ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಸರ್ಕಾರ ಮದ್ಯಪಾನ ನಿಯಂತ್ರಣದ ವಿಚಾರದಲ್ಲಿ ದ್ವಂದ್ವ ನೀತಿಯನ್ನು ಅನುಸರಿಸುವುದನ್ನು ನಿಲ್ಲಿಸಬೇಕು. ಒಂದೆಡೆ ಮದ್ಯ ಮಾರಾಟದ ಮೂಲಕ ಆದಾಯ ಗಳಿಸುತ್ತಾ, ಮತ್ತೊಂದೆಡೆ ಮದ್ಯಪಾನ ನಿಯಂತ್ರಣಕ್ಕಾಗಿ ಜಾಗೃತಿ ಮೂಡಿಸುವುದು ಸಮಂಜಸವಲ್ಲ. ಸರ್ಕಾರ ದ್ವಂದ್ವ ನೀತಿಯಿಂದ ಹೊರಬಂದು, ಮದ್ಯ ಮಾರಾಟವನ್ನು ನಿಲ್ಲಿಸಬೇಕು ಅಥವಾ ಮದ್ಯಪಾನ ಸಂಯಮ ಮಂಡಳಿಯನ್ನು ರದ್ದುಗೊಳಿಸಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಗ್ರಹಿಸಿದರು.
‘ಸರ್ವೋದಯಕ್ಕಾಗಿ ಮದ್ಯಪಾನ ನಿಯಂತ್ರಣ ಸಮಾಲೋಚನೆಯ ದುಂಡುಮೇಜಿನ ಪರಿಷತ್’ನಲ್ಲಿ ಆಶೀರ್ವಚನ ನೀಡಿದ ಅವರು, ಮದ್ಯಪಾನದ ದುಷ್ಪರಿಣಾಮಗಳ ಕುರಿತು ಜನಸಾಮಾನ್ಯರು, ಸಂಘ-ಸಂಸ್ಥೆಗಳು ಹಾಗೂ ಮಠ-ಮಾನ್ಯಗಳು ಜಾಗೃತಿ ಮೂಡಿಸುವುದು ಅಗತ್ಯ. ಆದರೆ, ಅದಕ್ಕೂ ಮೊದಲು ಸರ್ಕಾರವೇ ಮದ್ಯಪಾನದ ನಿಯಂತ್ರಣದ ಕುರಿತು ಗಂಭೀರವಾಗಿ ಚಿಂತಿಸಿ, ಜಾಗೃತಗೊಳ್ಳಬೇಕಿದೆ ಎಂದರು.
ಸರ್ಕಾರ ಆದಾಯ ಗಳಿಸುವ ಉದ್ದೇಶದಿಂದ ಮದ್ಯದ ಅಂಗಡಿಗಳಿಗೆ ವ್ಯಾಪಕವಾಗಿ ಅವಕಾಶ ನೀಡುತ್ತಿದೆ. ಮತ್ತೊಂದೆಡೆ, ಮದ್ಯಪಾನ ನಿಯಂತ್ರಣ ಹಾಗೂ ಜನಜಾಗೃತಿಗಾಗಿ ಮಂಡಳಿಗೆ ಜವಾಬ್ದಾರಿ ನೀಡುತ್ತಿದೆ. ಮದ್ಯ ಮಾರಾಟವನ್ನು ಉತ್ತೇಜಿಸುವ ನೀತಿ ಮತ್ತು ಮದ್ಯಪಾನವನ್ನು ನಿಯಂತ್ರಿಸುವ ಪ್ರಯತ್ನಗಳು ಪರಸ್ಪರ ವಿರುದ್ಧವಾಗಿವೆ. ಇದು ಸರ್ಕಾರದ ದ್ವಂದ್ವ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಗಾಂಜಾ, ಅಫೀಮು ಹಾಗೂ ಇತರ ಮಾದಕ ವಸ್ತುಗಳ ವಿರುದ್ಧ ಜಾರಿಯಲ್ಲಿರುವ ಕಠಿಣ ಕಾನೂನುಗಳ ಮಾದರಿಯಲ್ಲಿ ಮದ್ಯಪಾನದ ದುಷ್ಪರಿಣಾಮಗಳ ನಿಯಂತ್ರಣಕ್ಕೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಅಬಕಾರಿ ಆದಾಯವನ್ನೇ ಸರ್ಕಾರದ ಪ್ರಮುಖ ಆದಾಯದ ಮೂಲವನ್ನಾಗಿ ಪರಿಗಣಿಸುವ ಬದಲು, ಪರ್ಯಾಯ ಆದಾಯದ ಮೂಲಗಳನ್ನು ಕಂಡುಕೊಳ್ಳುವ ಕುರಿತು ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.
ಜನಸಾಮಾನ್ಯರ ಆರೋಗ್ಯ ರಕ್ಷಣೆ, ಸುಖ-ಸಂತೋಷ ಹಾಗೂ ಸಾತ್ವಿಕ ಪರಿಸರ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಮದ್ಯಪಾನ ಸಂಯಮ ಮಂಡಳಿಗೆ ಬಲ ತುಂಬಿ, ಮದ್ಯಪಾನದ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು. ಜನಹಿತದ ದೃಷ್ಟಿಯಿಂದ ‘ಮದ್ಯಪಾನ ಸಂಯಮ ಮಂಡಳಿ ಉಳಿಸಿ, ಅಬಕಾರಿ ಇಲಾಖೆ ಅಳಿಸಿ’ ಎಂಬ ಆಶಯದೊಂದಿಗೆ ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ಶ್ರೀಗಳು ಕರೆ ನೀಡಿದರು.











