ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯು ಹಲವು ಜನಪರ ಹಾಗೂ ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದೆ. ಸಾರಿಗೆ, ಆರೋಗ್ಯ, ಕೃಷಿ, ನಾವೀನ್ಯತೆ ಹಾಗೂ ಮೂಲಸೌಕರ್ಯ ವಲಯಗಳ ಅಭಿವೃದ್ಧಿಗೆ ಪೂರಕವಾಗಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ವಿವರ ಹೀಗಿದೆ
ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆ: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ₹237 ಕೋಟಿ ಅಂದಾಜು ವೆಚ್ಚದಲ್ಲಿ ‘ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆ’ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ.
ಆರೋಗ್ಯ ವಲಯಕ್ಕೆ ಹೊಸ ಬಲ (ಟೆಲಿ-ಐಸಿಯು): ರಾಜ್ಯದ 185 ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ₹10.78 ಕೋಟಿ ವೆಚ್ಚದಲ್ಲಿ ಸುಸಜ್ಜಿತ ‘ಟೆಲಿ-ಐಸಿಯು’ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಲಾಗಿದ್ದು, ತುರ್ತು ವೈದ್ಯಕೀಯ ಸೇವೆಯನ್ನು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಿಸಲಾಗುತ್ತದೆ.
ಕರ್ನಾಟಕ ಡಿಜಿಟಲ್ ರೇಡಿಯೋಗ್ರಫಿ ಮಿಷನ್ (KDRM): ಸರ್ಕಾರಿ ಆಸ್ಪತ್ರೆಗಳ ಎಕ್ಸ್-ರೇ ವ್ಯವಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ₹40.50 ಕೋಟಿ ವೆಚ್ಚದಲ್ಲಿ 162 ಘಟಕಗಳನ್ನು ಉನ್ನತೀಕರಿಸಲು ಅನುಮೋದನೆ ನೀಡಲಾಗಿದೆ.
ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ: ಆಧುನಿಕ ಕೃಷಿಗೆ ಪ್ರೋತ್ಸಾಹ ನೀಡಲು ಮತ್ತು ಯಾಂತ್ರೀಕೃತ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ರೈತರಿಗೆ ನೇರ ನೆರವು ಒದಗಿಸಲು ₹152.28 ಕೋಟಿ ಅನುದಾನ ಮೀಸಲಿಡಲಾಗಿದೆ.

ತೇಗ ಸಿರಿ ಯೋಜನೆ: ‘ಹಸಿರು ಕರ್ನಾಟಕ’ ನಿರ್ಮಾಣದ ಗುರಿಯೊಂದಿಗೆ, ರಾಜ್ಯಮಟ್ಟದ ಸಮಗ್ರ ವೃಕ್ಷಾಭಿವೃದ್ಧಿಗಾಗಿ ₹493.09 ಕೋಟಿಗಳ ಬೃಹತ್ ಯೋಜನೆಗೆ ಸಂಪುಟ ಹಸಿರು ನಿಶಾನೆ ತೋರಿದೆ.
ವಿದ್ಯಾರ್ಥಿ ಸಂಘಗಳ ಚುನಾವಣೆ: ಯುವಜನರಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಅನುಮೋದನೆ ನೀಡಲಾಗಿದೆ.
ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿ (2026–2031): ಜವಳಿ ಉದ್ಯಮಕ್ಕೆ ಬೃಹತ್ ಉತ್ತೇಜನ ನೀಡಲು, ಹೂಡಿಕೆ ಆಕರ್ಷಿಸಲು ಹಾಗೂ ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ 2026-2031ರ ಹೊಸ ನೀತಿಗೆ ಸಮ್ಮತಿ ನೀಡಲಾಗಿದೆ.
ಜಿಐಎಸ್ ಆಧಾರಿತ ರಸ್ತೆ ಜಾಲ ಯೋಜನೆ: ನಗರ ಮತ್ತು ಪಟ್ಟಣಗಳ ವ್ಯವಸ್ಥಿತ ಅಭಿವೃದ್ಧಿ ಹಾಗೂ ಸಮಗ್ರ ರಸ್ತೆ ಯೋಜನಾ ನಿರ್ವಹಣೆಗಾಗಿ ‘GIS ಆಧಾರಿತ Road Network Grid Plan’ ಗೆ ಅನುಮೋದನೆ ದೊರೆತಿದೆ.
ಕಲಬುರಗಿಯಲ್ಲಿ ಲೀಪ್ (LEAP) ಲ್ಯಾಬ್ಸ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮಶೀಲತೆ ಮತ್ತು ನಾವೀನ್ಯತೆಗೆ ವೇಗ ನೀಡಲು ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿ ಲೀಪ್ (LEAP Growth) ಲ್ಯಾಬ್ಸ್‌ಗೆ ನಿವೇಶನ ಹಂಚಿಕೆ ಮಾಡಲಾಗಿದೆ.
ಗವರ್ನ್‌ಮೆಂಟ್ ಫಸ್ಟ್ ಉಪಕ್ರಮ: ನವೋದ್ಯಮಗಳಿಗೆ (ಸ್ಟಾರ್ಟ್‌ಅಪ್‌ಗಳಿಗೆ) ಸರ್ಕಾರಿ ಬೆಂಬಲ ನೀಡಲು ಹಾಗೂ ನಾವೀನ್ಯತೆಯನ್ನು ಉತ್ತೇಜಿಸಲು ಸ್ಟಾರ್ಟ್‌ಅಪ್ ನೀತಿಯಡಿ ₹25 ಕೋಟಿ ವೆಚ್ಚದಲ್ಲಿ ‘ಗವರ್ನ್‌ಮೆಂಟ್ ಫಸ್ಟ್’ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ.












