ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 22 : ಹೊಸ ವರ್ಷದ ಆಚರಣೆ ಸಂಭ್ರಮದಲ್ಲಿ ನಮ್ಮ ನೆಲದ ಸಂಸ್ಕøತಿಯನ್ನು ಮರೆಯಬಾರದೆಂದು ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಸಮೃದ್ದಿ ಮಹಿಳಾ ಸಂಸ್ಥೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಲಯನ್ಸ್ ಕ್ಲಬ್ ಚಿತ್ರದುರ್ಗ ರಾಕ್ ಫೋರ್ಟ್, ವಿದ್ಯಾದಾಯಿನಿ ವಿದ್ಯಾಸಂಸ್ಥೆ, ಸಮೃದ್ದಿ ಮಹಿಳಾ ಸಂಸ್ಥೆ ಇವರುಗಳ ಸಹಯೋಗದೊಂದಿಗೆ ವಿದ್ಯಾನಗರದಲ್ಲಿರುವ ವಿದ್ಯಾದಾಯಿನಿ ಶಾಲೆಯಲ್ಲಿ ಚಿಣ್ಣರು ಮತ್ತು ಸಿಬ್ಬಂದಿಯೊಂದಿಗೆ ಆಚರಿಸಿದ ಹೊಸ ವರ್ಷ-ಹರ್ಷ ಹಾಗೂ ಸಂಕ್ರಾಂತಿ ಸಡಗರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಕ್ರಾಂತಿಯೆಂದರೆ ಎಳ್ಳು-ಬೆಲ್ಲ ಸವಿದು ಒಳ್ಳೆ ಮಾತಾಡೋಣ ಎನ್ನುವ ಪ್ರತೀತಿಯಿದೆ. ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ಹಾಗಾಗಿ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಚಿಣ್ಣರಲ್ಲಿ ಮನವಿ ಮಾಡಿದರು.
ಲಯನ್ಸ್ ಕ್ಲಬ್ ಚಿತ್ರದುರ್ಗ ರಾಕ್‍ಫೋರ್ಟ್ ಸದಸ್ಯೆ ಕೆ.ಸಿ.ವೀಣಾ ಮಾತನಾಡಿ ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಅಡಿಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ನೆರವಾಗಲಿದೆ. ದೇಶದ ಭವಿಷ್ಯ ಯುವ ಜನಾಂಗದ ಮೇಲೆ ನಿಂತಿರುವುದರಿಂದ ಶಿಕ್ಷಣದ ಜೊತೆ ಮಕ್ಕಳಲ್ಲಿ ಸಂಸ್ಕಾರವನ್ನು ಕಲಿಸುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ ಎಂದು ತಿಳಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು.
ವಿದ್ಯಾದಾಯಿನಿ ಸಂಸ್ಥೆ ಕಾರ್ಯದರ್ಶಿ ಗೋಪಾಲಪ್ಪ ಎಚ್. ಮಾತನಾಡುತ್ತ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾದಾಯಿನಿ ಶಾಲೆಗೆ ದಾಖಲಾಗುತ್ತಿದ್ದು, ಎಲ್ಲಾ ರಂಗದಲ್ಲಿಯೂ ಪೈಪೋಟಿಯಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಮತ್ತು ಕೆಸಿಇಟಿ ಪರೀಕ್ಷೆಗಳಿಗೆ ಪೂರ್ವಭಾವಿಯಾಗಿ ಫೌಂಡೇಶನ್ ತರಗತಿಗಳನ್ನು ಶಾಲೆಯ ವತಿಯಿಂದ ನಡೆಸುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಲಯನ್ಸ್ ಕ್ಲಬ್ ಚಿತ್ರದುರ್ಗ ರಾಕ್ ಫೋರ್ಟ್ ಅಧ್ಯಕ್ಷ ಕೆ.ಎಸ್.ವಿಜಯ ಮಾತನಾಡಿ ನಮ್ಮ ನೆಲದ ಸಂಸ್ಕøತಿಯಂತೆ ಹೊಸ ವರ್ಷವನ್ನು ಆಚರಿಸಬೇಕು. ಕ್ರಾಂತಿಕಾರಿ ಬಸವಣ್ಣ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇನ್ನು ಅನೇಕ ಮಹಾನ್ ಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಕ್ರಾಂತಿ ಹೊಸ ವರ್ಷದ ಮೊದಲ ಹಬ್ಬವಾಗಿದ್ದು, ಸುಗ್ಗಿ ಹಬ್ಬವೆಂತಲೂ ಕರೆಯಲಾಗುವುದು. ದೇಶಕ್ಕೆ ಅನ್ನ ನೀಡುವ ರೈತನನ್ನು ಗೌರವಿಸಬೇಕು.ವಿದ್ಯಾದಾಯಿನಿ ಶಾಲೆಯ ಸಮಗ್ರ ಅಭಿವೃದ್ದಿಗೆ ಲಯನ್ಸ್ ಕ್ಲಬ್ ಚಿತ್ರದುರ್ಗದ ವತಿಯಿಂದ ಸಂಪೂರ್ಣವಾದ ಬೆಂಬಲ ನೀಡುವುದಾಗಿ ಭರವಸೆ ಕೊಟ್ಟರು.
ವಿದ್ಯಾದಾಯಿನಿ ವಿದ್ಯಾಸಂಸ್ಥೆ ಅಧ್ಯಕ್ಷೆ ಕೆ.ವಿಜಯಲಕ್ಷ್ಮಿ, ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಯಾಸ್ಮಿನ್‍ತಾಜ್ ಸ್ವಾಗತಿಸಿದರು. ಶಿಕ್ಷಕಿ ಹರ್ಷ ವಂದಿಸಿದರು. ಶಶಿಕಲ ನಿರೂಪಿಸಿದರು.


















