ಸುದ್ದಿಒನ್,ಬೆಂಗಳೂರು,ಮೇ.27: ರಾಜ್ಯ ರಾಜಕಾರಣದ ಅತ್ಯಂತ ಪ್ರಮುಖ ಬೆಳವಣಿಗೆಯೊಂದರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ದಿನಾಂಕ ಮತ್ತು ಸಮಯವನ್ನು ಅಧಿಕೃತವಾಗಿ ನಿಗದಿಪಡಿಸಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿಎ.
ರಾಜೀನಾಮೆ ನೀಡುವ ಮುನ್ನ ಸಿದ್ದರಾಮಯ್ಯ ಅವರು ಒಂದು ಮಹತ್ವದ ರಾಜಕೀಯ ನಡೆ ಇಟ್ಟಿದ್ದಾರೆ. ನಾಳೆ ಬೆಳಗ್ಗೆ ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅತ್ಯಂತ ಆಪ್ತ ಶಾಸಕರಿಗೆ ವಿಶೇಷ ಉಪಹಾರ ಕೂಟವನ್ನು ಆಯೋಜಿಸಿದ್ದಾರೆ.ಈ ಸಭೆಯಲ್ಲಿ ಮಂತ್ರಿಗಳು ಮತ್ತು ಆಪ್ತ ಶಾಸಕರೊಂದಿಗೆ ಕೊನೆಯ ಬಾರಿಗೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ.ಉಪಹಾರ ಮುಗಿದ ತಕ್ಷಣವೇ ಸಿದ್ದರಾಮಯ್ಯ ಅವರು ನೇರವಾಗಿ ಲೋಕಭವನಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ನಾಳೆ ಬೆಳಗ್ಗೆ ಸರಿಯಾಗಿ 11:30 ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಲಿದ್ದಾರೆ ಎನ್ನಲಾಗಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣವೇ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ತಮ್ಮ ರಾಜೀನಾಮೆಯ ಹಿಂದಿನ ಅಸಲಿ ಕಾರಣಗಳು, ರಾಜಕೀಯ ಬೆಳವಣಿಗೆಗಳ ಬಗ್ಗೆ ಉತ್ತರ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ನಾಳೆ ಬೆಳಗ್ಗೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಶುರುವಾಗಲಿದ್ದು, ಇಡೀ ರಾಜ್ಯದ ಕಣ್ಣು ಈಗ ಸಿಎಂ ಸಿದ್ದರಾಮಯ್ಯ ಅವರ ಮುಂದಿನ ಹೆಜ್ಜೆಯ ಮೇಲಿದೆ.










