ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗೆ ಮಕ್ಕಳನ್ನ ಸಿದ್ಧ ಮಾಡಲು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯೂ ಬಹಳ ಮುಖ್ಯ. ಮಕ್ಕಳಲ್ಲಿ ಧೈರ್ಯ, ಸ್ಪೂರ್ತಿಯನ್ನ ಈ ಪರೀಕ್ಷೆಯಿಂದಾನೇ ತುಂಬ ಬೇಕಾದ ಶಿಕ್ಷಕರೇ ಇಲ್ಲಿಯೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, ಸಿಕ್ಕಿ ಬಿದ್ದಿದ್ದಾರೆ. ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಅಪರಾಧ ಪೊಲೀಸರು 10ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ 6 ಜನ ಶಿಕ್ಷಕರೇ ಆರೋಪಿಗಳಾಗಿದ್ದಾರೆ.
ತುಮಕೂರು ಶಾಲೆಯೊಂದರ ಮುಖ್ಯೋಪಾಧ್ಯಾಯ ಗಿರೀಶ್ ವಿ.ಡಿ, ರಾಮನಗರ ಶಾಲೆಯ ಸಹಾಯಕ ಶಿಕ್ಷಕರಾದ ಅಹ್ಮದ್ ಖಾನ್, ಶಾಹಿದಾ ಬೇಗಂ, ಶಿಕ್ಷಕಿ ಫಹ್ಮಿದಾ, ಶಿಕ್ಷಕ ಮೊಹಮ್ಮದ್ ಸಿರಾಜುದ್ದಿನ್, ಕೆ ಫರ್ಜಾನಾ ಬೇಗಂ ಅವರು ಬಂಧಿತರು. ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಇವರ ಕೈವಾಡವಿದೆ ಎನ್ನಲಾಗಿದ್ದು, ತನಿಖೆ ನಡೆಸುತ್ತಿದ್ಸಾರೆ.

ಖಾಸಗಿ ಸಂದೇಶಗಳ ಮೂಲಕ 200 ರಿಂದ 500 ರೂ.ಗಳವರೆಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಕೇವಲ 200, 300 ರೂಪಾಯಿಗೆಲ್ಲಾ ಮಕ್ಕಳ ಭವಿಷ್ಯದ ಜೊತೆಗೆ ಶಿಕ್ಷಕರೇ ಆಟವಾಡಿರುವುದು ವಿಪರ್ಯಾಸವೇ ಸರಿ. ಸೋಷಿಯಲ್ ಮೀಡಿಯಾದಲ್ಲಿಯೇ ನಮ್ಮ ಬಳಿ ಪತ್ರಿಕೆಗಳು ಸಿಗಲಿವೆ ಎಂಬ ಪೋಸ್ಟ್ ಅನ್ನ ಹಾಕಿಕೊಂಡಿದ್ದರು. ಸಂಪರ್ಕಿಸಿದ ವಿದ್ಯಾರ್ಥಿಗಳ ಬಳಿ ಇಂತಿಷ್ಟು ಹಣ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಹಣ ಕೊಟ್ಟ ವಿದ್ಯಾರ್ಥಿಗಳಿಗೆ ಪತ್ರಿಕೆಗಳನ್ನ ನೀಡಲಾಗಿದೆ. ಸದ್ಯ ಆರೋಪಿಗಳನ್ನ ಬಂಧಿಸಿದ್ದು, ತನಿಖೆ ನಡೆಸಲಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗಬೇಕಾದ ಶಿಕ್ಷಕರೇ ಈ ರೀತಿ ಮಾಡಿದರೆ ಹೇಗೆ ಎಂಬ ಪ್ರಶ್ನೆ ಮೂಡಿದೆ










