Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಯಾಣಿಕರಿಗೆ ಶಾಕ್; ಶೇ. 10 ರಿಂದ 12 ರಷ್ಟು ಬಸ್ ಟಿಕೆಟ್ ದರ ಏರಿಕೆಗೆ ಸಾರಿಗೆ ಸಂಸ್ಥೆಗಳ ಪ್ರಸ್ತಾವನೆ!

---Advertisement---

ಬೆಂಗಳೂರು.ಜೂನ್.22: ರಾಜ್ಯದ ಸಾರ್ವಜನಿಕರಿಗೆ ಶೀಘ್ರದಲ್ಲೇ ಬಸ್ ಪ್ರಯಾಣದ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಹೆಚ್ಚುತ್ತಿರುವ ಇಂಧನ ದರ, ಸಿಬ್ಬಂದಿ ವೇತನ ಹಾಗೂ ಸಾವಿರಾರು ಕೋಟಿ ರೂಪಾಯಿ ಬಾಕಿ ಸಾಲವನ್ನು ಸರಿದೂಗಿಸಲು ಕರ್ನಾಟಕದ ನಾಲ್ಕೂ ಸಾರಿಗೆ ಸಂಸ್ಥೆಗಳು (KSRTC, BMTC, NWKRTC, KKRTC) ಜಂಟಿಯಾಗಿ ಶೇ. 10 ರಿಂದ 12 ರಷ್ಟು ಟಿಕೆಟ್ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಈ ಅಧಿಕೃತ ಪ್ರಸ್ತಾವನೆಯು ಸದ್ಯ ಸರ್ಕಾರದ ಮುಂದಿದ್ದು, ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ಅಂತಿಮ ನಿರ್ಧಾರದ ಬಳಿಕ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ. ಸಾರಿಗೆ ಅಧಿಕಾರಿಗಳ ಪ್ರಕಾರ, ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನು ಮುನ್ನಡೆಸುವುದು ಅತ್ಯಂತ ಕಠಿಣ ಸವಾಲಾಗಿದೆ. ಇತ್ತೀಚೆಗೆ ಸಾರಿಗೆ ನೌಕರರ ವೇತನವನ್ನು ಶೇ. 12.5 ರಷ್ಟು ಹೆಚ್ಚಳ ಮಾಡಿದ್ದರಿಂದ ಸಂಸ್ಥೆಗಳ ಮೇಲೆ ವಾರ್ಷಿಕ 873.64 ಕೋಟಿ ರೂ. ಗಳ ಹೆಚ್ಚುವರಿ ಹೊರೆ ಬಿದ್ದಿದೆ. ಇದರ ಜೊತೆಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 7.81 ರೂ. ಏರಿಕೆಯಾಗಿದ್ದು, ಇಂಧನಕ್ಕಾಗಿ ವರ್ಷಕ್ಕೆ ಹೆಚ್ಚುವರಿಯಾಗಿ 395 ಕೋಟಿ ರೂ. ವೆಚ್ಚವಾಗುತ್ತಿದೆ.

ಸಾರಿಗೆ ಸಂಸ್ಥೆಗಳು ತಮ್ಮ ನೌಕರರ ಬಾಕಿ ವೇತನವನ್ನು ಪಾವತಿಸಲು ತೀವ್ರ ಹೆಣಗಾಡುತ್ತಿವೆ. ನೌಕರರ ಬಾಕಿ ಹಣವನ್ನು ಚುಕ್ತಾ ಮಾಡಲು ಒಟ್ಟು 1,271 ಕೋಟಿ ರೂಪಾಯಿಗಳ ಅಗತ್ಯವಿದ್ದು, ಇದರಲ್ಲಿ ಕೇವಲ 450 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇನ್ನು 821 ಕೋಟಿ ರೂ. ಗಳಷ್ಟು ದೊಡ್ಡ ಮೊತ್ತದ ಬಾಕಿಯನ್ನು ನೌಕರರಿಗೆ ನೀಡಬೇಕಿದೆ.

ಕಳೆದ 2025ರ ಜನವರಿ 5 ರಂದು ಕೊನೆಯದಾಗಿ ಬಸ್ ದರ ಪರಿಷ್ಕರಣೆ ಮಾಡಲಾಗಿತ್ತು. ಆ ಬಳಿಕ ಇಂಧನ ಮತ್ತು ಸಿಬ್ಬಂದಿ ವೆಚ್ಚ ಗಣನೀಯವಾಗಿ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯ ಎಂದು ವ್ಯವಸ್ಥಾಪಕ ಮಂಡಳಿ ವಾದಿಸಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ, ದೈನಂದಿನ ನಗದು ಸಂಗ್ರಹಣೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಉಚಿತ ಯೋಜನೆ ಆರಂಭವಾದ ಬಳಿಕ ಟಿಕೆಟ್ ಖರೀದಿಸಿ ಪ್ರಯಾಣಿಸುವವರ (ಮುಖ್ಯವಾಗಿ ಪುರುಷರು) ಪ್ರಮಾಣ ಶೇ. 48 ರಿಂದ ಕೇವಲ ಶೇ. 36 ಕ್ಕೆ ಕುಸಿದಿದೆ. ಇದರಿಂದಾಗಿ ಬಸ್ ಡಿಪೋಗಳ ದೈನಂದಿನ ನಿರ್ವಹಣಾ ವೆಚ್ಚವನ್ನು ಸರಿದೂಗಿಸುವುದು ದುಸ್ತರವಾಗಿದೆ.ಸದ್ಯ ಸರ್ಕಾರವು ಸಾರಿಗೆ ಇಲಾಖೆಯ ಆರ್ಥಿಕ ಸ್ಥಿತಿಗತಿಗಳ ವರದಿಯನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

Join WhatsApp

Join Now

Join Telegram

Join Now