖ್ಯ ವಿಗ್ರಹವನ್ನು ಪ್ರಹ್ಲಾದನು ಸ್ಥಾಪಿಸಿದನು ಹಾಗೂ ಈ ದೇವಾಲಯದ ಹತ್ತಿರದಲ್ಲಿ ಇರುವ ಗುಹೆಯಲ್ಲಿ ತಪಸ್ಸು ಮಾಡಿದ್ದಾನೆಂಬ ಐತಿಹ್ಯವಿದೆ.
ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 12:00 ರವರೆಗೆ ಮತ್ತು ಸಂಜೆ 4:00 ರಿಂದ ರಾತ್ರಿ 8:00 ರವರೆಗೆ ಈ ದೇವಾಲಯವು ತೆರೆದಿರುತ್ತದೆ. ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಈ ದೇವಾಲಯವು ಭಕ್ತರು ಹಾಗೂ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ.

ದೇವಾಲಯದ ಒಳಭಾಗದಲ್ಲಿ ಟಿಪ್ಪು ಸುಲ್ತಾನ್ ದಾನ ಮಾಡಿದ ಬೃಹತ್ ನಗಾರಿ, ಪರಕಾಲಮಠ ದಾನ ಮಾಡಿದ ಗಂಟೆ ಮತ್ತು ಮೈಸೂರು ರಾಜ ಕೃಷ್ಣರಾಜ ಒಡೆಯರ್ 3 ದಾನ ಮಾಡಿದ ಚಿನ್ನದ ಕಿರೀಟವನ್ನು ಕಾಣಬಹುದು. ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ವಿಜಯನಗರ ಕಾಲದಲ್ಲಿ ಇದು ಮತ್ತಷ್ಟು ವಿಸ್ತಾರ ಗೊಳ್ಳುತ್ತಾ ಸಾಗಿರುವುದನ್ನು ಕಾಣಬಹುದು. ಸುಖನಾಸಿ,ಗರ್ಭಗೃಹ, ವಿಶಾಲವಾದ ಪ್ರಾಂಗಣವನ್ನು ಹೊಂದಿರುವ ದೇವಾಲಯ ಇದಾಗಿದ್ದು ಈ ದೇವಾಲಯದ ಭಾಗದಿಂದ ಮೇಲುಕೋಟೆಯ ಒಂದು ಪಕ್ಷಿ ನೋಟವನ್ನು ಕಣ್ತುಂಬಿಕೊಳ್ಳಬಹುದು. ಕಲ್ಲಿನ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಹತ್ತಬೇಕಾಗುತ್ತದೆ.
ಬೆಟ್ಟದ ಮೇಲ್ಭಾಗಕ್ಕೆ ತಲುಪಲು ಸುಲಭದ ಮೆಟ್ಟಿಲುಗಳು ಹಾಗೂ ಅದರ ಸುತ್ತಮುತ್ತಲಿರುವ ಮರ ಗಿಡಗಳು, ಬೃಹತ್ ಮರಗಳು ವಾತಾವರಣವನ್ನು ಮತ್ತಷ್ಟು ಉಲ್ಲಾಸದಾಯಕವಾಗಿಸುತ್ತದೆ.

