ನವದೆಹಲಿ: ಜನನ ಮತ್ತು ಮರಣಗಳನ್ನು ತಡವಾಗಿ ನೋಂದಣಿ ಮಾಡುವ ನಿಯಮಗಳಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. 2026ರ ಅಕ್ಟೋಬರ್ 1ರಿಂದ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆಯ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
2026ರ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದು, ರಾಷ್ಟ್ರಪತಿಯ ಅಂಕಿತದ ಬಳಿಕ ಕಾನೂನಾಗಿ ಮಾರ್ಪಟ್ಟಿದೆ. ಇನ್ನು ಮುಂದೆ ಜನನ ಅಥವಾ ಮರಣವನ್ನು ತಡವಾಗಿ ನೋಂದಣಿ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಪರಿಶೀಲನೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಆದೇಶ ಅಗತ್ಯವಾಗಲಿದೆ.ಜನನ ಅಥವಾ ಮರಣ ಸಂಭವಿಸಿ ಒಂದು ವರ್ಷ ಕಳೆದಿದ್ದು, ಎರಡು ವರ್ಷ ಪೂರ್ಣಗೊಳ್ಳುವ ಮುನ್ನ ನೋಂದಣಿಗೆ ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಯಿಂದ ಅಧಿಕಾರ ಪಡೆದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಆದೇಶ ಪಡೆಯಬೇಕಾಗುತ್ತದೆ.
ಸಂಬಂಧಪಟ್ಟ ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ದಾಖಲೆಗಳು ಮತ್ತು ವಿವರಗಳನ್ನು ಪರಿಶೀಲಿಸಿದ ಬಳಿಕ, ನಿಗದಿತ ಶುಲ್ಕ ಪಾವತಿಸಿದರೆ ನೋಂದಣಿಗೆ ಅನುಮತಿ ನೀಡಬಹುದು.ಜನನ ಅಥವಾ ಮರಣ ಸಂಭವಿಸಿ ಎರಡು ವರ್ಷಕ್ಕಿಂತ ಹೆಚ್ಚು ಸಮಯ ಕಳೆದ ಬಳಿಕ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಇನ್ನು ಮುಂದೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಆದೇಶ ಪಡೆಯುವುದು ಕಡ್ಡಾಯವಾಗಲಿದೆ.ಮ್ಯಾಜಿಸ್ಟ್ರೇಟ್ ಕೂಡ ಜನನ ಅಥವಾ ಮರಣಕ್ಕೆ ಸಂಬಂಧಿಸಿದ ಮಾಹಿತಿಯ ನಿಖರತೆಯನ್ನು ಪರಿಶೀಲಿಸಿದ ಬಳಿಕ, ನಿಗದಿತ ಶುಲ್ಕ ಪಾವತಿಯೊಂದಿಗೆ ನೋಂದಣಿಗೆ ಆದೇಶ ನೀಡಬಹುದು.
1969ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯ ಸೆಕ್ಷನ್ 13ಕ್ಕೆ ತಿದ್ದುಪಡಿ ಮಾಡುವ ಮೂಲಕ ಈ ಬದಲಾವಣೆಗಳನ್ನು ತರಲಾಗಿದೆ. ಜನನ ಮತ್ತು ಮರಣಗಳ ನೋಂದಣಿಯನ್ನು ನಿಗದಿತ ಸಮಯದೊಳಗೆ ಮಾಡಿಸುವಂತೆ ಜನರನ್ನು ಉತ್ತೇಜಿಸುವುದು ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ.ಜನನ ಮತ್ತು ಮರಣ ನೋಂದಣಿ ಕಾನೂನುಬದ್ಧವಾಗಿ ಕಡ್ಡಾಯವಾಗಿದ್ದು, ನೋಂದಣಿ ಬಳಿಕ ನೀಡಲಾಗುವ ಪ್ರಮಾಣಪತ್ರವು ಜನನ ಅಥವಾ ಮರಣವನ್ನು ದೃಢೀಕರಿಸುವ ಪ್ರಮುಖ ಕಾನೂನು ದಾಖಲೆಯಾಗಿದೆ. ಹೀಗಾಗಿ, ಇನ್ನು ಮುಂದೆ ತಡವಾಗಿ ನೋಂದಣಿ ಮಾಡುವವರು ಹೆಚ್ಚುವರಿ ಪರಿಶೀಲನೆ ಹಾಗೂ ಅನುಮತಿ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ.










