ಚಿತ್ರದುರ್ಗ | ವಿದ್ಯಾ ವಿಕಾಸ ವಿದ್ಯಾ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ

2 Min Read

ಸುದ್ದಿಒನ್, ಚಿತ್ರದುರ್ಗ, ಜನವರಿ. 14 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಸಂಕ್ರಾಂತಿ ಹಬ್ಬ”ವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಐಸಿಎಸ್‍ಸಿ ವಿಭಾಗದ 1 ರಿಂದ 4ನೇ ತರಗತಿಯ ಮಕ್ಕಳೆಲ್ಲರು ಆಕರ್ಷಕ ಸಾಂಪ್ರದಾಯಕ ಉಡುಪುಗಳಲ್ಲಿ ತುಂಬಾ ಸಂತೋಷದಿಂದ ಸಂಕ್ರಾಂತಿ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಗೆ ಚಿತ್ರದುರ್ಗದ ರೋಟರಿಯನ್ ಆಗಿರುವ ಶ್ರೀಮತಿ ಗಾಯಿತ್ರಿ ಶಿವರಾಂ ಅವರು, ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್, ನಿರ್ದೇಶಕರಾದ ಶ್ರೀಮತಿ ಸುನೀತಾ ವಿಜಯ ಕುಮಾರ್. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಸ್.ಎಮ್.ಪೃಥ್ವೀಶರವರೊಂದಿಗೆ “ಸಂಕ್ರಾಂತಿ ಸಂಭ್ರಮ”ಕ್ಕೆ “ಗೋಪೂಜೆಯನ್ನು”ಯನ್ನು ನೆರವೇರಿಸವುದುರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.


ಇದರ ನಂತರ ಹಳ್ಳಿಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಒಕ್ಕಣಿ ಮಾಡಿದ ಧವಸ-ಧಾನ್ಯಗಳನ್ನು ರಾಶಿ ಮಾಡಿ “ರಾಶಿಪೂಜೆ” ಮಾಡುವಂತೆ ಇಲ್ಲಿಯೂ ಕೂಡ ಕಾಳುಗಳ ರಾಶಿ ಪೂಜೆ ಮಾಡಲಾಯಿತು.

 

ತದನಂತರ ವಿವಿಧ ತರಗತಿಯ ಮಕ್ಕಳು ಸಿಹಿ ಪೊಂಗಲ್ ಮಾಡುವುದು, ಕಾಳುಗಳನ್ನು ಮರಗಳಲ್ಲಿ ಹಸನು ಮಾಡುವುದು, ಬೀಸೋ ಕಲ್ಲಿನಲ್ಲಿ ಬೀಸುವುದು, ರಂಗೋಲಿ ಬಿಡಿಸುವುದು ಹೀಗೆ ಅನೇಕ ಬಗೆಯ ಹಳ್ಳಿಯ ಸೊಗಡನ್ನು ಬೀರುವ ಚಟುವಟಿಕೆಗಳನ್ನು ಪ್ರದರ್ಶಿಸಿದರು, ಇವೆಲ್ಲವನ್ನು ಪೋಷಕರು ನೋಡಿ ಕಣ್ತುಂಬಿಕೊಂಡರು.

 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀಮತಿ ಗಾಯ್ರತಿ ಶಿವರಾಂ ಅವರು ಮಾತನಾಡಿ
“ಸಂಕ್ರಾಂತಿ” ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಗಳಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಅತೀ ವಿಶೇಷವಾಗಿದೆ. ಅಂದು ನಮ್ಮ ಮನೆಯ ಪುಟಾಣಿ ಹೆಣ್ಣು ಮಕ್ಕಳೆಲ್ಲರೂ ಬಣ್ಣ ಬಣ್ಣದ ಉಡುಗೆ ಧರಿಸಿ ಸಂಜೆ ಮನೆಗೆ ಮನೆಗೆ ಹೋಗಿ ಎಳ್ಳು ಬೀರುವುದು ವಾಡಿಕೆ. “ಎಳ್ಳು-ಬೆಲ್ಲ ತಿಂದು, ಒಳ್ಳೊಳ್ಳೆ ಮಾತಾಡಿ” ಎನ್ನುತಾ ಖುಷಿ ಪಡುತ್ತಾರೆ ಎಂದು ನುಡಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್‌ರವರು ಮಾತನಾಡುತ್ತಾ, ಇಂದು ನಮ್ಮ ಪುಟಾಣಿ ಮಕ್ಕಳೆಲ್ಲರೂ ಸಂಭ್ರಮದಿಂದ ಸಂಕ್ರಾಂತಿಯನ್ನು ಆಚರಿಸುತ್ತಿದ್ದಾರೆ. ಇದನ್ನು ನೋಡುವುದೇ ಒಂದು ಆನಂದ ಎಂದರು.


ನಂತರ ವೇದಿಕೆಯ ಬಲಭಾಗದಲ್ಲಿ ಮಕ್ಕಳೇ ತಮ್ಮ ತಮ್ಮ ಅಂಗಡಿಗಳಲ್ಲಿ ಕುಳಿತು ಸಿಹಿ ತಿಂಡಿಗಳು ಹಾಗೂ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಶಿಕ್ಷಕ ವೃಂದದವರು ಮತ್ತು ಪೋಷಕರು, ಮಕ್ಕಳ ಅಂಗಡಿಗಳಲ್ಲಿ ಖುಷಿಯಿಂದ ವ್ಯಾಪಾರ ಮಾಡಿ ಸಂತೋಷಪಟ್ಟರು.
ಸಂಕ್ರಾಂತಿಯ ಒಂದು ಭಾಗವಾದ ಮಕ್ಕಳು “ಗಾಳಿ ಪಟಗಳನ್ನು ಹಾರಿಸುವುದನ್ನು” ಪೋಷಕರೆಲ್ಲರು ನೋಡಿ ಆನಂದಿಸಿದರು.

ವೇದಿಕೆಯ ಮೇಲೆ ಸಭಾ ಕಾರ್ಯಕ್ರಮದ ನಂತರ 1 ರಿಂದ 4ನೇ ತರಗತಿಯ ಮಕ್ಕಳು ಅನೇಕ ಜಾನಪದ ಸೊಗಡನ್ನು ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅಂತಿಮವಾಗಿ ಸಂಕ್ರಾಂತಿ ಸಂಭ್ರಮದ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಮಾರಿ ಶ್ರಾವ್ಯ ಪ್ರಾರ್ಥಿಸಿದರು, ಶ್ರೇಯಾ ಮತ್ತು ಮಯೂಕ್ ನಿರೂಪಿಸಿದರು, ಆರ್ನ
ಸ್ವಾಗತಿಸಿದರು, ಸಾಯಿ ಸಮಸ್ಥಿತ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಐಸಿಎಸ್‍ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ ಎನ್.ಜಿ.ತಿಪ್ಪೇಸ್ವಾಮಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Share This Article
Enable Notifications OK No thanks