ಮೇಲೆ ಹತ್ತಿದಂತೆಲ್ಲ ದೂರದೂರದ ಸ್ಥಳವನ್ನು, ಪರಿಸರವನ್ನು ಮತ್ತಷ್ಟು ವಿಸ್ತಾರವಾಗಿ,ವಿಶಾಲವಾಗಿ ನೋಡಬಹುದು. ಎಂತಹ ಬೇಸಿಗೆ ಬಿಸಿಲಿನ ತಾಪವಿದ್ದರೂ ಬೆಟ್ಟದ ಮೇಲೆ ಹರಡಿರುವ ವಿಶಾಲ ತಂಪಾದ ವಾತಾವರಣವು ಬಿಸಿಲನ್ನು ಪ್ರವಾಸಿಗರಿಗೆ ತಾಕಿಸಲು ಬಿಡುವುದಿಲ್ಲ. ಬೆಟ್ಟದ ಮೇಲ್ಭಾಗದಲ್ಲಿ ಬಂದ ಪ್ರವಾಸಿಗರಿಗೆ ಸ್ಥಳೀಯ ಅಂಗಡಿಗಳಲ್ಲಿ ಸಿಗುವ ಪುಳಿಯೋಗರೆಯು ಅತ್ಯಂತ ಮೆಚ್ಚಿನ ಖಾದ್ಯವಾಗಿರುತ್ತದೆ.
ಬೆಟ್ಟದ ಮೇಲಿನ ವಿಶಾಲ ಸ್ಥಳದಿಂದ ಸುಂದರ ಮೇಲುಕೋಟೆಯ ಹತ್ತಾರು ದೇವಾಲಯಗಳನ್ನು, ಕಲ್ಯಾಣಿಯನ್ನು, ಸುಂದರ ವಾಸ್ತು ಶೈಲಿಯ ವಿವಿಧ ಸ್ಮಾರಕಗಳನ್ನು ಗಮನಿಸಬಹುದು.

ಎಂದಿಗೂ ಮರೆಯಲಾಗದಂ ತಹ ಒಂದು ಸುಂದರ ಅನುಭವವನ್ನು ಪ್ರತಿಯೊಬ್ಬರೂ ಪಡೆದುಕೊಂಡೆ ಇಲ್ಲಿಂದ ತೆರಳುತ್ತಾರೆ. ಬೆಟ್ಟದ ಮೇಲ್ಭಾಗದಲ್ಲಿರುವ ರಾಜಗೋಪುರವು ಅಂದಿನ ಕಲಾವಿನ್ಯಾಸ ಹಾಗೂ ಇಂಜಿನಿಯರಿಂಗ್ ತಾಂತ್ರಿಕತೆಯನ್ನು ಒತ್ತಿ ಹೇಳುತ್ತದೆ. ಇಂದಿಗೂ ಸ್ವಲ್ಪವೂ ಅಲುಗಾಡದೆ, ಬಿರುಕು ಬಾರದಂತೆ ರಾಜಗೋಪುರವನ್ನು ಇಂತಹ ಎತ್ತರದ ಸ್ಥಳದಲ್ಲಿ ಕಟ್ಟಿರುವುದು ವಿಸ್ಮಯಕಾರಿಯಾಗಿದೆ. ಎಂತಹ ಬಿರುಬೇಸಿಗೆಯಲ್ಲೂ ಕೂಡ ಬೆಟ್ಟದ ಮೇಲಿನ ದೇವಾಲಯದಲ್ಲಿ ತಂಪಾದ ವಾತಾವರಣವಿರುತ್ತದೆ.
ಬೆಟ್ಟದ ಮಧ್ಯಭಾಗದವರೆಗೂ ವಾಹನಗಳು ತೆರಳುವ ರಸ್ತೆ ಇದ್ದರೂ ಕೂಡ ಮೇಲ್ಭಾಗಕ್ಕೆ ತಲುಪಲು ಮೆಟ್ಟಿಲುಗಳ ಮೇಲೆಯೇ ಹೋಗಬೇಕಾಗುತ್ತದೆ.

ಇದು ಸುಮಾರು 1777 ಮೀಟರ್ ಗಳಷ್ಟು ಸಮುದ್ರ ಮಟ್ಟದಿಂದ ಮೇಲ್ಭಾಗದಲ್ಲಿದೆ. ಧಾರ್ಮಿಕ ಮಹತ್ವ,ಪ್ರಾಕೃತಿಕ ಸೌಂದರ್ಯ ಹಾಗೂ ವಾಸ್ತುಶಿಲ್ಪದ ದೃಷ್ಟಿಯಿಂದ ಈ ಸ್ಥಳವು ಜನರಿಗೆ ಆತ್ಮೀಯ ಹಾಗೂ ಆಪ್ತ ಸ್ಥಳವೆಂದು ಗುರುತಿಸಲಾಗುತ್ತದೆ. ದೇವಾಲಯದ ಒಳಭಾಗದಲ್ಲಿ ಅತ್ಯಂತ ಕಲಾತ್ಮಕವಾದ ಕಲ್ಲಿನ ಕೆತ್ತನೆಗಳನ್ನು ನೋಡಬಹುದು. ಸುಂದರ ಕಂಬಗಳು ದೇವಾಲಯದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಭಕ್ತಿಯಿಂದ ಬೇಡಿಕೊಂಡರೆ ಈ ನರಸಿಂಹನು ಶೀಘ್ರ ವರವನ್ನು ಕೊಡುತ್ತಾನೆಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.


