ಫೆ.28 ರಿಂದ ಮಾರ್ಚ್ 17 ರವರೆಗೆ ದ್ವಿತೀಯ ಪಿಯು ಪರೀಕ್ಷೆ-1 ; ವ್ಯವಸ್ಥಿತವಾಗಿ ನಡೆಸಲು ಎಡಿಸಿ ಸೂಚನೆ

3 Min Read

ಚಿತ್ರದುರ್ಗ. ಫೆ.24:  ಇದೇ ಫೆ.28 ರಿಂದ ಮಾರ್ಚ್ 17 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1 ನಡೆಯಲಿದೆ. ಜಿಲ್ಲೆಯಲ್ಲಿ 14,281 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿದೆ.  ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಸುಗಮ ಹಾಗೂ ಗೊಂದಲ ರಹಿತವಾಗಿ ಪರೀಕ್ಷೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.

 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ಪರೀಕ್ಷೆ-01 ರ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ಈ ಹಿಂದೆ ಪರೀಕ್ಷಾ ಅಕ್ರಮ ನಡೆದರೆ ಕೇವಲ ಇಲಾಖಾ ವಿಚಾರಣೆ ನಡೆಸಿ ಅಮಾನತು ಮಾಡಲಾಗುತ್ತಿತ್ತು. ಆದರೆ ಈಗ ಪರೀಕ್ಷಾ ಅಕ್ರಮ ತಡೆಗೆ ಹೊಸ ಕಾನೂನು ಜಾರಿಗೆ ಬಂದಿದ್ದು, ತಪ್ಪಿತಸ್ಥರ ಮೇಲೆ ಎಫ್‍ಐಆರ್ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದ ಅವರು, ಮುಕ್ತ ಮತ್ತು ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರೊಂದಿಗೆ ವೆಬ್‍ಕಾಸ್ಟಿಂಗ್ ಮೂಲಕ ಬೆಂಗಳೂರಿನಿಂದಲೂ ನೇರ ನಿಗಾ ಇಡಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

 

ಜಿಲ್ಲೆಯ ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಪರೀಕ್ಷಾ ಕೇಂದ್ರದ ಒಳಗೆ ಕೊಠಡಿ ಮೇಲ್ಚಿಚಾರಕರನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿμÉೀಧಿಸಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ಸ್ಕ್ಯಾಡ್ ಸದಸ್ಯರು ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯನಿರ್ವಹಿಸಬೇಕು. ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ತರುವ ಯಾವುದೇ ಸಣ್ಣ ಲೋಪವನ್ನೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 

ಪರೀಕ್ಷಾ ಭದ್ರತೆಯ ದೃಷ್ಟಿಯಿಂದ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದ ಕೇಂದ್ರಗಳಿಗೆ ಸಾಗಿಸುವಾಗ ಮತ್ತು ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿಗೆ ತಲುಪಿಸುವಾಗ ಕಡ್ಡಾಯವಾಗಿ ಶಸ್ತ್ರಸಜ್ಜಿತ ಪೆÇಲೀಸ್ ಭದ್ರತೆ ಇರಲೇಬೇಕು. ಪರೀಕ್ಷಾ ಕೇಂದ್ರಗಳಲ್ಲಿ ತಹಶೀಲ್ದಾರ್ ನೇತೃತ್ವದ ತ್ರಿಸದಸ್ಯ ಸಮಿತಿಯು ಕಡ್ಡಾಯವಾಗಿ ಹಾಜರಿರಬೇಕು ಮತ್ತು ಯಾವುದೇ ಅಡೆತಡೆಯಿಲ್ಲದಂತೆ ಸಿಸಿಟಿವಿ ಕಾರ್ಯನಿರ್ವಹಿಸಲು ಇನ್ವರ್ಟರ್ ಅಥವಾ ಯುಪಿಎಸ್ ಬ್ಯಾಕಪ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

 

ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯ ಒದಗಿಸಿ:
ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿದ್ದು, ಇವು ಸುಸ್ಥಿತಿಯಲ್ಲಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಕುಡಿಯುವ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಗತ್ಯವಿರುವ ಬೆಂಚ್ ಮತ್ತು ಡೆಸ್ಕ್ ಗಳ ಲಭ್ಯತೆಯನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.

 

ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಫೆÇೀನ್ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಪರೀಕ್ಷಾ ಮೇಲ್ವಿಚಾರಕರಿಗೂ ಅನ್ವಯಿಸುತ್ತದೆ. ಕೇವಲ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಅವರಿಗೆ ಮಾತ್ರ ಸಂವಹನಕ್ಕಾಗಿ ಬೇಸಿಕ್ ಕೀಪ್ಯಾಡ್ ಫೆÇೀನ್ ಬಳಸಲು ಅವಕಾಶ ನೀಡಲಾಗಿದೆ. ಸ್ಮಾರ್ಟ್ ವಾಚ್ ಹಾಗೂ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದರು.

 

26 ಪರೀಕ್ಷಾ ಕೇಂದ್ರಗಳು, 14,281 ವಿದ್ಯಾರ್ಥಿಗಳು :
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ತಿಮ್ಮಯ್ಯ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಜಿಲ್ಲೆಯಲ್ಲಿ 14,281 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಈ ಪೈಕಿ 12,371 ಹೊಸ ವಿದ್ಯಾರ್ಥಿಗಳು, 1,645 ಪುನರಾವರ್ತಿತ ಅಭ್ಯರ್ಥಿಗಳು, 173 ಖಾಸಗಿ ಅಭ್ಯರ್ಥಿಗಳು ಹಾಗೂ 5 ಮಂದಿ ಅಭ್ಯರ್ಥಿಗಳು ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

 

ಚಿತ್ರದುರ್ಗ ತಾಲ್ಲೂಕಿನಲ್ಲಿ 10 ಪರೀಕ್ಷಾ ಕೇಂದ್ರಗಳು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ತಾಲ್ಲೂಕಿನಲ್ಲಿ ತಲಾ 04 ಪರೀಕ್ಷಾ ಕೇಂದ್ರಗಳು ಹಾಗೂ ಮೊಳಕಾಲ್ಮುರು ಮತ್ತು ಹೊಳಲ್ಕೆರೆ ತಾಲ್ಲೂಕಿನಲ್ಲಿ ತಲಾ 02 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 26 ಪರೀಕ್ಷಾ ಕೇಂದ್ರಗಳಿಗೆ 141 ಕಾಲೇಜುಗಳು ಟ್ಯಾಗ್ ಆಗಿವೆ ಎಂದು ತಿಳಿಸಿದರು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ವೆಬ್‍ಕಾಸ್ಟಿಂಗ್ ಇದ್ದು, ಇದರ ವೀಕ್ಷಣಾ ಕಾರ್ಯಕ್ಕೆ ಜಿಲ್ಲಾ ಪಂಚಾಯತ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಖಜಾನೆಯಲ್ಲಿ ಠೇವಣಿಸಿದ ಪ್ರಶ್ನೆ ಪತ್ರಿಕೆಗಳ ಬಂಡಲ್‍ಗಳ ವೀಕ್ಷಣೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿಸಿ ಟಿವಿ ವೀಕ್ಷಣಾ ವ್ಯವಸ್ಥೆ ದಿನದ 24ಗಂಟೆಯೂ ಇರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

 

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ್,  ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಅನಿಲ್ ನಾಗೇಗೌಡ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಶೀಲ್ದಾರ್‍ಗಳು ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದ್ದರು.

Share This Article
Enable Notifications OK No thanks