ದಾವಣಗೆರೆ.ಸೆಪ್ಟೆಂಬರ್.10: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆ ನಡೆದಿದ್ದು, ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ 7086 ಮತದಾರರಿಗೆ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಗಳು ಪ್ರಗತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಂತರ ಆಗಸ್ಟ್ 24 ರಂದು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕರಡು ಪಟ್ಟಿಯನ್ವಯ ಒಟ್ಟು 12,98,219 ಮತದಾರರು ಇದ್ದಾರೆ.
2002 ರ ಮತದಾರರ ಪಟ್ಟಿಯಲ್ಲಿರುವ ಮತದಾರರು ದಾಖಲೆ ಸಲ್ಲಿಸದೆ ಇರುವವರು , ಗೈರು ಹಾಜರಿ ಮತದಾರರು ಸೇರಿದಂತೆ ಇದುವರೆಗೆ ಒಟ್ಟು 7,086 ನೋಟೀಸ್ಗಳನ್ನು ಜನರೇಟ್ ಮಾಡಲಾಗಿದ್ದು, ಅದರಲ್ಲಿ 6,166 ನೋಟೀಸ್ಗಳನ್ನು ಜಾರಿಗೊಳಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳ ಒಟ್ಟು 1,341 ಪ್ರಕರಣಗಳಲ್ಲಿ ವಿಚಾರಣೆ ನಡೆದಿದ್ದು, ಮ್ಯಾಪಿಂಗ್ ಆಗದ ಪ್ರಕರಣಗಳಿಗೆ ಸಂಬಂಧಿಸಿದಂತೆ 328 ದಾಖಲೆ ಪರಿಶೀಲನೆಗಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ನೋಟೀಸ್ ಆಧಾರಿತ 1,009 ಪ್ರಕರಣಗಳು ಅಂತಿಮ ಪ್ರಕಟಣೆಗಾಗಿ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದ್ದಾರೆ