ಕರ್ನಾಟಕದ ಹಾಗೂ ಮಂಡ್ಯ ಜಿಲ್ಲೆಯ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಈ ಸ್ಥಳವು ಒಂದಾಗಿದೆ.
ಮೇಲುಕೋಟೆಯ ಪ್ರಮುಖ ಐಕಾನ್ ಸ್ಥಳವಾದ ಈ ದೇವಾಲಯದ ರಾಜಗೋಪುರವು ಕಿಲೋಮೀಟರ್ ಗಟ್ಟಲೆ ದೂರದಿಂದಲೇ ಭಕ್ತರಿಗೆ ಪ್ರವಾಸಿಗರಿಗೆ ದರ್ಶನ ನೀಡುತ್ತದೆ. ಈ ಗೋಪುರ ಒಂದರಿಂದಲೇ ಮೇಲುಕೋಟೆ ಇಂತಹ ಸ್ಥಳದಲ್ಲಿ ಇರುವುದನ್ನು ಶೀಘ್ರವಾಗಿ ದೂರದಿಂದಲೇ ಗುರುತಿಸಬಹುದಾಗಿದೆ. ಇದರ ಜೊತೆಗೆ ಪ್ರಾಚೀನ ಮಾನವನ ಶಿಲಾಯುಗದ ಕುರುಹುಗಳನ್ನು ಪ್ರಾಚೀನ ಮಾನವನು ಇಲ್ಲಿ ನೆಲೆಸಿದ್ದನೆಂಬ ಸ್ಥಳಗಳನ್ನು ಇತಿಹಾಸ ಸಂಶೋಧಕರು ಗುರುತಿಸಿದ್ದಾರೆ. ಇದರಿಂದ ಸರಿ ಸುಮಾರು 3000-4000 ವರ್ಷಗಳಿಂದಲೇ ಮಾನವರು ಇಲ್ಲಿ ನೆಲೆಸಿ ಜನವಸತಿಯನ್ನಾಗಿ ಮಾಡಿಕೊಂಡಿದ್ದನ್ನು ಗಮನಿಸಬಹುದು. ಮೇಲುಕೋಟೆಯಲ್ಲಿ ಇದರ ಜೊತೆಗೆ ಹತ್ತಾರು ವಿವಿಧ ಸ್ಮಾರಕಗಳು,ಸ್ಥಳಗಳು, ದೇವಾಲಯಗಳು ಇದ್ದು ಇವೆಲ್ಲವುಗಳು ಪ್ರವಾಸಿಗರ, ಭಕ್ತರ ನೆಚ್ಚಿನ ಸ್ಥಳಗಳಾಗಿವೆ. ಇಲ್ಲಿಗೆ ವರ್ಷದ ಎಲ್ಲ ದಿನಗಳಲ್ಲೂ ಭೇಟಿ ನೀಡಬಹುದು. ಊಟ ವಸತಿಗೆ ಉತ್ತಮ ಹೋಟೆಲ್, ಲಾಡ್ಜ್ ಗಳು ಲಭ್ಯವಿದೆ.
ಒಂದು ದಿನದಲ್ಲಿಯೇ ಭೇಟಿ ನೀಡಿ ವಾಪಸ್ ಬರಬಹುದಾದ ಸ್ಥಳವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now