ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಪ್ರಯುಕ್ತ ಅಕ್ಟೋಬರ್ 23 ರಂದು ಮತದಾನ ನಿಗದಿಯಾಗಿದ್ದು, ಅಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಜರುಗಲಿದೆ. ಮತದಾನದ ವೇಳೆ ಮತದಾರರ ಗುರುತಿನ ಚೀಟಿ ಲಭ್ಯವಿಲ್ಲದಿದ್ದಲ್ಲಿ ಮತದಾನಕ್ಕೆ ಪರ್ಯಾಯವಾಗಿ ಬಳಸಬಹುದಾದ ಅಧಿಕೃತ ದಾಖಲೆಗಳ ಪಟ್ಟಿಯನ್ನು ಭಾರತ ಚುನಾವಣಾ ಆಯೋಗ ಪ್ರಕಟಿಸಿದೆ.
ಮತದಾರರು ಮತಗಟ್ಟೆಗೆ ಬಂದಾಗ ತಮ್ಮ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಹಕ್ಕು ಚಲಾಯಿಸುವುದು ಕಡ್ಡಾಯವಾಗಿದೆ. ಆದರೆ, ಒಂದು ವೇಳೆ ಯಾವುದೇ ಮತದಾರರ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದ ಪಕ್ಷದಲ್ಲಿ, ಮತದಾನದಿಂದ ವಂಚಿತರಾಗುವುದನ್ನು ತಪ್ಪಿಸಲು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಈ ಕೆಳಗಿನ ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ.
ಪರ್ಯಾಯ ಗುರುತಿನ ದಾಖಲೆಗಳ ವಿವರ
ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಭಾರತೀಯ ಪಾಸ್ಪೋರ್ಟ್, ಸೇವಾ ಗುರುತಿನ ಚೀಟಿಗಳಾದ ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆಗಳು, ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಕೈಗಾರಿಕಾ ಸಂಸ್ಥೆಗಳು ತಮ್ಮ ನೌಕರರಿಗೆ ನೀಡಿರುವ ಅಧಿಕೃತ ಸೇವಾ ಗುರುತಿನ ಚೀಟಿ.
ಅದೇ ರೀತಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ. ಶಿಕ್ಷಕರ ಅಥವಾ ಪದವೀಧರರ ಕ್ಷೇತ್ರದ ಮತದಾರರು ಕರ್ತವ್ಯ ನಿರ್ವಹಿಸುತ್ತಿರುವ ಸಂಬAಧಿತ ಶಿಕ್ಷಣ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ. ವಿಶ್ವವಿದ್ಯಾಲಯವು ನೀಡಿರುವ ಮೂಲ ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ.
ಇದಲ್ಲದೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಥವಾ ಸಕ್ಷಮ ಪ್ರಾಧಿಕಾರವು ನೀಡಿರುವ ವಿಶಿಷ್ಟ ಅಂಗವಿಕಲತಾ ಗುರುತಿನ ಚೀಟಿ (ಯುಡಿಐಡಿ ಕಾರ್ಡ್).
ಅರ್ಹ ಮತದಾರರು ಈ ಎಲ್ಲಾ ಪರ್ಯಾಯ ದಾಖಲೆಗಳನ್ನು ಸದ್ಬಳಕೆ ಮಾಡಿಕೊಂಡು ಯಾವುದೇ ಗೊಂದಲವಿಲ್ಲದೆ ನಿಗದಿತ ಸಮಯದಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಪ್ರಕಟಣೆ ತಿಳಿಸಿದೆ.












